udupimitra.in
  • July 26, 2026
  • Last Update July 26, 2026 4:29 pm
  • Brahmavara

ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ತಿಮ್ಮ ಪೂಜಾರಿ ಪದಪ್ರದಾನ ಸಮಾರಂಭ

ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ತಿಮ್ಮ ಪೂಜಾರಿ ಪದಪ್ರದಾನ ಸಮಾರಂಭ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಸಾಲಿಗ್ರಾಮ, ಜು.೨೬: ಯುವಕರಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯಲ್ಲಿ ನ್ಯಾಯಾಲಯ ಹಾಗೂ ಸರ್ಕಾರವಿತ್ತು. ಯುವಕರನ್ನು ಕಾಕ್ರೋಚ್‌ಗಳು ಎಂದು ಕರೆಯಲಾಯಿತು. ಆದರೆ, ಅಂತಹ ಯುವಜನತೆ ತಮ್ಮ ಸಾಮರ್ಥ್ಯ ಏನೆಂಬುದನ್ನು ದೆಹಲಿಯ ಜಂತರ್ ಮಂತರ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ೨೧ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಮುಂದೆ ನಡೆದ ಪರೀಕ್ಷೆಗೆ ಅದೆಷ್ಟೋ ಮಕ್ಕಳು ಹಾಜರಾಗಲಿಲ್ಲ ಹಾಗೂ ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಯಿತು. ಯಾರೋ ಒಬ್ಬರ ಮನೆಯ ಮಕ್ಕಳಿಗೆ ಸಮಸ್ಯೆಯಾದರೆ ನಮಗೇನು ಎಂಬ ಭಾವನೆ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಗಳ ಪರವಾಗಿ ನಿಲ್ಲಬೇಕು ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.
ಅವರು ಸಾಲಿಗ್ರಾಮದ ಚೇಂಪಿ ವಿಶ್ವಕರ್ಮ ಸಭಾಭವನದಲ್ಲಿ ನಡೆದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿಯವರ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ರಾಜಕಾರಣದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರ ಬಲದಿಂದ ನಾಯಕರಾಗುತ್ತಾರೆ. ಅಂತಹ ನಾಯಕರಾದವರು ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ವಹಿಸಿದ್ದರು.
ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ ದೇಶದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ. ಜಂತರ್ ಮಂಥರ್‌ನಲ್ಲಿ ಯುವ ಜನತೆ ಲಾಟಿಗೂ, ಗುಂಡಿಗೂ ಹೆದರದೆ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ ಎಂದರು.
, ಕೆ.ಪಿ.ಸಿ.ಸಿ. ಉಪಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ದೇಶದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ವಿದ್ಯಾರ್ಥಿಗಳು ಜಂತರ್ ಮಂತರ್ ನಲ್ಲಿ ಇದಕ್ಕೆ ತಕ್ಕ ಉತ್ತರ ನೀಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಲಂಡನ್, ಅಮೇರಿಕ, ಕೆನಡ, ನ್ಯೂಜಿಲ್ಯಾಂಡ್‌ನಲ್ಲೂ ಪ್ರತಿಭಟನೆಗಳು ನಡೆದವು. ಬಿಜೆಪಿಯವರು ದೇಶ ವಿರೋಧಿ ಶಕ್ತಿಗಳು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತಿದ್ದಾರೆ. ಅವರು ಯಾರು ಎಂಬುದನ್ನು ತೋರಿಸಿಕೊಡಬೇಕು. ಮೋದಿಯವರು ಲೋಕಸಭೆ ನಡೆಯುತ್ತಿರುವಾಗ ಅಲ್ಲಿ ಉತ್ತರ ಕೊಡುವುದನ್ನು ಬಿಟ್ಟು ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಬೇಕಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಪುನಃ ಬರಬೇಕು ಎಂದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ನಾವು ಶ್ರೀರಾಮನ ಹೆಸರನ್ನು ಹೇಳುತ್ತಾ ಪ್ರಾಣ ಬಿಟ್ಟ ಮಹಾತ್ಮ ಗಾಂಧೀಜಿಯವರ ಅನುಯಾಯಿಗಳು. ಕಾಂಗ್ರೆಸ್ ಎಂದಿಗೂ ರಾಮನ ಸಾಂಸ್ಕೃತಿಕ ಹಾಗೂ ಪೌರಾಣಿಕ ಅಸ್ತಿತ್ವವನ್ನು ಅಲ್ಲಗಳೆದಿಲ್ಲ. ಈ ಸತ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯೊಂದು ಮನೆಗೂ ತಲುಪಿಸಬೇಕು. ಜಂತರ್‌ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸಿದೆ. ಯುವಕರು ಜಾತಿ, ಮತ, ಧರ್ಮ, ಭಾಷೆಯನ್ನು ಬದಿಗಿಟ್ಟು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕಾಗಿ ಹೋರಾಡಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆದದ್ದು ಸರಿಯಲ್ಲ. ಎಂದು ನುಡಿದರು.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ, ಸದಾನಂದ ಗೌಡರು ಎಂ.ಪಿಯಾಗಿದ್ದರು. ಆದರೆ ಅವರಿಂದ ಏನೂ ಅಭಿವೃದ್ಧಿಯಾಗಲೇ ಇಲ್ಲ. ಬಿಜೆಪಿಯಲ್ಲಿ ದಡ್ಡತನ ಇದ್ದವರಿಗೆ ಪ್ರಮೋಷನ್ ಜಾಸ್ತಿ ಹಾಗೂ ಸರ್ಟಿಫಿಕೇಶ್ ಡೌಟು ಇರೋವವರಿಗೆ ಪ್ರಮೋಷನ್ ಜಾಸ್ತಿ. ಶೋಭಾ ಕರಂದ್ಲಾಜೆ ಇಲ್ಲಿ ನಿಂತರೆ ಗೆಲ್ಲುವುದಿಲ್ಲ ಎಂದು ಯೋಚಿಸಿ ಬೆಂಗಳೂರಿನಲ್ಲಿ ನಿಂತು ಗೆದ್ದರು. ಕೇಂದ್ರದ ಮಂತ್ರಿಯಾದರು. ಆಮೇಲೆ ಈ ಕ್ಷೇತ್ರದಲ್ಲಿ ಒಳ್ಳೆಯ ವ್ಯಕ್ತಿ ಎಂಪಿಯಾಗುತ್ತಾರಾ ಎಂದು ಯೋಚಿಸಿದರೆ ನಮ್ಮ ಗ್ರಹಚಾರಕ್ಕೆ ಕೋಟ ಶ್ರೀನಿವಾಸಣ್ಣ ಗೆದ್ದರು ಎಂದರು.


ಅಹಮದಬಾದ್ ಮಾಜಿ ಶಾಸಕ ಹಿಮ್ಮತ್ ಸಿಂಗ್ ಪಟೇಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ ಶಂಕರ್ ಕುಂದರ್ ಪಕ್ಷಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ನಿಗಮದಲ್ಲಿ ಅವರಿಗೆ ಅವಕಾಶ ನೀಡಬೇಕು. ತಿಮ್ಮ ಪೂಜಾರಿ ಕೂಡ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ದುಡಿದವರು. ೨೦೨೮ ರ ಚುನಾವಣೆಯಲ್ಲಿ ಕುಂದಾಪುರದಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ನುಡಿದರು.
ನೂತನ ಅಧ್ಯಕ್ಷ ತಿಮ್ಮ ಪೂಜಾರಿ ಮಾತನಾಡಿ ನಾನು ಕಾರ್ಯಕರ್ತರೊಂದಿಗೆ ಇರುತ್ತೇನೆ. ಕಾರ್ಯಕರ್ತರು ನನ್ನೊಂದಿಗೆ ಇದ್ದಲ್ಲಿ ನಾನು ಪ್ರಾಮಾಣಿಕವಾದ ಹೆಜ್ಜೆ ಇಡುತ್ತೇನೆ ಎಂದು ನುಡಿದರು.


ವೇದಿಕೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕೊಳ್ಕಬೈಲು ಕಿಶನ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಕೆಪಿಸಿಸಿ ಸದಸ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಬ್ಲಾಕ್ ಅಧ್ಯಕ್ಷ ಅಧ್ಯಕ್ಷ ರಮೇಶ್ ಕಾಂಚನ್, ನಾರಾಯಣಗುರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಪೂಜಾರಿ, ಕೋಟ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಖಾ ಪಿ. ಸುವರ್ಣ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮೆಂಡನ್, ಜಿಲ್ಲಾ ಘಟಕದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಬ್ರಹ್ಮಾವರ, ಶ್ರೀನಿವಾಸ ಅಮೀನ್ ಸಾಲಿಗ್ರಾಮ, ಕೋಟ ಬ್ಲಾಕ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಮತಾ ಶೆಟ್ಟಿ ಮಂದಾರ್ತಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾವಂಜೆ ರಮೇಶ್ ಶೆಟ್ಟಿ, ಉಡುಪಿ ಜಿಲ್ಲಾ ಎಸ್.ಸಿ.ಘಟಕ ಅಧ್ಯಕ್ಷ ಜಯಕುಮಾರ್, ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಂದಾಪುರ , ನಿರೀಕ್ಷಾ ಮೆಂಡನ್, ಕಾವಡಿ ಉದಯಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ರೋಷನ್ ಕುಮಾರ್ ಶೆಟ್ಟಿ, ಉಡುಪ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ವಕ್ತಾರ ವಿಕಾಸ ಹೆಗ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ , ಯುವ ಕಾಂಗ್ರೆಸ್ ಕೋಟ ಬ್ಲಾಕ್ ಅಧ್ಯಕ್ಷ ರಂಜಿತ್ ಕುಮಾರ್ ವೇದಿಕೆಯಲ್ಲಿದ್ದರು.

ಗೋಪಾಲ ಬಂಗೇರರವನ್ನು ಕೋಟ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಅಧಿಕಾರ ಹಸ್ತಾಂತರಿಸಲಾಯಿತು. ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಂಕರ್ ಕುಂದರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡು ತನ್ನ ಸುದೀರ್ಘ ಅವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು. ಗೋಪಾಲ ಬಂಗೇರ ವಂದಿಸಿದ್ದು ಡಾ.ಸುನಿತಾ ಶೆಟ್ಟಿ ಹಾಗೂ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ವಿನಯ ಕಮಾರ್ ಕಬ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page