udupimitra.in
  • June 16, 2026
  • Last Update June 16, 2026 5:30 am
  • Brahmavara

ಅಡಿಕೆ ಕೃಷಿಯಲ್ಲಿ ಯಶೋಗಾಥೆ: ಸ್ವರ್ಣಶಿಲ್ಪಿಯಿಂದ ಯಶಸ್ವಿ ಕೃಷಿಕರಾದ ನೀರ್ಕೆರೆ ಬಾಬು ಆಚಾರ್ಯ

ಅಡಿಕೆ ಕೃಷಿಯಲ್ಲಿ ಯಶೋಗಾಥೆ: ಸ್ವರ್ಣಶಿಲ್ಪಿಯಿಂದ ಯಶಸ್ವಿ ಕೃಷಿಕರಾದ ನೀರ್ಕೆರೆ ಬಾಬು ಆಚಾರ್ಯ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಸ್ವರ್ಣಶಿಲ್ಪಿಯಾಗಿ ಆರಂಭವಾದ ಬಾಬು ಆಚಾರ್ಯರ ಬದುಕಿನ ಪಯಣ ಇಂದು ಯಶಸ್ವಿ ಕೃಷಿಕನ ಸ್ಥಾನಕ್ಕೆ ತಲುಪಿದೆ. ಕೃಷಿಯ ಮೇಲಿನ ಆಸಕ್ತಿ, ದೂರದೃಷ್ಟಿ, ಪರಿಶ್ರಮ ಮತ್ತು ಸಮರ್ಪಣೆಯಿಂದ ಅಡಿಕೆ ಕೃಷಿಯಲ್ಲಿಯೂ ಆರ್ಥಿಕ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಅವರ ಸಾಧನೆ ಜೀವಂತ ಉದಾಹರಣೆಯಾಗಿದೆ. ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಯುವಜನತೆಗೆ ಬಾಬು ಆಚಾರ್ಯ ಅವರ ಬದುಕು ಸ್ಫೂರ್ತಿದಾಯಕ ಮಾದರಿಯಾಗಿದೆ.


ಬೈಂದೂರು: ಅಡಿಕೆ ಕೃಷಿಯಿಂದಲೂ ಸ್ವಾಭಿಮಾನ ಹಾಗೂ ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಬೈಂದೂರು ತಾಲೂಕಿನ ಉಳ್ಳೂರು-೧೧

ಗ್ರಾಮದ ನೀರ್ಕೆರೆ ಬಾಬು ಆಚಾರ್ಯ ಅವರು ತಮ್ಮ ಜೀವನದ ಮೂಲಕ ಸಾಬೀತು ಪಡಿಸಿದ್ದಾರೆ. ಸ್ವರ್ಣಶಿಲ್ಪಿಯಾಗಿ ಗುರುತಿಸಿಕೊಂಡಿದ್ದ ಅವರು ಇಂದು ಯಶಸ್ವಿ ಅಡಿಕೆ ಕೃಷಿಕರಾಗಿಯೂ ಮಾದರಿಯಾಗಿದ್ದಾರೆ.


ಹೇರೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿರುವ ಬಾಬು ಆಚಾರ್ಯ ಅವರು ನಾವುಂದ ಅರೆಹೊಳೆಯಲ್ಲಿ ಶ್ರೀ ಮೂಕಾಂಬಿಕಾ ಜ್ಯುವೆಲ್ಲರಿ ಅಂಗಡಿಯನ್ನು ನಡೆಸುತ್ತಿದ್ದರು. ಚಿನ್ನಾಭರಣಗಳ ಕುಸುರಿ ಕೆಲಸದಲ್ಲಿ ವಿಶೇಷ ಪರಿಣತಿ ಹೊಂದಿದ್ದ ಅವರು ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದರು. ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದರೂ ಕೃಷಿಯ ಬಗ್ಗೆ ಅವರಿಗೆ ಬಾಲ್ಯದಿಂದಲೇ ವಿಶೇಷ ಆಸಕ್ತಿ ಇತ್ತು.


ಈ ಆಸಕ್ತಿಯೇ ಅವರನ್ನು ತಮ್ಮ ಮನೆಯ ಸಮೀಪ 100 ತೆಂಗು ಹಾಗೂ 500 ಅಡಿಕೆ ಗಿಡಗಳನ್ನು ನೆಡುವಂತೆ ಪ್ರೇರೇಪಿಸಿತು. ಆರಂಭದಲ್ಲಿ ಅಡಿಕೆ ಕೃಷಿಯಿಂದ ಆರ್ಥಿಕ ಯಶಸ್ಸು ಸಾಧ್ಯವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟರೂ, ಅದನ್ನೇ ಸವಾಲಾಗಿ ಸ್ವೀಕರಿಸಿದ ಬಾಬು ಆಚಾರ್ಯ ಅವರು ಕೃಷಿಯಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿ ಕೊಡಲು ಮುಂದಾದರು. ಮನೆ ಸಮೀಪದ ಸ್ವಂತ ಜಾಗದಲ್ಲಿ ತೆರೆದ ಬಾವಿ ನಿರ್ಮಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಿ ಯಶಸ್ಸು ಗಳಿಸಿದ ಅವರು ನಂತರ ರಾಗಿಹಕ್ಲು ಸಮೀಪದ ನೀರಿನಾಶ್ರಯವಿರುವ ಕಿಸ್ಮತಿ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿ ದೊಡ್ಡ ಪ್ರಮಾಣದ ಅಡಿಕೆ ತೋಟ ಅಭಿವೃದ್ಧಿಪಡಿಸಿದರು. ಮೊದಲ ಹಂತದಲ್ಲಿ ಸುಮಾರು 2,5೦೦ ಅಡಿಕೆ ಗಿಡಗಳನ್ನು ನೆಟ್ಟು ಯಶಸ್ವಿಯಾಗಿ ಬೆಳೆಸಿದರು.ಈ ಬಾರಿ ಮತ್ತೆ 1500 ಗಿಡಗಳನ್ನು ಪುನಃ ಬೆಳೆಸಿದ್ದಾರೆ.


ಸವಾಲುಗಳ ನಡುವೆಯೂ ಸಾಧನೆ
ಕಿಸ್ಮತಿ ಪ್ರದೇಶದಲ್ಲಿ ಮಂಗ, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳ ಕಾಟ ಹೆಚ್ಚಿದ್ದರೂ ಬಾಬು ಆಚಾರ್ಯ ಅವರು ಹಿಂಜರಿಯಲಿಲ್ಲ. ಇತ್ತೀಚೆಗೆ ನೆಟ್ಟ ಸುಮಾರು ೧,೫೦೦ ಅಡಿಕೆ ಗಿಡಗಳ ಚಿಗುರುಗಳನ್ನು ಜಿಂಕೆಗಳು ಬೇಲಿ ಹಾರಿ ಬಂದು ತಿಂದುಹಾಕಿದ್ದವು. ತಕ್ಷಣ ಬಾಬು ಆಚಾರ್ಯರು ಇದ್ದ 5 ಅಡಿ ಬೇಲಿಯ ಮೇಲೆ ಮತ್ತೆ 5 ಅಡಿ ಬಲೆ ಕಟ್ಟಿ ತೋಟದ ಸುತ್ತಲೂ ಎತ್ತರದ ಬೇಲಿ ನಿರ್ಮಿಸಿದ ಬಳಿಕ ಗಿಡಗಳು ಮತ್ತೆ ಚೇತರಿಸಿಕೊಂಡು ಬೆಳೆಯಲಾರಂಭಿಸಿವೆ.


ಶ್ರಮವೇ ಯಶಸ್ಸಿನ ಗುಟ್ಟು
ಕೃಷಿಯಲ್ಲಿ ಯಶಸ್ಸು ಸಾಧಿಸಲು ನಿರಂತರ ಪರಿಶ್ರಮ ಅಗತ್ಯ ಎಂದು ಬಾಬು ಆಚಾರ್ಯ ನಂಬಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಬೇಗನೆ ಎದ್ದು ತೋಟದ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವರು, ಆರ್ಥಿಕವಾಗಿ ಸದೃಢರಾಗಿದ್ದರೂ ಸ್ವತಃ ತೋಟದಲ್ಲಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತೋಟದ ನಿರ್ವಹಣೆ, ಗೊಬ್ಬರದ ಬಳಕೆ, ಔಷಧಿ ಸಿಂಪಡಣೆ ಸೇರಿದಂತೆ ಪ್ರತಿಯೊಂದು ಕಾರ್ಯವನ್ನೂ ಸಮಯಕ್ಕೆ ಸರಿಯಾಗಿ ನಡೆಸುವ ಅವರು, ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನ್ನು ಅಕ್ಷರಶಃ ಅನುಸರಿಸುತ್ತಿದ್ದಾರೆ. ಅವರ ಕಠಿಣ ಪರಿಶ್ರಮವೇ ಇಂದು ಅವರಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತಿದೆ.


ಅಡಿಕೆ ಕೃಷಿಕರಿಗೆ ಬಾಬು ಆಚಾರ್ಯರ ಸಲಹೆ
ಅಡಿಕೆ ತೋಟ ಆರಂಭಿಸುವ ಮುನ್ನ ಭೂಮಿಯನ್ನು ಸರಿಯಾಗಿ ಹದಗೊಳಿಸುವುದು ಅತ್ಯಗತ್ಯ ಎಂದು ಬಾಬು ಆಚಾರ್ಯ ಸಲಹೆ ನೀಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಯೋಜನೆ ಇದ್ದರೆ ಜೆಸಿಬಿ ಮೂಲಕ ಉದ್ದನೆಯ ಹೊಂಡಗಳನ್ನು ನಿರ್ಮಿಸಬೇಕು. ತೋಟದ ಮಧ್ಯದಲ್ಲಿ ರಸ್ತೆಗಾಗಿ ಜಾಗ ಬಿಡುವುದು ಮುಂದಿನ ದಿನಗಳಲ್ಲಿ ಗೊಬ್ಬರ ಹಾಗೂ ಅಡಿಕೆ ಸಾಗಣೆಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಗಿಡಗಳನ್ನು ನೆಟ್ಟ ನಂತರ ಅವುಗಳ ಆರೈಕೆಯೇ ಮುಖ್ಯ. ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ಹಾಗೂ ಅಗತ್ಯ ಔಷಧಿ ನೀಡಿದರೆ ನಾಲ್ಕರಿಂದ ಐದು ವರ್ಷಗಳಲ್ಲಿಯೇ ಉತ್ತಮ ಫಲ ಪಡೆಯಬಹುದು. ಐದನೇ ವರ್ಷದಿಂದ ಉತ್ತಮ ಇಳುವರಿ ದೊರೆತು ಆರ್ಥಿಕ ನೆಮ್ಮದಿ ಸಿಗುತ್ತದೆ. ಅಡಿಕೆ ತೋಟವಿದೆ ಎಂದು ಹೇಳುವುದಕ್ಕಿಂತ ಅದರ ನಿರಂತರ ಆರೈಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ, ಎಂದು ಅವರು ಹೇಳುತ್ತಾರೆ.
ಮಂಗಳ ಹಾಗೂ ಮೋಹಿತ್‌ನಗರ ತಳಿಯ ಅಡಿಕೆ ಗಿಡಗಳು ಉತ್ತಮ ಇಳುವರಿ ನೀಡುವ ಸಾಧ್ಯತೆ ಹೊಂದಿದ್ದು, ಕೃಷಿಕರು ಅವುಗಳನ್ನು ಆಯ್ಕೆ ಮಾಡುವುದು ಒಳಿತು ಎಂಬುದು ಅವರ ಸಲಹೆಯಾಗಿದೆ.


ಇತರರಿಗೆ ಮಾದರಿ
ಸ್ವರ್ಣಶಿಲ್ಪಿಯಾಗಿ ಆರಂಭವಾದ ಬಾಬು ಆಚಾರ್ಯರ ಬದುಕಿನ ಪಯಣ ಇಂದು ಯಶಸ್ವಿ ಕೃಷಿಕನ ಸ್ಥಾನಕ್ಕೆ ತಲುಪಿದೆ. ಕೃಷಿಯ ಮೇಲಿನ ಆಸಕ್ತಿ, ದೂರದೃಷ್ಟಿ, ಪರಿಶ್ರಮ ಮತ್ತು ಸಮರ್ಪಣೆಯಿಂದ ಅಡಿಕೆ ಕೃಷಿಯಲ್ಲಿಯೂ ಆರ್ಥಿಕ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಅವರ ಸಾಧನೆ ಜೀವಂತ ಉದಾಹರಣೆಯಾಗಿದೆ. ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಯುವಜನತೆಗೆ ಬಾಬು ಆಚಾರ್ಯ ಅವರ ಬದುಕು ಸ್ಫೂರ್ತಿದಾಯಕ ಮಾದರಿಯಾಗಿದೆ. ಎರಡೆರಡು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಾಜಿ ೨ನೇ ಮೊಕ್ತೇಸರರಾಗಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಬಿಜೆಪಿಯಲ್ಲಿ ಗುರುತಿಸಿಕೊಂಡು ಸ್ಥಳಿಯವಾಗಿ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದು ಇವರು ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುದು ಪತ್ರಿಕೆಯ ಆಶಯವಾಗಿದೆ.

  • ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *

You cannot copy content of this page