ಉಡುಪಿ ಮಿತ್ರ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಜೂ.೧೫: ಬಾರ್ಕೂರಿನ ಐತಿಹಾಸಿಕ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೂನ್ 17ರಂದು (ಬುಧವಾರ) ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಮನವಿಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಜೂನ್ 15ರಂದು ದೇವಸ್ಥಾನದ ಜೀರ್ಣೋದ್ಧಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಗಣಹೋಮ, 9.30ಕ್ಕೆ ರೇವಂತ ಸ್ವಾಮಿ ಪೂಜೆ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಮುಷ್ಟಿ ಕಾಣಿಕೆ ಸಮರ್ಪಣೆ, 12.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮನವಿಪತ್ರ ಬಿಡುಗಡೆ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಜೊತೆಗೆ ಬಾರ್ಕೂರಿನ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಕಾರ್ಯ ಮುಂದುವರಿದಿದೆ. ಈಗಾಗಲೇ ಸರ್ಕಾರದ ಪ್ರವಾಸೋದ್ಯಮ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರನ್ನು ಆಹ್ವಾನಿಸಿ ಬಾರ್ಕೂರಿನ ಇತಿಹಾಸ ಹಾಗೂ ವೈಭವದ ಕುರಿತು ವಿವರಿಸಲಾಗಿದೆ. ಹಿಂದಿನ ವೈಭವವನ್ನು ಮರುಸ್ಥಾಪಿಸಲು ಸ್ಥಳೀಯರ ಸಹಕಾರದೊಂದಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಾರ್ಕೂರಿನಲ್ಲಿ ವಿವಿಧ ಸಮುದಾಯಗಳ ದೇವಾಲಯಗಳಿದ್ದು, ಎಲ್ಲರಿಗೂ ಬಾರ್ಕೂರು ಮೂಲಸ್ಥಾನವಾಗಿದೆ. ತುಳುನಾಡಿನ ಪ್ರಮುಖ ದೇವರಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕಳೆದ ಸುಮಾರು 20ವರ್ಷಗಳಿಂದ ಪ್ರಯತ್ನಗಳು ನಡೆದರೂ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಊರಿನ ಜನರೆಲ್ಲ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಜೀರ್ಣೋದ್ಧಾರ ಸಾಧ್ಯ ಎಂಬ ಸಂದೇಶ ದೊರೆತಿದೆ ಎಂದು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಮಂಜುನಾಥ ರಾವ್ ತಿಳಿಸಿದರು.
ಪ್ರತೀ ಮನೆಯಿಂದ ಮುಷ್ಟಿ ಕಾಣಿಕೆ
ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಗ್ರಾಮದಲ್ಲಿನ ಪ್ರತೀ ಮನೆಯವರು ಮುಷ್ಟಿ ಕಾಣಿಕೆ ಸಮರ್ಪಣೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಮನವಿ ಮಾಡಿದೆ. ಎಲ್ಲರೂ ದೇವಸ್ಥಾನಕ್ಕೆ ಬರಲು ಸಾಧ್ಯವಾಗದಿದ್ದರೆ, ಮನೆಯ ದೇವರ ಮುಂದೆ ಹರಿವಾಣ ಇಟ್ಟು ಅದರಲ್ಲಿ ಮುಷ್ಟಿ ಕಾಣಿಕೆ ಹಾಕಿ ಕುಟುಂಬದ ಒಬ್ಬ ಸದಸ್ಯ ದೇವಸ್ಥಾನಕ್ಕೆ ತಂದು ಸಮರ್ಪಿಸಿ ಪ್ರಸಾದ ಸ್ವೀಕರಿಸಬಹುದು ಎಂದು ಪುರೋಹಿತ ದಾಮೋದರ ಶರ್ಮಾ ತಿಳಿಸಿದರು.

ಶ್ರೀ ಪಂಚಲಿಂಗೇಶ್ವರ ದೇವರು ತುಳುನಾಡಿನ ಪ್ರಮುಖ ದೇವರಾಗಿದ್ದು, ಭಟ್ಕಳದಿಂದ ಕಾಸರಗೋಡು ವರೆಗೆ ಆಡಳಿತ ನಡೆಸಿದ ರಾಜಮನೆತನದ ಆರಾಧ್ಯ ದೇವರಾಗಿದ್ದರು. ಆದರೆ ಕೆಲವು ಕಾರಣಗಳಿಂದ ದೇವಸ್ಥಾನ ಇದುವರೆಗೆ ಜೀರ್ಣೋದ್ಧಾರ ಕಾಣಲಿಲ್ಲ. ಸುಮಾರು ೪೨ ಸಮುದಾಯಗಳಿಗೆ ಬಾರ್ಕೂರು ಮೂಲಸ್ಥಾನವಾಗಿದ್ದು, ಆ ಸಮುದಾಯಗಳ ಅನೇಕ ದೇವಾಲಯಗಳ ಮೂಲದೇವರಾಗಿ ಶ್ರೀ ಪಂಚಲಿಂಗೇಶ್ವರರ ಮಹತ್ವವಿದೆ. ಆದ್ದರಿಂದ ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ಸಮುದಾಯದವರೂ ಕೈಜೋಡಿಸಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಆಕಾಶ್ ರಾಜ್ ಜೈನ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿ ಬಿ. ಜನಾರ್ದನ ದೇವಾಡಿಗ, ಸಂಯೋಜಕ ರಾಮಚಂದ್ರ ಕಾಮತ್, ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



