ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಮೇ.೨೮: ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕೀರ್ತಿಶೇಷ ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮೇ೩೧ ಭಾನುವಾರದಂದು ಮಧ್ಯಾಹ್ನ ಗಂಟೆ 3.00ರಿಂದ ಕೋಟೇಶ್ವರ ಅಂಕದಕಟ್ಟೆ ಸಹನಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಜನ್ಮಶತಮಾನೋತ್ಸವ ಸಂಯೋಜಕ ಬಿ.ಉದಯಕುಮಾರ್ ಹೆಗ್ಡೆ ನುಡಿದರು. ಅವರು ಮೇ.28ರಂದು ಕುಂದಾಪುರದ ಹೋಟೆಲ್ ಶರೋನ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.

ಜನ್ಮಶತಮಾನೋತ್ಸವ ಕುಶಲ ಹೆಗ್ಡೆ ೧೦೦ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ರ‍್ಯಾಂಕ್ ವಿಜೇತರಿಗೆ ಗೌರವ, ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಖ್ಯಾತ ಕಾರ್ಯಕ್ರಮ ನಿರೂಪಕ ರಾಘವೇಂದ್ರ ಕಾಂಚನ್ ಮಾತನಾಡಿ ಬೆಂಗಳೂರು-ಕುಂದಾಪುರ ಕನ್ನಡ ಪ್ರತಿಷ್ಠಾನದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂಯೋಜಿಸಿದ ಕುಂದಾಪುರ ಕನ್ನಡ ಕಾರ್ಯಕ್ರಮದಲ್ಲಿ ಯಶಸ್ವಿಯಾದ ಪದ-ಪದ್ಯಗಳ ಮಧುರಾನುಭೂತಿ ಕಾಳಿಂಗ-ಕಾಳಿಂಗ ಕಾರ್ಯಕ್ರಮವನ್ನು ಇಲ್ಲಿ ಪ್ರದರ್ಶಿಸಲಾಗುವುದು. ಪ್ರಸಿದ್ಧ ಹಾಡುಗಾರ, ಸುಗಮ ಸಂಗೀತದ ಪಿತಾಮಹ ಪಾಂಡೇಶ್ವರ ಕಾಳಿಂಗ ರಾವ್ ಬಹಳ ಖ್ಯಾತರಾದವರು. ಆಕಾಶವಾಣಿಯಲ್ಲಿ ನಿರಂತರ ಅವರ ಹಾಡುಗಳು ಪ್ರಸಾರವಾಗುತ್ತಿದ್ದವು. ಕಾಳಿಂಗ ನಾವಡರು ಕರಾವಳಿಯ ಇನ್ನೊಂದು ಅದ್ಭುತ ಪ್ರತಿಭೆ. ಯಕ್ಷಗಾನಕ್ಕೆ ಹೊಸತನ ನೀಡಿದ ಯುಗ ಪ್ರವರ್ತಕ. ಈ ಇಬ್ಬರ ಭಾವಗೀತೆ ಹಾಗೂ ಭಾಗವತಿಕೆ ಎರಡನ್ನು ಸೇರಿಸಿ ಈ ಕಾರ್ಯಕ್ರಮ ಸಂಯೋಜಿಸಲಾಗುವುದು. ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಿರುವ ಡಾ| ದೀಪಕ್ ಶೆಟ್ಟಿ ಕಾಳಿಂಗ ನಾವಡರ ಬಗ್ಗೆ ನಿರೂಪಣೆ ಮಾಡಲಿದ್ದು, ಸುರೇಶ ಶೆಟ್ಟಿ ಎಸ್., ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತರಾಗಿ ಸಹಕರಿಸಲಿದ್ದಾರೆ.
ಚಂಡೆಯಲ್ಲಿ ಸುಜನ್ ಹಾಲಾಡಿ, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ ಸಹಕರಿಸಲಿದ್ದಾರೆ ಎಂದರು.

ಕಾಳಿಂಗ-ಕಾಳಿಂಗ ಎನ್ನುವ ಮಧುರಾನುಭೂತಿ
ರಾಘವೇಂದ್ರ ಕಾಂಚನ್, ಪಿ. ಕಾಳಿಂಗ ರಾವ್ ಬಗ್ಗೆ ನಿರೂಪಣೆ ಮಾಡಲಿದ್ದು, ಗಾಯನದಲ್ಲಿ ವಿನಯ್ ನಾಡಿಗ್, ಮೇಘನಾ ಕುಂದಾಪುರ, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಕೊಳಲಿನಲ್ಲಿ ಸಂದೀಪ್ ವಶಿಷ್ಟ, ತಬಲಾದಲ್ಲಿ ರಘುನಾಥ್, ರೀದಮ್ ನಲ್ಲಿ ಪ್ರವೀಣ್ ಷಣ್ಮುಖ ಸಹಕರಿಸಲಿದ್ದಾರೆ ಎಂದರು.
ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಯದರ್ಶಿ, ಕುಂದಪ್ರಭ ವಾರ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಮಾತನಾಡಿ ಗಿಳಿಯಾರು ಕುಶಲ ಹೆಗ್ಡೆಯವರು ವಿವಿಧ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಸಾರ್ವಜನಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಇವರು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರ ೧೦೦ನೇ ಜನ್ಮ ದಿನದ ಅಂಗವಾಗಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಟ್ರಸ್ಟಿನ ವಿಶ್ವಸ್ಥ ಜಿ.ಸಂತೋಷಕುಮಾರ್ ಶೆಟ್ಟಿ ಮಾತನಾಡಿ ಜನ್ಮ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದ್ದು ಎಲ್ಲರೂ ಭಾಗವಹಿಸುವಂತೆ ಕೋರಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಟ್ರಸ್ಟಿನ ವಿಶ್ವಸ್ಥರಾದ ನಾರಾಯಣ ಕೆ., ಕೆ.ಕೆ.ರಾಮನ್, ಶ್ರೀಮತಿ ಸ್ನೇಹಾ ಪಿ.ರೈ, ಬಿ.ಕಿಶೋರ್ ಹೆಗ್ಡೆ, ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣ್ಯರ ಉಪಸ್ಥಿತಿ :
ಸಮಾರಂಭವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಧಕರನ್ನು ಸಮ್ಮಾನಿಸಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಲಾವಿದರನ್ನು ಗೌರವಿಸಲಿದ್ದಾರೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವರು. ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅಭಿನಂದನಾ ನುಡಿ ಆಡಲಿದ್ದಾರೆ. ಕಾನ್ಫಿಡೆಂಟ್ ಡೆಂಟಲ್ ಇಕ್ಟಿಪ್‌ಮೆಂಟ್ ಪ್ರೈ. ಲಿ. ಬೆಂಗಳೂರು, ಆಡಳಿತ ನಿರ್ದೇಶಕ, ಡಾ| ಸುಭಾಶ್ಚಂದ್ರ ಶೆಟ್ಟಿ ಶಾಲೆಗೆ ನೆರವು ಹಸ್ತಾಂತರಿಸಲಿದ್ದಾರೆ. ಹಿರಿಯ ವಕೀಲ ಎ.ಎಸ್.ಎನ್.ಹೆಬ್ಬಾರ್ ಕುಶಲೋಪರಿ ನಡೆಸಲಿದ್ದಾರೆ. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ವೈದ್ಯಕೀಯ ನೆರವು ಹಸ್ತಾಂತರ ಮಾಡುವರು.
ಸಾಧಕರಿಗೆ, ಹಿರಿಯರಿಗೆ ಸನ್ಮಾನ :
ಈ ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯರನ್ನು, ಸಂಘ ಸಂಸ್ಥೆಗಳನ್ನು ಸಮ್ಮಾನಿಸಿ ಗೌರವಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಕೀಲ ವೃತ್ತಿಯಲ್ಲಿ ೫೦ ವರ್ಷ ಪೂರೈಸಿ ವೃತ್ತಿ ಸೇವೆಯಲ್ಲಿ ಮೆಚ್ಚುಗೆ ಪಡೆದ ಮಟ್ಟಿ ಮಾಧವ ರಾವ್, ಶಿಕ್ಷಕರಾಗಿ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಸ್ಥಾಪಿಸಿದ ಎಚ್. ಶ್ರೀಧರ ಹಂದೆ, ಕ್ರೀಡಾಪಟುವಾಗಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ ಎನ್. ವಸಂತ ರಾವ್, ರಂಗ ಕಲಾವಿದರಾಗಿ, ನಿರ್ದೇಶಕರಾಗಿ ಕ್ರಿಯಾಶೀಲರಾಗಿರುವ ಸತೀಶ ಪೈ (ಕುಳ್ಳಪ್ಪು), ತಮ್ಮ ನೃತ್ಯ ಪ್ರತಿಭೆ ಹಾಗೂ ತರಬೇತಿ ಮೂಲಕ ಭರತನಾಟ್ಯ ಜನಪ್ರಿಯರಾಗಿಸಿದ ವಿದುಷಿ ಭಾಗೀರಥಿ ಎಂ. ರಾವ್, ಕುಂದಾಪ್ರ ಕನ್ನಡವನ್ನು ಜನಪ್ರಿಯಗೊಳಿಸಿದ ಚೇತನ್ ನೈಲಾಡಿ, ನಾಟಕ ರಂಗದಲ್ಲಿ ನಿರಂತರ ಐದು ದಶಕಗಳಿಂದ ಸಾಧನೆ ಮಾಡುತ್ತಿರುವ ಲಾವಣ್ಯ (ರಿ.) ಬೈಂದೂರು, ಶಾಸ್ತ್ರೀಯ ಸಂಗೀತದಲ್ಲಿ ಮೂರು ದಶಕಗಳ ಕಾಲ ಯಶಸ್ವಿ ಪಯಣ ನಡೆಸುತ್ತಿರುವ ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ, ಕುಂದಾಪುರದಲ್ಲಿ ಪ್ರಥಮ ಸಮುದಾಯ ಬಾನುಲಿ ಕೇಂದ್ರ ಭಂಡಾರ್ ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ ೮೯.೬ ಎಫ್. ಎಂ., ಕುಂದಾಪ್ರ ನೆಲದ ಜನಪದ ಸಂಸ್ಕೃತಿ ಉಳಿಸಲು ಶ್ರಮಿಸುತ್ತಿರುವ ಶ್ರೀ ಗುರುಮಾರುತಿ ಪೌಂಡೇರಾಯನ ಜನಪದ ತಂಡ (ರಿ.) ಪಾರಂಪಳ್ಳಿ-ಸಾಲಿಗ್ರಾಮ ಇವರ ಸನ್ಮಾನ ನಡೆಯಲಿದೆ.



