ಉಡುಪಿಮಿತ್ರ ಪತ್ರಿಕೆ ಸುದ್ದಿ:
ಉಡುಪಿ, ಜ.೧:
ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕು ಪತ್ರ ವಿತರಿಸುವಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಭೆ ನಡೆಸಿ ತಿಂಗಳೊಳಗೆ ಇಲ್ಲಿನ ಜನರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅನೇಕ ವರ್ಷಗಳಿಂದ ಇಲ್ಲಿಯ ಜನರು ಹಕ್ಕು ಪತ್ರಗಳಿಗಾಗಿ ಒತ್ತಾಯಿಸುತ್ತಲೇ ಬಂದಿದ್ದು ಚುನಾವಣೆಯ ಸಂದರ್ಭವೂ ರಾಜಕೀಯ ಪಕ್ಷಗಳು ಇದೇ ವಿಷಯ ಮುಂದಿಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡಿದ್ದವು. ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿದರೂ ಅಧಿಕಾರಿಗಳು ಸಿಆರ್‌ಝಡ್ ಸಮಸ್ಯೆ, ಪರಂಬೋಕು ವಿರಹಿತಗೊಳಿಸದೇ ಇರುವ ಕಾರಣಗಳನ್ನು ಮುಂದಿಟ್ಟುಕೊಂಡು ಹಕ್ಕು ಪತ್ರ ನೀಡದೆ ಮುಂದೂಡುತ್ತಲೇ ಬಂದಿದ್ದಾರೆ. ಇದರಿಂದ ಇಲ್ಲಿರುವ 491 ಕುಟುಂಬಗಳಿಗೆ ಸಮಸ್ಯೆ ಆಗಿದೆ. ಇವರೆಲ್ಲ ಹೊಸ ಬೆಂಗ್ರೆ ಮತ್ತು ಬೆಂಗ್ರೆ ಪ್ರದೇಶದಲ್ಲಿ ವಾಸವಿದ್ದು ಇವರ ಭೂಮಿಯನ್ನು ಸಕ್ರಮೀಕರಣಗೊಳಿಸುವ ಬಗ್ಗೆ ಅರ್ಜಿ ನೀಡಿದ್ದರು. ಒಟ್ಟು ೪೯೧ ಪ್ರಕರಣಗಳಲ್ಲಿ ರುದ್ರಭೂಮಿ, ಸ್ಮಶಾನ, ಅಂಗನವಾಡಿ, ಗ್ರಾಮ ಪಂಚಾಯತ್, ಅಂಗಡಿ ಕಟ್ಟಡ, ಶಾಲೆ ಇತರ ಸರ್ಕಾರದ ಆಸ್ತಿಗಳು ಇರುತ್ತವೆ. ಇವುಗಳಲ್ಲಿ ೩೮೫ ಪ್ರಕರಣಗಳು ಅನುಮತಿ ನೀಡಲು ಬಾಕಿ ಇದ್ದು ಈಗಾಗಲೆ ಮೀನುಗಾರಿಕಾ ಉಪನಿರ್ದೇಶಕರು, ಪ್ರಾದೇಶಿಕ ನಿರ್ದೇಶಕರ ಕಚೇರಿ ಇವರ ವರದಿಯಂತೆ ಕರಾವಳಿ ನಿಯಂತ್ರಣ ವಲಯದ ೮೬ ಪ್ರಕರಣಗಳಿಗೆ ಸಕ್ರಮೀಕರಣಗೊಳಿಸಲು ನಿರಾಪೇಕ್ಷಣಾ ಪತ್ರವನ್ನು ನೀಡಲಾಗಿದೆ. ಶುಲ್ಕ ಪಾವತಿಸಲು ೫೩ ಪ್ರಕರಣಗಳಿಗೆ ನೋಟೀಸು ನೀಡಿದ್ದು ಶುಲ್ಕ ಪಾವತಿಸಿದ ೨೮ ಜನರಿಗೆ ಈಗಾಗಲೆ ತಹಶೀಲ್ದಾರರು ಹಕ್ಕು ಪತ್ರ ನೀಡಿರುತ್ತಾರೆ.
ಉಳಿದ ಪ್ರಕರಣಗಳಿಗೆ ಹಕ್ಕುಪತ್ರ ನೀಡುವ ಕುರಿತು ಬ್ರಹ್ಮಾವರ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಸಮಿತಿಯಿಂದ 89 ಪ್ರಕರಣಗಳಿಗೆ ಶುಲ್ಕ ಪಾವತಿಸಲು ನೋಟೀಸು ನೀಡಿದ್ದರು. ಅದರಲ್ಲಿ ಶುಲ್ಕ ಪಾವತಿಸಿದ 30 ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗಿದೆ. 59 ಪ್ರಕರಣಗಳಿಗೆ ಶುಲ್ಕ ಪಾವತಿಸಲು ಬಾಕಿ ಇದ್ದು 8 ಪ್ರಕರಣಗಳಿಗೆ ಆಕ್ಷೇಪ ಇದೆ. 288 ಪ್ರಕರಣಗಳು ಹಕ್ಕು ಪತ್ರ ನೀಡಲು ಬಾಕಿ ಇದ್ದು 155 ಪ್ರಕರಣಗಳಲ್ಲಿ ಪರಂಬೋಕು ವಿರಹಿತಗೊಳಿಸಲು ಬಾಕಿ ಇದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಿ ಹಕ್ಕುಪತ್ರ ವಿತರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ. , ಅಪರ ಜಿಲ್ಲಾಧಿಕಾರಿ ಹಬೀದ್ ಗದ್ಯಾಳ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಹಾಯಕ ಕಮೀಷನರ್ ರಶ್ಮಿ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ, ಪ್ರಭಾಕರ ಕುಂದರ್ ಕೋಡಿ ಕನ್ಯಾನ ಹಾಗೂ ಸ್ಥಳಿಯ ಮುಖಂಡರು ಭಾಗವಹಿಸಿದ್ದರು.



