ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಯಾರಾದರೂ ನಿಮಗೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಪೋಲೀಸ್ ಅಧಿಕಾರಿಗಳ ಡ್ರೆಸ್‌ನಲ್ಲಿ ಕುಳಿತು ಹೆದರಿಸಿ ನಿಮ್ಮ ಖಾತೆಯಿಂದ ಹಣ ವರ್ಗಾಯಿಸಲು ಹೇಳಿದರೆ ಮೋಸ ಹೋಗಿ ಹಣ ವರ್ಗಾಯಿಸಬೇಡಿ ಎಂದು ಪದೇ ಪದೇ ಮಾಧ್ಯಮಗಳಲ್ಲಿ ಎಚ್ಚರಿಸುತ್ತಾ ಬಂದರೂ ಮತ್ತೆ ಮತ್ತೆ ವಂಚನೆಗೊಳಗಾಗಿ ಹಣ ಕಳಕೊಳ್ಳುವವರು ಇದ್ದಾರೆ. ಇದೀಗ ಉಡುಪಿ ನಗರದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ ರೂ.9.29ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ವಾಸುದೇವ ಪ್ರಭು (76 ಅವರು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಜುಲೈ 2, 2026ರಂದು ಅಪರಿಚಿತರು ವಾಟ್ಸ್‌ಆಪ್ ಕರೆ ಮಾಡಿ, ಅವರ ಹೆಸರಿನಲ್ಲಿ ಮತ್ತೊಂದು ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಅದರಲ್ಲಿ ರೂ.೨ ಕೋಟಿ ಹಣದ ಮನಿ ಲಾಂಡರಿಂಗ್ ನಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಜಾರಿ ನಿರ್ದೇಶನಾಲಯ (ಇಆ) ಪ್ರಕರಣ ದಾಖಲಾಗಿದ್ದು, ಅದೇ ದಿನ ಸಂಜೆ ೪.೩೦ರೊಳಗೆ ಬಂಧಿಸಿ ಮುಂಬೈಗೆ ಕರೆದುಕೊಂಡು ಹೋಗಿ 45 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಈ ಬೆದರಿಕೆಗೆ ಹೆದರಿದ ವಾಸುದೇವ ಪ್ರಭು ಅವರು ಆರೋಪಿಗಳು ಸೂಚಿಸಿದ ಅಪರಿಚಿತ ಬ್ಯಾಂಕ್ ಖಾತೆಗೆ ಒಟ್ಟು ರೂ.೯,೨೯,೦೦೦ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS)) ಕಲಂ 111(4), 319(2), 308(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಕಲಂ 66(ಆ) ಅಡಿಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.



