ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ,ಅ.24:
2019 ವಿಶ್ವ ಕಂಡ ಕೆಟ್ಟ ವರ್ಷ. ವಿಪರೀತ ಮೊಬೈಲ್ ಬಳಕೆಯಿಂದ ಈ ಸಂದರ್ಭ ಶೇ. 30 ರಷ್ಟು ಮಕ್ಕಳಿಗೆ ಕಣ್ಣಿನ ತೊಂದರೆಯಾಗಿದೆ. ಮಕ್ಕಳಿಗಾಗಿ ಸರಕಾರ ಎಚ್ಚೆತ್ತುಕೊಳ್ಳಬೇಕು. ಗೋವ ಸರ್ಕಾರದಂತೆ ಅಂಧತ್ವ ನಿವಾರಣೆಗೆ ಯೋಜನೆ ರೂಪಿಸಬೇಕು. ದೃಷ್ಟಿ ದೋಷವಿದ್ದರೆ ನಮ್ಮ ಮಕ್ಕಳಿಗೆ ಮುಂದೆ ಕೆಲವು ಉದ್ಯೋಗದಲ್ಲೂ ಅವಕಾಶ ಸಿಗಲ್ಲ ಎಂದು ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ | ಕೃಷ್ಣಪ್ರಸಾದ್ ನುಡಿದರು.

ಅವರು ಬ್ರಹ್ಮಾವರ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ಗೋವಿಂದರಾಜ್ ಹೆಗ್ಡೆ ನೇತೃತ್ವದಲ್ಲಿ ಅ.24ರಂದು ಬ್ರಹ್ಮಾವರ ಫೌಂಡೇಶನ್ ರಿ. ಬ್ರಹ್ಮಾವರ-ಬಾರ್ಕೂರು ಲಯನ್ಸ್ & ಲಿಯೋ ಕ್ಲಬ್, ಬ್ರಹ್ಮಾವರ ಅಭಿವೃದ್ಧಿ ಸಮಿತಿ (ರಿ.) ಇವರ ಸಹಭಾಗಿತ್ವದಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದೊಮ್ಮೆ ಕಣ್ಣಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಲಭಿಸದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದರು. ವೈದ್ಯರ ಪ್ರಯತ್ನದಿಂದ ಕಣ್ಣಿನ ವಿಷಯದಲ್ಲಿ ಪ್ರಸ್ತುತ ಶೇ.೯೦ ರಷ್ಟು ಚಿಕಿತ್ಸೆ ಲಭಿಸುತ್ತಿದೆ. ಪ್ರಸಾದ್ ನೇತ್ರಾಲಯದಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಉದ್ಘಾಟಕರಾಗಿ ಭಾಗವಹಿಸಿದ್ದ ಲಿಟ್ಲರಾಕ್ ಇಂಡಿಯನ್ ಸ್ಕೂಲ್ ನಿರ್ದೇಶಕ ಮ್ಯಾಥ್ಯೂ ಸಿ.ನೈನಾನ್ ಮಾತನಾಡಿ ವಾಹನಗಳ ಚಾಲನೆ ಮಾಡುವ ಚಾಲಕರು ಕಣ್ಣಿನ ಚಿಕಿತ್ಸೆಯನ್ನು ತಪ್ಪದೇ ಮಾಡಿಕೊಳ್ಳಬೇಕು. ಬ್ರಹ್ಮಾವರ ಫೌಂಡೇಶನ್ ರಿ. ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.
ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ | ಅಜಿತ್ ಕುಮಾರ್ ಶೆಟ್ಟಿ ಮಾತನಾಡಿ ಕಣ್ಣಿನ ವಿಷಯದಲ್ಲಿ ನಿರ್ಲಕ್ಷ ಸರಿಯಲ್ಲ. ಸಾರ್ವಜನಿಕರಿಗಾಗಿ ಆಯೋಜಕರು ಕಷ್ಟಪಟ್ಟು ಮಾಡುವ ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕ ಎಂದರು.

ಬ್ರಹ್ಮಾವರ ಫೌಂಡೇಶನ್ (ರಿ.)ಪ್ರವರ್ತಕ ಗೋವಿಂದರಾಜ್ ಹೆಗ್ಡೆಯವರು ಮಾತನಾಡಿ ಬ್ರಹ್ಮಾವರ ಫೌಂಡೇಶನ್ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ರೋಗಿಗಳಿಗೆ ಸಹಾಯ ಮಾಡುವುದು, ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಸಂಬಂದಿತ ಕಾರ್ಯಕ್ರಮಗಳು ನಡೆಸುತ್ತಾ ಬಂದಿದ್ದೇವೆ. ಇಂದು ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಉಳ್ಳವರಿಗೆ ಉಚಿತವಾಗಿ ಕನ್ನಡಕವನ್ನು ನೀಡಲಿದ್ದೇವೆ. ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಡುಪಿಯ ಪ್ರಸಾದ್ ನೇತ್ರಾಲಯ, ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಮರುದಿನ ಕರೆದು ತಂದು ಬಿಡಲಾಗುವುದು ಎಂದರು.

.ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಹೆಗ್ಡೆ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ವಿನಯ್, ಜೇಮ್ಸ್ ಡಿಸಿಲ್ವಾ ಉಪಸ್ಥಿತರಿದ್ದರು.
ಮಳೆಯಿಂದ ಮನೆಗೆ ಹಾನಿಗೊಳಗಾದ ಆರ್ಥಿಕ ಅಶಕ್ತರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.ಚೇತನ್ ಜಿ. ಪೂಜಾರಿ ವಂದಿಸಿದ್ದು ಶರತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಪ್ರಸಾದ್ ನೇತ್ರಾಲಯದ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳು ತಪಾಸಣೆಯಲ್ಲಿ ಭಾಗಿಯಾದರು. ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಸದಸ್ಯರು ಸಹಕರಿಸಿದರು. ಶಿಬಿರದಲ್ಲಿ 528 ಮಂದಿ ಭಾಗವಹಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. 292 ಮಂದಿ ಉಚಿತ ಕನ್ನಡಕಕ್ಕೆ ಹಾಗೂ 78 ಮಂದಿ ಕಣ್ಣಿನ ಪೊರೆ ಚಿಕಿತ್ಸೆಗೆ ನೊಂದಾಯಿಸಿಕೊಂಡರು.



