ಉಡುಪಿ ಮಿತ್ರ ಸುದ್ಧಿ :
ಬೆಂಗಳೂರು, ಜು. ೯:
ಜೀವನದಲ್ಲಿ ನಡೆದು ಬಂದ ದಾರಿಯನ್ನು ಮರೆಯದವರು ಎಂದಿಗೂ ಸೋಲುವುದಿಲ್ಲ. ಕಷ್ಟದ ದಿನಗಳನ್ನು ನೆನಪಿಟ್ಟುಕೊಂಡು ಛಲ, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಮುನ್ನಡೆಯುವವರಿಗೆ ಯಶಸ್ಸು ಖಚಿತ ಎಂದು ವಿಶ್ರಾಂತ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತರಾದ ಪಿ.ಎನ್. ಶ್ರೀನಿವಾಸಾಚಾರಿ, ಐ.ಎ.ಎಸ್ (ನಿ)ರವರು ಹೇಳಿದರು.

ಅವರು ಬೆಂಗಳೂರಿನ ಜಿಂದಾಲ್ ಸಿಟಿ ಬಳಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ “ನೇಸರ ಹೈಟ್ಸ್” ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಡಾ. ಸಿಎ ನಾಗರಾಜ್ ಆಚಾರ್ ರವರ ಪರಿಶ್ರಮ ಹಾಗೂ ಸಾಧನೆಯನ್ನು ಶ್ಲಾಘಿಸಿದರು.

ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಜಾಗ ಖರೀದಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಹಿರಿಯರ ಆಶೀರ್ವಾದವೂ ಅಗತ್ಯ. ಸಮುದಾಯದ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹ ಹಾಗೂ ಸಮಾಜ ಸೇವೆಯಲ್ಲಿ ಡಾ. ಸಿಎ ನಾಗರಾಜ್ ಆಚಾರ್ ಹಲವು ವರ್ಷಗಳಿಂದ ತನ್ನನ್ನುತೊಡಗಿಸಿಕೊಂಡಿದ್ದು, ಚಿನ್ನ ತನ್ನ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಂಡಂತೆ ಅವರು ತಮ್ಮ ವ್ಯಕ್ತಿತ್ವ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡಿದ್ದು, ಭೌತಿಕ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯನ್ನೂ ಗಳಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ಮಾಜಿ ಜಂಟಿ ಆಯುಕ್ತರಾದ ಮಾಳಿಗಾಚಾರ್ ಎಸ್ ರವರು ಮಾತನಾಡಿ, ಲೆಕ್ಕಪರಿಶೋಧಕರಾಗಿ, ಆರ್ಥಿಕ ವಿಶ್ಲೇಷಕರಾಗಿ ಹಾಗೂ ಕಾನೂನು ಸಲಹೆಗಾರರಾಗಿ ಡಾ. ಸಿಎ ನಾಗರಾಜ ಆಚಾರ್ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದು, ಸಮಾಜಸೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ಸಲ್ಲಿಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯ ಎಂದರು.

ಹಿರಿಯ ಬಿಜೆಪಿ ಮುಖಂಡರಾದ ಡಾ. ಕೆ.ವಿ. ಸಿದ್ದರಾಜುರವರು ಮಾತನಾಡಿ, ಸದಾ ಹಸನ್ಮುಖಿಯಾಗಿರುವ ಸಿ.ಎ ನಾಗರಾಜ್ ಆಚಾರ್ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದು, ಈ ಭಾಗದ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರಮುಖ ಪ್ರವೇಶ ದ್ವಾರದಲ್ಲಿ ನೇಸರ ಹೈಟ್ಸ್ ನಿರ್ಮಿಸಿರುವ ಅವರು, ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಕೇಶವ ಬಿ.ಎಚ್ ರವರು ಮಾತನಾಡಿ ಸಿ.ಎ ನಾಗರಾಜ್ ರವರು ತಮ್ಮ ಜೀವನದಲ್ಲಿ ಯಾರು ಸಹಕಾರ ನೀಡಿದ್ದಾರೋ ಅವರನ್ನೆಲ್ಲ ಸದಾ ಸ್ಮರಿಸಿಕೊಳ್ಳುತ್ತಾ ಬಂದಿರುವುದು ಅವರ ಯಶಸ್ಸಿಗೆ ವರಪ್ರಸಾದವಾಗಿದೆ ಎಂದರು.
ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ರಾಜೀವ್ ಎಸ್.ಇ. ಅತಿಥಿಗಳಾಗಿ ಪಾಲ್ಗೊಂಡು ಶುಭಾಶಯ ಕೋರಿದರು.

ಕಟ್ಟಡದ ಮಾಲೀಕರೂ ಕುಂದಾಪುರ ಸಿ. ನಾರಾಯಣ ಆಚಾರ್ಯ ಇವರ ಪುತ್ರರಾದ ಡಾ. ಸಿಎ ನಾಗರಾಜ್ ಆಚಾರ್ ಮಾತನಾಡಿ, ಯಾವುದೇ ಸಾಧನೆ ಮತ್ತು ಯಶಸ್ಸಿನ ಹಿಂದೆ ಸತತವಾದ ಪರಿಶ್ರಮ, ಹಿರಿಯರ ಹಾಗೂ ಹಿತೈಷಿಗಳ ಆಶೀರ್ವಾದ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿ, ತಮ್ಮ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ. ಎಚ್.ಎಸ್. ರಾಜಸಿಂಹ,
ಸಿ. ನಾರಾಯಣ ಆಚಾರ್ (ಕುಂದಾಪುರ), ರತ್ನಾಕರ ಆಚಾರ್ (ತ್ರಾಸಿ), ಗೋಲಪ್ಪ ಗೋಸಾರ್ (ನವಲೂರು, ಧಾರವಾಡ), ಮಂಜುನಾಥ ಕನ್ಯಾಡಿ, ಚಂದ್ರಯ್ಯ ಆಚಾರ್ (ನಾಡಗುಡ್ಡೆಯಂಗಡಿ), ಅನಂತಯ್ಯ ಆಚಾರ್, ಚಂದ್ರಶೇಖರ್ ಎಸ್, ಟಿ. ವಿಶ್ವನಾಥ ಆಚಾರ್, ನಿಟ್ಟೆ ರಮೇಶ್ ಆಚಾರ್, ಶಿಲ್ಪಿ ಹೊನ್ನಪ್ಪ ಆಚಾರ್, ಜನಾರ್ದನ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅತ್ಯಂತ ವಿಭಿನ್ನವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಸಹಾಯಕ ಆಯುಕ್ತರಾದ ಎಮ್. ಎಲ್ ವಿನಾಯಕಾಚಾರ್ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ ರವರ ನಿರೂಪಣೆಯಲ್ಲಿ ಚಾಲನೆಗೊಂಡ ಈ ಕಾರ್ಯಕ್ರಮ ಡಾ. ಸಿಎ ನಾಗರಾಜ್ ಆಚಾರ್ ರವರ ವಂದನಾರ್ಪಣೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.



