ಉಡುಪಿಮಿತ್ರ ಪತ್ರಿಕೆ ಸುದ್ದಿ :
ಕುಂದಾಪುರ, ಮಾ.೨೯: ಕುಂದಾಪುರ ತಾಲೂಕು ಬೇಳೂರು ಗ್ರಾಮದ ಮೊಗೆಬೆಟ್ಟಿನಲ್ಲಿ ಸರಕಾರಿ ಸ್ಥಳದಲ್ಲಿರುವ ಜೀವಂತ ಆಲದ ಮರದ (ಗೋಳಿ ಮರದ) ಬುಡಕ್ಕೆ ಬೆಂಕಿ ಕೊಟ್ಟವರ ವಿರುದ್ಧ ಸ್ಥಳಿಯರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.
ಸರಕಾರಿ ಸ್ಥಳದಲ್ಲಿರುವ ಮರಗಳನ್ನು ಕಡಿದು ಬೆಂಕಿ ಹಾಕಿದ ಬಗ್ಗೆ ಅರಣ್ಯ ಇಲಾಖೆ, ಕುಂದಾಪುರ ತಹಶೀಲ್ದಾರರಿಗೆ, ಕರ್ನಾಟಕ ಲೋಕಾಯುಕ್ತಕ್ಕೆ ಬೇಳೂರು ರವಿಕುಮಾರ್ ಶೆಟ್ಟಿ ಎಂಬವರು ಲಿಖಿತ ದೂರು ನೀಡಿದ್ದರೂ ಬೆಂಕಿ ಹಾಕಿದ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಸರಕಾರಿ ಸ್ಥಳವನ್ನು ಒತ್ತುವರಿ ಮಾಡಿಕೊಂಡವರು ಆ ಜಾಗದಲ್ಲಿ ಅಕ್ರಮವಾಗಿ ಗಿಡಗಳನ್ನು ನೆಟ್ಟಿರುತ್ತಾರೆ.

ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಒತ್ತುವರಿ ಮಾಡಿಕೊಂಡ ಸ್ಥಳವನ್ನು ತೆರವು ಮಾಡುವಂತೆ ಕುಂದಾಪುರ ತಹಶೀಲ್ದಾರರಿಗೆ ನಿರ್ದೇಶನ ನೀಡಿದರೂ ಇದುವರೆಗೂ ತೆರವು ಮಾಡಿಲ್ಲ. ಅದರ ಮುಂದುವರಿದ ಭಾಗವಾಗಿ ಈ ಹಿಂದೆ ಒತ್ತುವರಿ ಮಾಡಿದವರೇ ಇದೀಗ ಮತ್ತಷ್ಟು ಸರಕಾರಿ ಸ್ಥಳವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮರಗಳನ್ನು ಕಡಿದು ಆ ಮರಗಳಿಗೆ ಬೆಂಕಿ ಹಾಕಿರುತ್ತಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಒತ್ತುವರಿ ಮಾಡಿದವರ ಸ್ವಂತ ಸ್ಥಳಕ್ಕೂ ಹಾಗೂ ಈ ಸರಕಾರಿ ಜಾಗದ ಮಧ್ಯೆ ಮೊಗೆಬೆಟ್ಟು-ಶಿರಿಯಾರ ರಸ್ತೆ ಬರುವುದರಿಂದ ಅವರಿಗೆ ಯಾವುದೇ ಕುಮ್ಕಿ ಹಕ್ಕು ಬರಲ್ಲ ಎಂದು ಸ್ಥಳಿಯರು ಹೇಳಿದ್ದಾರೆ. ಇಷ್ಟೆಲ್ಲ ಒತ್ತ್ತುವರಿಯಾಗುತ್ತಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ – ನ್ಯಾಯವಾದಿ ಅವಿನಾಶ್ ಶೆಟ್ಟಿ
ಸ್ಥಳಿಯ ನ್ಯಾಯವಾದಿ ಅವಿನಾಶ್ ಶೆಟ್ಟಿಯವರು ಮಾತನಾಡಿ ಸುಮಾರು ೨೦೦ ವರ್ಷಗಳಿಗೂ ಹಿಂದಿನ ಆಲದ ಮರ ಇದಾಗಿದ್ದು ಒತ್ತ್ತುವರಿಯ ಉದ್ದೇಶದಲ್ಲಿ ಆಲದ ಮರದ ಬುಡಕ್ಕೆ ಬೆಂಕಿ ಕೊಡಲಾಗಿದೆ. ಅದೆಷ್ಟೋ ಪಕ್ಷಿಗಳು ಈ ಮರದಲ್ಲಿ ಹಿಂದೆ ವಾಸಿಸುತ್ತಿದ್ದವು. ಗೆಲ್ಲುಗಳನ್ನು ಕಡಿದು ಹಕ್ಕಿಗಳಿಗೂ ವಾಸ ಮಾಡದಂತೆ ಮಾಡಿದ್ದಾರೆ. ಜೀವಂತ ಆಲದ ಮರಕ್ಕೆ ಬೆಂಕಿ ಕೊಟ್ಟಿದ್ದು ಸರಿಯಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಬೇಳೂರಿನಲ್ಲಿರುವ ಎಲ್ಲಾ ಸರಕಾರಿ ಜಾಗವನ್ನು ಕೆಲವು ವ್ಯಕ್ತಿಗಳು ಅನಧಿಕೃತವಾಗಿ ಆಕ್ರಮಣ ಮಾಡುತ್ತಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳೂ ಮಾತನಾಡುತ್ತಿಲ್ಲ. ಆಕ್ರಮಣ ಮಾಡಿಕೊಂಡವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಹೀಗೆ ಎಲ್ಲಾ ಜಾಗವನ್ನು ಆಕ್ರಮಣ ಮಾಡುತ್ತಾ ಹೋದಲ್ಲಿ ಮುಂದೊಂದು ದಿನ ಸರಕಾರಿ ಉದ್ದೇಶಿತ ಯಾವುದೇ ಕಟ್ಟಡಕ್ಕೂ ಇಲ್ಲಿ ಸರಕಾರಿ ಜಾಗ ಸಿಗಲ್ಲ. ಸುಟ್ಟಮರದಲ್ಲಿ ಜೀವ ಇರುವ ಕಾರಣ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ನೀರು ಹಾಕಿ ಮರವನ್ನು ಪೋಷಿಸಬೇಕು ಎಂದು ನ್ಯಾಯವಾದಿ ಅವಿನಾಶ್ ಶೆಟ್ಟಿ ಆಗ್ರಹಿಸಿದ್ದಾರೆ.



