ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ : :
ಹೆಮ್ಮಾಡಿ, ಜೂನ್ 25: ಭಾರತವು ವಿಶ್ವದಲ್ಲೇ ಶ್ರೇಷ್ಠ ರಾಷ್ಟ್ರವಾಗಿದ್ದು, ದೇಶದ ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದೆ. ಆ ಪ್ರತಿಭೆಯನ್ನು ಹೊರತರುವ ವ್ಯವಸ್ಥೆ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜಗದ್ಗುರು ವಿಧುಶೇಖರ ಭಾರತಿ ಮಹಾಸ್ವಾಮೀಜಿ ಹೇಳಿದರು.

ಹೆಮ್ಮಾಡಿ ಕಟ್‌ಬೆಲ್ತೂರು ಸುಳ್ಸೆಯಲ್ಲಿ ನೂತನವಾಗಿ ನಿರ್ಮಿಸಲಾದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಬಾಲಕ-ಬಾಲಕಿಯರ ವಸತಿ ನಿಲಯ ‘ಶ್ಲಾಘನ ಶನಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದ್ದು, ಯಾರನ್ನೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬಾರದು ಎಂದರು.

ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಮತ್ತು ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಸಾಧಿಸಲು ಸಾಧ್ಯ. ಮನುಷ್ಯನ ಬುದ್ಧಿಶಕ್ತಿಯೇ ಅವನ ಅತ್ಯಂತ ದೊಡ್ಡ ವರದಾನವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಂಡರೆ ಯಾವುದೇ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಂಕರಾಚಾರ್ಯರು ವಿದ್ಯಾಭ್ಯಾಸ, ದಾನ ಹಾಗೂ ಸಮಾಜಸೇವೆಯ ಮಹತ್ವವನ್ನು ಸಾರಿದ್ದು, ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಉತ್ತಮ ಶಿಕ್ಷಣ ವ್ಯವಸ್ಥೆಯಿರುವ ದೇಶಗಳಿಗೆ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ನಿಯಮಗಳನ್ನು ಪಾಲಿಸಿ, ಪರಸ್ಪರ ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ಪಾಠದಲ್ಲಿ ಕಲಿತ ವಿಷಯಗಳನ್ನು ಸ್ವಾಧ್ಯಯನ ಮತ್ತು ಅನುಭವ ಹಂಚಿಕೆಯ ಮೂಲಕ ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಗಣೇಶ್ ಮೊಗವೀರರ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಅಭಿವೃದ್ಧಿ ಹೊಂದಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಭಾರತೀಯ ಸನಾತನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿ ಆನಂದ ಸಿ. ಕುಂದರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪ್ರಾಂತೀಯ ಧರ್ಮಾಧಿಕಾರಿ ನಾಗಪಾತ್ರಿ ಲೋಕೇಶ್ ಅಡಿಗ ಬಡಾಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿ ಗಣೇಶ್ ಮೊಗವೀರ ಅವರು ಅಧ್ಯಾಪಕರಾಗಿದ್ದ ಸಂದರ್ಭ ಈ ಭಾಗದಲ್ಲಿ ಒಂದೊಳ್ಳೆಯ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕೆಂಬ ಕನಸು ಕಂಡು ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ. ಅವರ ಶಿಕ್ಷಕ ವರ್ಗ ಪ್ರಾಮಾಣಿಕ ಶ್ರಮದಿಂದ ಸಂಸ್ಥೆ ಭದ್ರ ಬುನಾದಿ ಹಾಕಿಕೊಂಡಿದೆ. ಗಣೇಶ್ ಮೊಗವೀರರ ಸಂಸ್ಥೆಯಲ್ಲಿ ಶೈಕ್ಷಣಿಕ ವಿಷಯ, ಕ್ರೀಡೆ, ಕಲೆ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಉತ್ತಮ ಮಾಹಿತಿ ನೀಡುತ್ತಾ ಬಂದಿರುವುದರಿಂದ ಜಿಲ್ಲೆಯಲ್ಲಿ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಿದು ಎಂದರು. ವಿದ್ಯಾರ್ಥಿನಿಯರಾದ ಸಿಂಚನ ಜಿ. ಭಟ್ ಹಾಗೂ ಸಮೃದ್ಧಿ ಶೆಟ್ಟಿ ಆದಿ ಶಂಕರಾಚಾರ್ಯರ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಚೆಕ್ ಹಸ್ತಾಂತರಿಸಲಾಯಿತು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ಶ್ರೀಮತಿ ಶ್ಯಾಮಲಾ ಗಣೇಶ್ ದಂಪತಿ ಪಾದುಕಾ ಪೂಜೆ ನೆರವೇರಿಸಿದರು. ಉಪನ್ಯಾಸಕ ಉದಯ ನಾಯ್ಕ್ ಸ್ವಾಗತಿಸಿ, ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.




