• March 26, 2026
  • Last Update March 24, 2026 3:28 pm
  • Brahmavara

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಕರ್ಜೆ ; ಪದಗ್ರಹಣ ಸಮಾರಂಭ

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಕರ್ಜೆ ; ಪದಗ್ರಹಣ ಸಮಾರಂಭ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ , ಮೇ.೧೯:

ಪಕ್ಷ ಮೊದಲು, ಪಕ್ಷ ಇಲ್ಲದಿದ್ದರೆ ಸರ್ಕಾರವೇ ಇಲ್ಲ. ಆದ್ದರಿಂದ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪಕ್ಷ ಸಂಘಟನೆ ಮಾಡಬೇಕು. ಸರ್ಕಾರದ ಎಲ್ಲಾ ಸೌಲಭ್ಯವನ್ನು ಕೇವಲ ಅಧಿಕಾರಿಗಳಿಂದ ತಲುಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರಕಾರದ ಸೌಲಭ್ಯ ತಲುಪಿಸಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನುಡಿದರು. ಅವರು ಮೇ.೧೯ ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರ್ಜೆ ರಾಘವೇಂದ್ರ ಶೆಟ್ಟಿಯವರ ಪದಗ್ರಹಣ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ . ಈ ಸರಕಾರ ಉಳಿಯಲ್ಲ ಎಂದು ಬಿಜೆಪಿಯ ಆರ್. ಅಶೋಕ್ ಹಾಗೂ ಬಿ.ವೈ.ವಿಜಯೇಂದ್ರ ಹೇಳಿದ್ದರು. ನಮ್ಮ ಸರಕಾರ ಬಂದು ೨ ವರ್ಷ ಆಗಿದೆ. ಸರಕಾರ ಸುಭದ್ರವಾಗಿದೆ. ಕೇಂದ್ರ ಸರಕಾರ ಬಾಕಿ ಇರಿಸಿಕೊಂಡಿರುವ ಜಿಎಸ್ಟಿ ಮೊತ್ತವನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ ಸಂಸದರು ಪ್ರಯತ್ನ ಮಾಡುತ್ತಿಲ್ಲ. ಬಿಜೆಪಿಗರು ಅಭಿವೃದ್ಧಿಯ ವಿರೋಧಿಗಳು. ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷವಾಗಿಯೂ ಅವರು ಕೆಲಸ ಮಾಡುತ್ತಿಲ್ಲ ಎಂದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕಾಂಗ್ರೆಸ್ ಪಕ್ಷದ ಅಂದಿನ ಹಿರಿಯ ನಾಯಕರು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಆ ಇತಿಹಾಸ ಗೊತ್ತಿಲ್ಲದವರು ಏನೇನೋ ಮಾತನಾಡುತ್ತಿದ್ದಾರೆ. ನಮ್ಮ ನಾಯಕರು ಅಂದು ಮಾಡಿದ ಉತ್ತಮ ಕೆಲಸವನ್ನು ಜನರಿಗೆ ತಿಳಿಸುವ ಕೆಲಸವನ್ನು ಬೂತ್ ಮಟ್ಟದಲ್ಲಿ ಕಾರ್‍ಯಕರ್ತರು ಮಾಡಬೇಕು. ಯಾರು ಸ್ವತಃ ತಿರುಗಾಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರಿಂದ ಪಕ್ಷಕ್ಕೆ ಒಂದಷ್ಟು ಶಕ್ತಿ ದೊರಕಲಿದೆ. ರಾಘವೇಂದ್ರ ಶೆಟ್ಟಿ ನಿರಂತರವಾಗಿ ತಿರುಗಾಡಿ ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.   
ಕಾಂಗ್ರೆಸ್ ಮುಖಂಡ   ಪ್ರಸಾದ್ ರಾಜ್ ಕಾಂಚನ್ ಮಾತನಾಡಿ  ಯುವ ನಾಯಕ ಬೇಕೆಂದು ರಾಘವೇಂದ್ರ ಶೆಟ್ಟಿಯವರನ್ನು ನೇಮಿಸಲಾಗಿದೆ.  ನಾವು ಮುಂದಿನ ಚುನಾವಣೆಗೆ ೨೦೦೦೦ ಸಾವಿರ ಯುವ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಿದ್ದೇವೆ. ಅದಕ್ಕೆ ರಾಘವೇಂದ್ರ ಶೆಟ್ಟಿಯವರ ತಂಡ ಪ್ರಯತ್ನಿಸಬೇಕು. ಸಿದ್ದರಾಮಯ್ಯ ಕೊಟ್ಟ ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಇದನ್ನು ತಿಳಿಸುವ ಕೆಲಸ ಮಾಡಬೇಕು. ನಮ್ಮ ವಿರೋಧ ಪಕ್ಷದವರು ಕರ್ನಾಟಕ ದಿವಾಳಿಯಾಗುತ್ತದೆ ಎಂದಿದ್ದರು. ಅದು ಸುಳ್ಳಾಗಿದೆ ಎಂದರು.

ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಯೋಜನೆಗಳ ಬಗ್ಗೆ ಜನರಿಗೆ ಕಾರ್ಯಕರ್ತರು ತಿಳಿಸಬೇಕು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಒಂದೇ ಒಂದು ಎಂಎಲ್‌ಎ ಇಲ್ಲ. ಮುಂದೆ ಗೆಲುವು ನಮ್ಮದಾಗಬೇಕು. ಅದಕ್ಕೆ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಸಮಾರಂಭದಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ದಿನಕರ ಹೇರೂರು ನೂತನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ರಾಘವೇಂದ್ರ ಶೆಟ್ಟಿ ಮಾತನಾಡಿ ಬ್ರಹ್ಮಾವರ ಬ್ಲಾಕ್‌ನ ಗ್ರಾಮಮಟ್ಟದಲ್ಲಿ ಪಕ್ಷ ಬೆಳೆಸದೇ ಇದ್ದಲ್ಲಿ ನಮಗೆ ಗೆಲುವು ಅಸಾಧ್ಯ. ಪಂಚಾಯತ್‌ಮಟ್ಟದಲ್ಲಿ ಬಲಿಷ್ಠ ತಂಡ ಕಟ್ಟುವುದೇ ನಮ್ಮ ಗುರಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಾವರ ಬ್ಲಾಕ್ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಮುಖಂಡರುಗಳಾದ ಉಡುಪಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಲಾವಣ್ಯ ಬಲ್ಲಾಳ್, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಶ್ರೀಮತಿ ಸರಳ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಶ್ರೀಮತಿ ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಸುಕುಮಾರ ಕಾಪು, ಸಂತೋಷ ಕುಲಾಲ್ ಕಾಪು, ಕೋಟ ಬ್ಲಾಕ್ ಶಂಕರ ಕುಂದರ್ , ಹರಿಪ್ರಸಾದ್ ರೈ, ಕಿರಣ್ ಹೆಗ್ಡೆ, ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಕೃಷ್ಣ ಶೆಟ್ಟಿ ಬಜಗೋಳಿ, ರಮೇಶ್ ಶೆಟ್ಟಿ ಹಾವಂಜೆ, ಭುಜಂಗ ಶೆಟ್ಟಿ ಬ್ರಹ್ಮಾವರ, ಇರ್ಮಾಡಿ ಸುಧಾಕರ ಶೆಟ್ಟಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಗೋಪಿ.ಕೆ.ನಾಯ್ಕ್, ಕಾಂಗ್ರೆಸ್‌ನ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ದಿನಕರ ಹೇರೂರು ಅವರನ್ನು ಸನ್ಮಾನಿಸಲಾಯಿತು. ಸುದೇಶ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮವನ್ನು ವೀಕ್ಷಿತ್ ಶೆಟ್ಟಿ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page