ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ : ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಉಡುಪಿ ಘಟಕ ಹಾಗೂ ಮಹಿಳಾ ವಿಭಾಗದ ವತಿಯಿಂದ ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ ಸವಿ ನೆನಪಿನಲ್ಲಿ ೨ನೇ ವರ್ಷದ ತೆಂಕು ತಿಟ್ಟಿನ ಯಕ್ಷಗಾನ ಪ್ರದರ್ಶನ ಉಡುಪಿ ಪುರಭವನದಲ್ಲಿ ನಡೆಯಿತು. ಈ ಸಂದರ್ಭ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಯಕ್ಷಧ್ರುವ ಕಲಾ ಗೌರವಾರ್ಪಣೆ ನೀಡಲಾಯಿತು.

ಡಾ| ಜಿ. ಶಂಕರ್ ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿ :
ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ| ಜಿ.ಶಂಕರ್ ಅವರು ಶುಭ ಹಾರೈಸಿದರು.

ಹಿಂದೆ ಅನೇಕ ಕಲಾವಿದರು ಯಕ್ಷಗಾನದ ಉಳಿವಿಗಾಗಿ ಹೋರಾಡಿದ್ದಾರೆ. ಅಂದು ನಡೆದುಕೊಂಡೇ ಈ ಕಲಾವಿದರು ಕಲೆಯ ಸೇವೆಯನ್ನು ಮಾಡಿದ್ದರು. ಅಂತಹ ಸಮೃದ್ದ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾವಿದರಿಗೆ ಅಗತ್ಯವಾದ ಪ್ರೋತ್ಸಾಹ, ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ನುಡಿದರು.

ಎಚ್.ಎಸ್.ಬಲ್ಲಾಳ ಅವರು ಮಾತನಾಡಿ ಯಕ್ಷದ್ರುವ ಪಟ್ಲ ಫೌಂಡೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಎಷ್ಟೇ ದೊಡ್ಡ ಕಲಾವಿದನೇ ಇರಲಿ ರಂಗದಲ್ಲಿ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ ಕೌಟುಂಬಿಕವಾಗಿ ಕಷ್ಟದಲ್ಲೇ ಜೀವನ ಕಳೆಯುತ್ತಿದ್ದರು. ಒಂದು ವೇಳೆ ಯಾರಾದರೂ ಕಲಾವಿದ ಅಪಘಾತಕ್ಕೆ ಒಳಗಾದಲ್ಲಿ ಆತನಿಗೆ ಕಣ್ಣೀರೇ ಗತಿ. ಹಾಗಾಗಿ ಸಹಕಾರ ಮಾಡಲೋಸುಗ ಪಟ್ಲ ಫೌಂಡೇಶನ್ ಪ್ರಯತ್ನ ಮಾಡುತ್ತಾ ಬಂದಿದೆ. ಈಗಿನ ಕಲಾವಿದರಿಗೆ ಜೀವನಕ್ಕೆ ತೊಂದರೆ ಇಲ್ಲ. ಮತ್ತೆ ಎಷ್ಟು ಕೊಟ್ಟರೂ ಮತ್ತೆ ಮತ್ತೆ ಕೊಡಿ ಎಂದು ಕೇಳುವವರೇ ಇದ್ದಾರೆ ಎಂದು ಪಟ್ಲ ಸತೀಶ್ ಶೆಟ್ಟಿ ನುಡಿದರು.
ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ ಮನೋಹರ ಎಸ್. ಶೆಟ್ಟಿ ಕೊಡವೂರು ತೋಟದಮನೆ ದಿವಾಕರ ಶೆಟ್ಟಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ, ಮಹಿಳಾ ಘಟಕದ ಅಧ್ಯಕ್ಷೆ ನಿರೂಪಮಾ ಪ್ರಸಾದ್ ಶೆಟ್ಟಿ ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಇಂದ್ರಾಳಿ ಪ್ರಭಾಕರ ಆಚಾರ್ಯ ಅವರಿಗೆ ಟ್ರಸ್ಟ್ ವತಿಯಿಂದ ೨೫ ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು.
ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದ್ದು ಬಾರಕೂರು ದಾಮೋದರ ಶರ್ಮಾ ನಿರೂಪಿಸಿದರು.



