• March 26, 2026
  • Last Update March 24, 2026 3:28 pm
  • Brahmavara

ಸಾರ್ವಜನಿಕರಿಂದಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟಿಪ್ಪರ್, ಹಿಟಾಚಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ

ಸಾರ್ವಜನಿಕರಿಂದಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟಿಪ್ಪರ್, ಹಿಟಾಚಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ,ಅ.೨೮: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯ ಕುರಿತು ಚರ್ಚಿಸಲು ಹಾಗೂ ಸೆ.೪ರಂದು ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಕುರಿತು ರಾಷ್ಟ್ರೀಯ ಹೆದ್ದಾರಿ -66 ಹೋರಾಟ ಸಮಿತಿಯ ವತಿಯಿಂದ ಬ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಇಂದು ಸಭೆ ನಡೆಯಿತು. ನಂತರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸಾರ್ವಜನಿಕರ ಸಹಕಾರದಿಂದ ನಡೆಸಲಿರುವ sಸರ್ವಿಸ್ ರಸ್ತೆ ರಚನೆಗೆ ಟಿಪ್ಪರ್, ಜೆಸಿಬಿ ಮತ್ತು ಹಿಟಾಚಿಗಳನ್ನು ಒದಗಿಸಲು ಸೂಚಿಸುವಂತೆ ರಾಷ್ಟ್ರೀಯ ಹೆದ್ದಾರಿ -೬೬ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು.


ಈ ಸಂದರ್ಭ ಹೋರಾಟ ಸಮಿತಿಯ ಸಂಚಾಲಕ ಗೋವಿಂದರಾಜ್ ಹೆಗ್ಡೆಯವರು ಮಾತನಾಡಿ ಬ್ರಹ್ಮಾವರದಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವುದು, ಈಗಿರುವ ಕ್ಯಾಟಲ್ ಪಾಸ್ ತೆಗೆದು ಪ್ಲೈಓವರ್ ನಿರ್ಮಿಸುವುದು ಮತ್ತು ಇನ್ನಿತರ ಬೇಡಿಕೆಗಳ ಕುರಿತು ಸಾಕಷ್ಟು ಬಾರಿ ಮನವಿಯನ್ನು ನೀಡಿದ್ದು ಅ.೩೦ರೊಳಗೆ ನಮ್ಮ ಬೇಡಿಕೆಗಳ ಕುರಿತಾದ ಸ್ಪಷ್ಟ ಚಿತ್ರಣ ಸಿಗದೆ ಇದ್ದಲ್ಲಿ ಸೆ.೪ರಂದು ಬ್ರಹ್ಮಾವರ ಬಂದ್ ಮತ್ತು ಸಾರ್ವಜನಿಕರ ಸಹಕಾರದಿಂದ ಶ್ರಮದಾನದ ಮೂಲಕ ಸರ್ವಿಸ್ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಉಪ್ಪಿನಕೋಟೆ ಫಾರ್ಚೂನ್ ಹೊಟೇಲ್‌ನಿಂದ ಧರ್ಮಾವರ ಅಡಿಟೋರಿಯಂವರೆಗೆ ಸರ್ವಿಸ್ ರಸ್ತೆ ರಚಿಸಲು ಉದ್ದೇಶಿಸಿದ್ದು. ನಮಗೆ ಅಗತ್ಯವಿರುವ ಟಿಪ್ಪರ್, ಜೆಸಿಬಿ ಮತ್ತು ಹಿಟಾಚಿಗಳನ್ನು ನೀಡಲು ಎನ್‌ಎಚ್.ಎ.ಐ ಅಥವಾ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದರು. ಜಿಲ್ಲಾಧಿಕಾರಿಯವರು ಉತ್ತರಿಸಿ ಎನ್.ಎಚ್.ಐ.ಎಯವರು ಹಾಗೂ ಸಂಸದರು ಈ ಕುರಿತು ಪ್ರಯತ್ನದಲ್ಲಿದ್ದು ನಿಮ್ಮ ಬೇಡಿಕೆ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ, ಆಶ್ರಯ ಹೋಟೆಲ್ ಮಾಲಕ ರಾಜಾರಾಮ ಶೆಟ್ಟಿ, ದಯಾನಂದ ಶೆಟ್ಟಿ ಹಾರಾಡಿ, ಕಟ್ಟಡ ಕಾರ್ಮಿಕರ ಸಂಘದ ಸುಭಾಶ್ ಹಾಗೂ ಸದಸ್ಯರು, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ಶಶಿಧರ ಗೊಲ್ಲ, ಗಣೇಶ್ ಶ್ರೀಯಾನ್, ಟೆಂಪೋ ಮಾಲಕರ ಸಂಘದ ಸಂತೋಷ ಪೂಜಾರಿ, ಡೆರಿಕ್ ಡಿ’ಸೋಜ, ಎಸ್.ಎಮ್.ಸಂಸ್ಥೆಯ ಅಲ್ವಾರಿಸ್ ಡಿ’ಸಿಲ್ವಾ, ರಿಕ್ಷಾ ಚಾಲಕ ಮಾಲಕ ಸಂಘದ ರಾಜು ಪೂಜಾರಿ ಹಾಗೂ ಸದಸ್ಯರು ಮತ್ತು ರಾಷ್ಟ್ರೀಯ ಹೆದ್ದಾರಿ -೬೬ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page