ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಜೂ.20: ಉದ್ಯಮಿ ಎಚ್.ಎಸ್.ಶೆಟ್ಟಿಯವರು ತಮ್ಮ ದುಡಿಮೆಯ ಹಣದಲ್ಲಿ ಒಂದಷ್ಟು ಭಾಗವನ್ನು ಅನೇಕ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು ಸರಕಾರ ಮಾಡಬೇಕಾದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಮಕ್ಕಳಿಗೆ ಸ್ಕಾಲರ್‌ಶಿಪ್, ಸಮವಸ್ತ್ರ, ಶಾಲೆಗಳಿಗೆ ಕಟ್ಟಡ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಕೊರಗ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಡುತ್ತಿದ್ದು ಪ್ರತೀ ವರ್ಷದಂತೆ ಈ ಬಾರಿಯೂ ಅವರು 20,000 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ನುಡಿದರು.
ಅವರು ಜೂ.20ರಂದು ಉಡುಪಿಯ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ಮತ್ತು ಜಿಲ್ಲಾ ಅನುದಾನಿತ ಶಾಲಾ ಸಂಘಗಳು ಉಡುಪಿ ಇವರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ೨೦೦ ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20,000ಜೊತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ ವರ್ಷ ೭೦೦೦ ಶಾಲೆಗಳು ಮುವ ಸಾಧ್ಯತೆ ಇದೆ – ಸಂಸದ ಕೋಟ
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕದಲ್ಲಿ ಶಿಕ್ಷಣ, ಸಾಮಾಜಿಕ ಅಸಮಾನತೆ ಮತ್ತು ಮೀಸಲಾತಿ ಕುರಿತು ಮಾತನಾಡಿದರು. ಅವರು ರಾಜ್ಯದಲ್ಲಿ ಸುಮಾರು 48,೦೦೦ ಸರ್ಕಾರಿ ಶಾಲೆಗಳಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಮುಂದಿನ ವರ್ಷ 7,೦೦೦ ಶಾಲೆಗಳು ಮುಚ್ಚುವ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಿದರು.
ಅವರು ಎಚ್.ಎಸ್.ಶೆಟ್ಟರ ಸೇವಾ ಕಾರ್ಯಗಳನ್ನು ಶ್ಲಾಘಿಸಿ, ಬಡವರು, ದುರ್ಬಲರು ಮತ್ತು ಮನೆ ಇಲ್ಲದವರಿಗೆ ಅವರು ನೀಡುತ್ತಿರುವ ನೆರವನ್ನು ಪ್ರಶಂಸಿಸಿದರು.
ಮೀಸಲಾತಿ ಕುರಿತು ಮಾತನಾಡಿದ ಅವರು, ೯೭% ಅಂಕ ಪಡೆದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿನಿಯೊಬ್ಬಳು “ನನಗೆ ಉದ್ಯೋಗ ಸಿಗುತ್ತಿಲ್ಲ, ಆದರೆ ೩೭% ಕಡಿಮೆ ಅಂಕ ಪಡೆದವರಿಗೆ ಮೀಸಲಾತಿಯ ಮೂಲಕ ಉದ್ಯೋಗ ಸಿಗುತ್ತಿದೆ; ಇದು ಯಾವ ನ್ಯಾಯ? ಎಂದು ಕೇಳಿದ ಪ್ರಶ್ನೆಗೆ ತಮ್ಮಲ್ಲಿ ಸ್ಪಷ್ಟ ಉತ್ತರ ಇಲ್ಲ ಎಂದು ಹೇಳಿದರು. ಅದೇ ವೇಳೆ, ಭಿಕ್ಷೆ ಬೇಡುವ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ನೋಡಿದಾಗ, ಅವರಿಗೆ ಅವಕಾಶ ಕಲ್ಪಿಸಲು ಮೀಸಲಾತಿಯ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು

ಮಕ್ಕಳಿಗೆ ಹೋರಾಟದ ಬದುಕಿನ ಮಹತ್ವವನ್ನು ತಿಳಿಸಬೇಕು – ಶಾಸಕ ಸುರೇಶ್ ಶೆಟ್ಟಿ
ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಎಚ್.ಎಸ್. ಶೆಟ್ಟರು ನಡೆಸುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯವಾಗಿದ್ದು, ಕೊರಗ ಸಮುದಾಯದ ಅಭಿವೃದ್ಧಿಯ ಅರಮನೆಗೆ ಅಡಿಪಾಯ ಹಾಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.
ಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕಾರದ ಅಗತ್ಯತೆಯನ್ನು ಒತ್ತಿ ಹೇಳಿದ ಶಾಸಕರು ಇಂದಿನ ದಿನಗಳಲ್ಲಿ ಮಕ್ಕಳು ಸಣ್ಣ ಸಣ್ಣ ಸಮಸ್ಯೆಗಳಿಗೂ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳಿಗೆ ಹೋರಾಟದ ಬದುಕಿನ ಮಹತ್ವವನ್ನು ತಿಳಿಸಿಕೊಟ್ಟು, ಸವಾಲುಗಳನ್ನು ಎದುರಿಸುವ ಮನೋಬಲ ಬೆಳೆಸಬೇಕಿದೆ ಎಂದು ಹೇಳಿದರು.

ಕೊರಗ ಕುಟುಂಬಕ್ಕೆ ೧೦೦ ಮನೆಗಳನ್ನು ನಿರ್ಮಿಸಿಕೊಡುವ ಗುರಿ ಇದೆ – ಎಚ್.ಎಸ್. ಶೆಟ್ಟಿ
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಎಚ್.ಎಸ್.ಶೆಟ್ಟಿ ಮಾತನಾಡಿ ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಸಾಕಷ್ಟು ಸಮಾಜಸೇವಾ ಕೆಲಸವನ್ನು ಸ್ವಂತ ಹಣದಲ್ಲಿ ಮಾಡುತ್ತಾ ಬಂದಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಬಿಲ್ಡಿಂಗ್ ಕಟ್ಟುವುದರ ಜೊತೆಯಲ್ಲಿ ಕಂಪ್ಯೂಟರ್ ಕೊಡುಗೆ, ಮಕ್ಕಳಿಗೆ ಸ್ಕಾಲರ್‌ಶಿಪ್ ಹಾಗೂ ಸಮವಸ್ತ್ರದ ಕೊಡುಗೆ ನೀಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಪೇಜಾವರ ಶ್ರೀಗಳ ಪ್ರೇರಣೆಯಿಂದ ಸಮಾಜದಲ್ಲಿ ಅತಿ ಕಷ್ಟದಲ್ಲಿರುವ ಕೊರಗ ಸಮುದಾಯಕ್ಕೆ ೧೦೦ ಮನೆಗಳನ್ನು ನಿರ್ಮಿಸಿಕೊಡುವ ಗುರಿಯನ್ನು ಇರಿಸಿಕೊಂಡು ಈಗಾಗಲೆ ೨೮ ಮನೆಗಳನ್ನು ಕಟ್ಟಿಕೊಡಲಾಗಿದೆ ಎಂದು ನುಡಿದರು.
ನಿವೃತ್ತ ಪ್ರಾಧ್ಯಾಪಕ ಎನ್.ನರೇಂದ್ರ ರೈ ದೇರ್ಲ ಮಾತನಾಡಿ ಎಚ್.ಎಸ್.ಶೆಟ್ಟಿಯವರು ಅವರ ಬದುಕನ್ನು ಅವರೇ ರೂಪಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ.
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಡಾ. ರವೀಂದ್ರ ಶ್ಯಾನುಭೋಗ್ ವೆಬ್ ಸೈಟ್ ಅನಾವರಣ ಮಾಡಿ ಮಾತನಾಡಿದರು.

ಎಚ್.ಎಸ್.ಶೆಟ್ಟರ ಮಾನವೀಯತೆ ಬಹು ದೊಡ್ಡದು -ಮುರಳಿ ಕಡೇಕಾರ್
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ ತಂದೆಯನ್ನು ಹೇಗೆ ನೋಡಿಕೊಳ್ಳಬೇಕೆಂದು ಎಚ್.ಎಸ್.ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಹೇಗೆ ಕನ್ನಡ ಮಾದ್ಯಮ ಶಾಲೆಗಳು ಮುಚ್ಚುತ್ತಿವೆಯೋ ಹಾಗೆಯೇ ಇಂಗ್ಲೀಷ್ ಮೀಡಿಯಂ ಶಾಲೆಗಳ ಡಿವಿಜನ್ಗಳು ಮುಚ್ಚುತ್ತಿವೆ. ಸರಕಾರದಿಂದ ಯಾವುದೇ ಆಶಾದಾಯಕ ವಾತಾವರಣ ಕಾಣುತ್ತಿಲ್ಲ. ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಲ್ಲಿಯೂ ಉತ್ತಮ ಶಾಲೆಗಳು ಆರಂಭಗೊಂಡಿವೆ. ಎಚ್.ಎಸ್.ಶೆಟ್ಟರ ಮಾನವೀಯತೆ ಬಹು ದೊಡ್ಡದು ಎಂದರು.
ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರಸಂಘದ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ ಕಂದಾವರ, ಜಿಲ್ಲಾ ಪ್ರಾಥಮಿಕ ಅನುದಾನಿತ ಶಾಲಾ ಸಂಘ ಉಡುಪಿ ಇದರ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭ ನಿವೃತ್ತ ಪ್ರಾಧ್ಯಾಪಕ ಎನ್,ನರೇಂದ್ರ ರೈ ದೇರ್ಲ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೨೦೦ ಅನುದಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಶಾಲಾ ಸಮವಸ್ತ್ರ ವಿತರಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ಪುರೋಹಿತ್ ದಾಮೋದರ ಶರ್ಮಾ ವಂದಿಸಿ ನಿರೂಪಿಸಿದರು.



