ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅಮಾಸೆಬೈಲು ಕಡವಾಸೆ ಶ್ರೀ ಖರೇಶ್ವರ ದೇವಸ್ಥಾನ ಸಂಪೂರ್ಣ ನಾಶಗೊಂಡಿದ್ದು ಇದೀಗ ತಟ್ಟುವಟ್ಟು ಜೋಯಿಸರ ಮಾರ್ಗದರ್ಶನದಲ್ಲಿ ಸುಮಾರು 60ಲಕ್ಷ ವೆಚ್ಚದಲ್ಲಿ ಸುಂದರ ಶಿಲಾಮಯ ಗುಡಿಯಾಗಿ ನಿರ್ಮಾಣಗೊಂಡಿದೆ. ಶಿಲಾಮಯ ಗರ್ಭಗುಡಿ, ಶಿಲಾಮಯ ತೀರ್ಥಮಂಟಪ, ನಾಗದೇವರ ಶಿಲಾ ಪೀಠ ಹಾಗೂ ತೀರ್ಥ ಬಾವಿಯನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿ ಮಾರ್ಚ್ 15 ಹಾಗೂ ಮಾರ್ಚ್16ರಂದು ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿ಼ಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಬ್ರಹ್ಮಾವರ, ಮಾ.೫: ಶ್ರೀ ಖರೇಶ್ವರ ದೇವಸ್ಥಾನ ಕಡವಾಸಿ ಅಮಾವಾಸ್ಯೆಬೈಲು ಇಲ್ಲಿ ಮಾರ್ಚ್ ೧೫ ಮತ್ತು ಮಾರ್ಚ್೧೬ರಂದು ಪುನಃ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಮಾರ್ಚ್ 15 ರಂದು ಬೆಳಿಗ್ಗೆ ಗಂಟೆ 8 ರಿಂದ ಗಣಹೋಮ, ನವಗ್ರಹ ಹೋಮ, ಗೇಹ ಪರಿಗ್ರಹ, ಬಿಂಬ ಪರಿಗ್ರಹ, ಬಿಂಬ ಶುದ್ಧಾದಿಗಳು ಸಂಜೆ ಗಂಟೆ ೫.೦೦ ರಿಂದ ಸ್ಥಾನ ಶುದ್ಧಿ, ಪ್ರಸಾದ ಶುದ್ದಿ, ವಾಸ್ತು ಪೂಜಾ ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಶಾ ಹೋಮ, ದಿಗ್ ಬಲಿದಾನ, ಅಧಿವಾಸ ಪೂಜಾ, ಪ್ರತಿಷ್ಠಾಧಿವಾಸ ಹೋಮ, ಶಯ್ಯೋ ಕಲ್ಪಾರಾಧನಾ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 16.03.2026 ರಂದು ಸೋಮವಾರ ಬೆಳಿಗ್ಗೆ ಗಂಟೆ 8ರಿಂದ ಗುರು ಗಣಪತಿ ಪೂಜಾ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಮಧುಪರ್ಕ ಪೂಜಾ ಸಮುಹೂರ್ತದಲ್ಲಿ ಶ್ರೀ ಖರೇಶ್ವರ ದೇವರ ರತ್ನನ್ಯಾಸ ಪೂರ್ವಕ ಅಷ್ಟಬಂಧ ಪ್ರತಿಷ್ಠಾ, ಜೀವ ಕುಂಭಾಭಿಷೇಕ, ಪ್ರತಿಷ್ಠ್ಠಾ ಕುಂಭಾಭಿಷೇಕ, ಮಹಾಪ್ರಾಣ, ಪ್ರತಿಷ್ಠಾ ನ್ಯಾಸಾಧಿಗಳು ಶಿಖರ ಪ್ರತಿಷ್ಠಾ, 108ಪರಿಕಲಶ ಸಹಿತ ಪ್ರಧಾನ ಬ್ರಹ್ಮಕುಂಭ ಸ್ಥಾಪನಾ, ಕಲಾತತ್ವ ಹೋಮ ಪೂರ್ವಕ ಪ್ರಧಾನ ಅಧಿವಾಸ ಹೋಮ, ಪ್ರಾಯಶ್ಚಿತ್ತ ಹೋಮಾದಿಗಳು ಮಧ್ಯಾಹ್ನ ಗಂಟೆ 12.00 ರಿಂದ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಧಾರ್ಮಿಕ ಸಭೆ, ದಾನಿಗಳಿಗೆ ಗೌರವ ಸಮರ್ಪಣೆ, ಮಧ್ಯಾಹ್ನ ೧೨:೩೦ ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಗೌರವಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಹಾಗೂ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ ಕಾನ್‌ಬೈಲು ಕೋರಿಕೊಂಡಿದ್ದಾರೆ.

ದೇವಸ್ಥಾನದ ಹಿನ್ನೆಲೆ :
ಈ ದೇವಸ್ಥಾನಕ್ಕೆ ವಿಶೇಷ ಹಿನ್ನೆಲೆಯಿದೆ. ಕ್ಷೇತ್ರ ಮಹಾತ್ಮೆಯು ಪದ್ಮ ಪುರಾಣದ ಪುಷ್ಕರ ಖಂಡದಲ್ಲಿ ಸಂಸ್ಕೃತ ಶ್ಲೋಕಗಳಲ್ಲಿದೆ. ಕಲಿಯುಗ ಪೂರ್ವದಲ್ಲಿ ಖರಾ ಹಾಗೂ ರಟ್ಟಾಸುರರೆಂಬ ಸಹೋದರ ರಕ್ಕಸರು ತಮ್ಮ ತಂದೆಯನ್ನು ಕೊಂದ ದೇವೇಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡಿ ಯಾರಿಂದಲೂ ಯಾವ ಕಾಲದಲ್ಲಿಯೂ ಮರಣ ಸಂಭವಿಸದಂತೆ ವರ ಪಡೆದಿದ್ದರು. ಒಂದು ವೇಳೆ ಹರಿಹರರು ಒಂದೇ ಶರೀರವಾಗಿ ಬಂದು ನಮ್ಮಲ್ಲಿ ಕಾದಾಡಿದರೆ ಮಾತ್ರ ಮರಣ ಸಂಭವಿಸಲೆಂದು ವರಗಳನ್ನು ಪಡೆದಿದ್ದರು. ವರಬಲದಿಂದ ಸೊಕ್ಕಿದ ಖರಾರಟ್ಟಾಸುರರನ್ನು ಸಂಹರಿಸಲು ಇಂದ್ರಾದಿ ದೇವತೆಗಳಿಂದ ಪ್ರೇರೇಪಿಸಲ್ಪಟ್ಟ ಕ್ರೋಢ, ಜಮದಗ್ನಿ ಲೋಮಾರ ಮಾಂಡವ್ಯ ಮತ್ತು ಅಗಸ್ತ್ಯ ಎಂಬ ಪಂಚ ಋಷಿಗಳು ಪಂಚ ದಿಕ್ಕುಗಳಲ್ಲಿ ಶಂಕರನಾರಾಯಣ ದೇವರನ್ನು ಕುರಿತು ತಪಸ್ಸು ಮಾಡಿದ್ದರಿಂದ ಶಂಕರ ನಾರಾಯಣರು ಏಕರೂಪಿಯಾಗಿ ಐವರಾಗಿ ಬಂದು ಖರ ರಟ್ಟಾಸುರರನ್ನು ಸಂಹಾರಗೈದರು. ಶಂಕರ ನಾರಾಯಣರು ಪಂಚ ಋಷಿಗಳಿಗೆ ದರ್ಶನ ನೀಡಿದ ಕ್ರೋಢsಶಂಕರನಾರಾಯಣ, ಹೊಳೆ ಶಂಕರನಾರಾಯಣ, ಹಳೆ ಅಮಾವಾಸ್ಯೆಬೈಲು ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ, ಆವರ್ಸೆ ಶಂಕರನಾರಾಯಣ ಪಂಚ ಶಂಕರನಾರಾಯಣ ಸ್ಥಳಗಳು ಇಂದು ಯಾತ್ರ ಕ್ಷೇತ್ರಗಳಾಗಿವೆ. ರಟ್ಟಾಡಿ ರಟ್ಟಾಸುರನ ರಾಜಧಾನಿಯಾಗಿದ್ದು ರಟ್ಟ್ಟಾ ಆರಾಧನೆ ಮಾಡಿದ ಈಶ್ವರನ ಕ್ಷೇತ್ರವೇ ಇಂದಿನ ರಟ್ಟಾಡಿ ರಟ್ಟೇಶ್ವರ ಕ್ಷೇತ್ರವಾಗಿದೆ. ಅಮವಾಸೆಬೈಲು ಗ್ರಾಮದ ಕಡವಾಸಿಯು ಖಾರಾಸುರನ ರಾಜಧಾನಿಯಾಗಿದ್ದು ಖರ ಆರಾಧನೆ ಮಾಡಿಕೊಂಡು ಬಂದ ಈಶ್ವರನ ಕ್ಷೇತ್ರವೇ ಕಡವಾಸೆ ಶ್ರೀ ಖರೇಶ್ವರ ದೇವರ ಕ್ಷೇತ್ರವಾಗಿದೆ. ಈ ದೇಗುಲವು ಸಂಪೂರ್ಣ ವಿನಾಶಗೊಂಡು ಮರದ ಬುಡವೊಂದರಲ್ಲಿ ಶಿವರಾತ್ರಿಯಂದು ಮಾತ್ರ ಪೂಜೆ ಸಲ್ಲುತ್ತಾ ಬಂದಿದೆ. ೪ ಗ್ರಾಮಗಳ ಅಧಿದೇವತೆಯ ಪುನರುತ್ಥಾನಕ್ಕಾಗಿ ಗ್ರಾಮಸ್ಥರೆಲ್ಲರೂ ಸೇರಿ ಸ್ಥಳಿಯರಾದ ಮತ್ತು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ಗೌರವಾಧ್ಯಕ್ಷತೆಯೊಂದಿಗೆ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಶ್ರೀ ಖರೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದರು.

ದೇವಸ್ಥಾನದ ಅಧ್ಯಕ್ಷರಾಗಿ ರಾಜೀವ ಶೆಟ್ಟಿ ಕಾನ್‌ಬೈಲು, ಗೌರವ ಅಧ್ಯಕ್ಷರಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಪಾಧ್ಯಕ್ಷರಾಗಿ ಟಿ.ಚಂದ್ರ ಶೇಖರ ಶೆಟ್ಟಿ ತೊಂಬಟ್ಟು, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ ಅಮಾಸೆಬೈಲು, ಅರ್ಚಕರಾಗಿ ಚಂದ್ರಶೇಖರ ಭಾಗ್ವತ್, ಟ್ರಸ್ಟಿಗಳಾಗಿ ಚಂದ್ರಶೇಖರ ಶೆಟ್ಟಿ, ಸದಾಶಿವ ಶೆಟ್ಟಿ, ಐ.ರಘುಪತಿರಾವ್, ರಾಮಣ್ಣ ಹೆಗ್ಡೆ ಹಾಗೂ ಪ್ರೇಮಾ ಆಯ್ಕೆಯಾಗಿದ್ದು ಇವರ ನೇತೃತ್ವದಲ್ಲಿ ಊರವರ ಸಹಕಾರದಲ್ಲಿ ಸುಂದರ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡಿದೆ.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿದ್ವಾನ್ ವೇ.ಮೂ.ತಟ್ಟುವಟ್ಟು ಶ್ರೀ ವಾಸುದೇವ ಜೋಯಿಸರ ಮಾರ್ಗದರ್ಶನ ಕಾರಣವಾಗಿದೆ. ಅವರ ಮೂಲಕ ದಿನಾಂಕ ೧೯.೦೮.೨೦೨೫ರಂದು ಆರೂಢ ಪ್ರಶ್ನಾ ಚಿಂತನೆ ನಡೆಸಲಾಗಿದೆ. ಈ ದೇಗುಲವು ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನವಾಗಿದ್ದು ಹಿಂದೆ ಇಲ್ಲಿ ಯುದ್ಧಗಳಾಗಿ ದೇವಸ್ಥಾನವು ಧ್ವಂಸ ಮಾಡುವ ಸೂಚನೆ ಸಿಕ್ಕಿದಾಗ ಭಕ್ತರು ಶಿವಲಿಂಗವನ್ನು ಕೆರೆಯೊಂದಲ್ಲಿ ಇಟ್ಟಿರುತ್ತಾರೆ ಎಂದ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಈ ಪರಿಸದಲ್ಲಿರುವ ಮೇಲ್‌ಕೆರೆಯಲ್ಲಿ ಶಿವಲಿಂಗ ಇರಬಹುದು ಅದನ್ನು ಶೋಧಿಸಿ ಅದೇ ಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು. ಸಿಗದೇ ಇದ್ದಲ್ಲಿ ನೂತನ ಶಿವ ಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಜೋಯಿಸರು ತಿಳಿಸಿದ್ದರು. ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿ ಹೋಗಿರುವುದರಿಂದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತಾಧಿಗಳು ಹೊಸ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡುವ ನಿರ್ಧಾರಕ್ಕೆ ಬಂದಿದ್ದು ಅದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಹಿಂದಿನ ನಂದಿ ವಿಗ್ರಹವು ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿದ್ದು ಅದನ್ನೇ ತಂದು ಪ್ರತಿಷ್ಠಾಪನೆ ಮಾಡಲಾಗುವುದು. ವಿನಾಶಗೊಂಡಿರುವ ದೇವರ ಸಾನ್ನಿಧ್ಯದ ಪರಿಸರದಲ್ಲಿ ನಾಗದೇವರ ಮತ್ತು ಋಷಿ ಸಮಾಧಿ ಇದೆ ಎಂದು ಪ್ರಶ್ನೆಯಲ್ಲಿ ಸೂಚಿಸಿದ್ದರು. ಭಕ್ತರು ಶೋಧ ನಡೆಸಿದಾಗ ಮರದ ಪೊಟರೆಯಲ್ಲಿ ನಾಗ ಸಾನ್ನಿಧ್ಯ ಹಾಗೂ ಋಷಿ ಸಮಾಧಿ ಸ್ಪಷ್ಟ ಗೋಚರವಾಗಿದೆ.
ತಟ್ಟುವಟ್ಟು ಜೋಯಿಸರ ಮಾರ್ಗದರ್ಶನದಲ್ಲಿ ವಿನಾಶ ಗೊಂಡಿರುವ ಶ್ರೀ ಖರೇಶ್ವರ ದೇಗುಲವನ್ನು ಸುಮಾರು 60 ಲಕ್ಷ ವೆಚ್ಚದಲ್ಲಿ ಕೇವಲ ಐದಾರು ತಿಂಗಳುಗಳಲ್ಲೇ ಶಿಲಾಮಯ ಗರ್ಭಗುಡಿ, ಶಿಲಾಮಯ ತೀರ್ಥಮಂಟಪ, ನಾಗದೇವರ ಶಿಲಾಪೀಠ ಹಾಗೂ ತೀರ್ಥ ಬಾವಿಯನ್ನು ನಿರ್ಮಿಸಲಾಗಿದೆ.
ಇದೀಗ ಮಾರ್ಚ್ ೧೫ ಹಾಗೂ ಮಾರ್ಚ್೧೬ರಂದು ಖರೇಶ್ವರ ದೇವರ ಜೀರ್ಣೊದ್ಧಾರ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿ಼ಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.



