ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜು.೨೪:
ನಮ್ಮ ದೇಶದಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ತೊಂದರೆಯಾಗಿದೆ. ಆ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ನೀಡಬೇಕೆಂದು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಹೇಳಿದರು. ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜು.24ರಂದು ಸಂಜೆ ಬ್ರಹ್ಮಾವರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ನಡೆಸಿದ ಸಿಂಧೂರ ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ಸೈನಿಕರಿಗೆ ತೊಂದರೆಯಾಗಿಲ್ಲ ಎಂಬ ಹೇಳಿಕೆ ನೀಡಿದ್ದರು. ಆದರೆ ಎರಡು ತಿಂಗಳ ನಂತರ ೬ ಸೈನಿಕರನ್ನು ಕಳಕೊಂಡಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಈ ರೀತಿ ಸುಳ್ಳು ಹೇಳಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
೬೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ನ ನೀತಿ ಏನಿತ್ತು ಹಾಗೂ ಈಗ 15 ವರ್ಷಗಳಿಂದ ಆಡಳಿತ ಮಾಡುತ್ತಿರುವ ಬಿಜೆಪಿಯ ನೀತಿ ಹೇಗಿದೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕಾಗಿದೆ. ನಾವು 60 ವರ್ಷದಲ್ಲಿ ಎಷ್ಟೋ ಯುನಿರ್ವಸಿಟಿ ಮಾಡಿದ್ದೇವೆ. ಎಷ್ಟೋ ಇಂಡಸ್ಟ್ರಿ ಕಟ್ಟಿದ್ದೇವೆ. ಬಿಜೆಪಿಯವರು ಬಂದು ನಮ್ಮ ನೋಟನ್ನೇ ಬ್ಯಾನ್ ಮಾಡಿದರು ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ ಮಾತನಾಡಿ ರಾಮನ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ. ಇನ್ನೊಂದೆಡೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡಲಾಗಿದೆ. ಈ ಎರಡು ಕೃತ್ಯಗಳಿಗೆ ಕ್ಷಮೆಯೇ ಇಲ್ಲ ಎಂದು ನುಡಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಮಾತನಾಡಿ ಪ್ರಶ್ನೆಪತ್ರಿಕೆ ಸೋರಿಕೆಯಾದುದರ ವಿರುದ್ಧ ಯುವಕರು 48 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಿದ್ದರೂ ಅವರನ್ನು ಕರೆದು ಮಾತನಾಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಶಿಕ್ಷಣ ಮಂತ್ರಿಯ ರಾಜೀನಾಮೆಯನ್ನು ಕೂಡಲೆ ಪಡಕೊಂಡಿದ್ದರೆ ಇಷ್ಟೊಂದು ಗಲಾಟೆಯೇ ನಡೆಯುವುದಿಲ್ಲವಾಗಿತ್ತು. ನಿಜಕ್ಕೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು ಕೇಂದ್ರ ಸರಕಾರದ ಈ ನಿರ್ಲಕ್ಷ ಖಂಡನೀಯ ಎಂದರು.
ಶ್ರೀಮತಿ ವೆರೋನಿಕ ಕರ್ನೆಲಿಯೋ ಮಾತನಾಡಿ ಹಗಲು ರಾತ್ರಿ ನಿದ್ದೆಗೆಟ್ಟು ವಿದ್ಯಾರ್ಥಿಗಳು ಓದಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯಾದುದರಿಂದ ೨೨ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳು ೪೮ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಸರಕಾರದ ಪ್ರತಿನಿಧಿಗಳು ಅವರನ್ನು ಸ್ಪಂಧಿಸದೇ ಇರುವುದು ಸರಿಯಲ್ಲ ಎಂದರು.

ಪ್ರತಿಭಟನಾ ಸಭೆಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಡಾ.ಸುನಿತಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಬು ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಆಚಾರ್ಯ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಕುಮ್ರಗೋಡು, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್ಜನ್ ನಾಯರಿ, ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಎಸ್. ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರ ಎನ್ಎಸ್ಯುಐ ಅಧ್ಯಕ್ಷ ಸುಜನ್ ಶೆಟ್ಟಿ, ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷ ಶರತ್ ಕುಂದರ್, ಬ್ರಹ್ಮಾವರ ಯುತ್ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಬಂಗೇರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೀರ್ತಿ ಶೆಟ್ಟಿ ಅಂಬಲಪಾಡಿ, ಕಾಂಗ್ರೆಸ್ನ ಪ್ರಮುಖರಾದ ಅಶೋಕ್ ನಾಯರಿ ನಿಡಂಪಳ್ಳಿ, ಕುಮಾರ್ ಸುವರ್ಣ ಹಾರಾಡಿ, ಸೂರ್ಯ ಸಾಲ್ಯಾನ್, ಪ್ರದೀಪ್ ಪೂಜಾರಿ, ಸತೀಶ್ ಸಾಲ್ಯಾನ್, ವಿಜಯ ನಾಯರಿ ಬ್ರಹ್ಮಾವರ, ವಸಂತ್ ಉಪ್ಪೂರು ಹಾಗೂ ಇನ್ನಿತರರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರ ಪ್ರತಿಕೃತಿ ದಹಿಸಿ, ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಬ್ರಹ್ಮಾವರ ಪೊಲೀಸರು ರಾಷ್ಟ್ರೀಯ ಹೆದ್ದಾರಿ ನಡೆಸಿದವರನ್ನು ವಶಕ್ಕೆ ಪಡೆದರು.



