ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಅ.೨೪:
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಇದರ ಹಿಂದಿನ ಆಡಳಿತ ಮಂಡಳಿಯ ದಕ್ಷ ಆಡಳಿತ ಮತ್ತು ಸದಸ್ಯರ ಸರ್ವ ರೀತಿಯ ಸಹಕಾರ ಸೂಕ್ತ ಮಾರ್ಗದರ್ಶನದಿಂದ ಜಿಲ್ಲೆಯಲ್ಲಿ ಪ್ರತಿಷ್ಠಿತ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಸಂಸ್ಥೆಯು ನಿರಂತರವಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದ ಸಹಕಾರಿ ಪ್ರಶಸ್ತಿಯನ್ನು ಗಳಿಸುತ್ತಿದ್ದು 11 ಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟಂತೆ ಪ್ರಧಾನ ಕಛೇರಿ ಉನ್ನತಿ ಸೇರಿದಂತೆ ಒಂಬತ್ತು ಶಾಖೆಗಳನ್ನು ಮತ್ತು ಒಂದು ಮಾರಾಟ ಮಳಿಗೆಯನ್ನು ಹವಾನಿಯಂತ್ರಿತ ಸ್ವಂತ ಕಟ್ಟಡದಲ್ಲಿ ಹೊಂದಿದ್ದು ಜನರಿಗೆ ಉತ್ತಮ ಸೇವೆ ನೀಡುತ್ತಿದೆ. 2025-26ನೇ ಸಾಲಿನಲ್ಲಿ 110 ವರ್ಷದ ಸಂಭ್ರಮದಲ್ಲಿ ಇರುವ ಸಂಸ್ಥೆಯು ದಿನಾಂಕ 25.10.2025ರ ಭಾನುವಾರ ಬ್ರಹ್ಮಾವರ ರುಡ್‌ಸೆಟ್ ಹತ್ತಿರದ ದೇವಕಿ ಕನ್ವೆನ್ಷನ್ ಸೆಂಟರ್ನಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಯಕ್ಷಗಾನ ಕಾರ್ಯಕ್ರಮಗಳ ಸಮ್ಮಿಲನವಾಗಿ ಉನ್ನತಿ ವೈಭವ 2025 ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ದಿನ ಬೆಳಿಗ್ಗೆ 9.00 ರಿಂದ ಸಾಂಸ್ಕೃತಿಕ ವೈಭವ ಆರಂಭಗೊಳ್ಳಲಿದ್ದು ಸಂಘವು ತನ್ನ ವ್ಯಾಪ್ತಿಯ 10 ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ ಮತ್ತು ಜನಪದ ಕಲಾ ಸ್ಪರ್ಧೆ ನಡೆಯಲಿದೆ. ಈ ಸಾಂಸ್ಕೃತಿಕ ವೈಭವವನ್ನು ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಶೆಟ್ಟಿ ಉದ್ಘಾಟಿಸಲಿದ್ದು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಾಮಣ್ಣ ಅಡಿಗ, ಹಿರಿಯರಾದ ಭಾಸ್ಕರ ರೈ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಗಂಟೆ 2.00ರಿಂದ ಶೈಕ್ಷಣಿಕ ವೈಭವದ ಪ್ರಯುಕ್ತ ಸರಿಸುಮಾರು 600 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ತರಬೇತುದಾರರು ಮತ್ತು ಮೋಟಿವೇಟರ್ ಶ್ರೀ ರಾಜೇಂದ್ರ ಭಟ್ ಇವರಿಂದ ಸಂಸ್ಕಾರ ಮತ್ತು ಜೀವನಶೈಲಿಯ ಕುರಿತು ದಿಕ್ಸೂಚಿ ಭಾಷಣ ನಡೆಸಲಾಗುವುದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೀರ್ತಿಶೇಷ ಇರ್ಮಾಡಿ ತಿಮ್ಮಪ್ಪ ಹೆಗ್ಡೆಯವರ ಸಂಸ್ಮರಣೆ, ಸಂಘದ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಕೃಷಿಕರಿಗೆ, ಹೈನುಗಾರರಿಗೆ ಸನ್ಮಾನ ಮತ್ತು ಸಂಘದ ಹಿರಿಯ ಪಿಗ್ಮಿಸಂಗ್ರಹಕಾರರು, ರಾತ್ರಿ ಕಾವಲುಗಾರರು ಮತ್ತು ಚಿನ್ನ ಪರಿಶೀಲನದಾರರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿರ್ತಿ ರಾಜೇಶ್ ಶೆಟ್ಟಿ ವಹಿಸಲಿದ್ದು ಶಾಸಕರಾದ ಯಶಪಾಲ ಸುವರ್ಣ ಇವರು ಉನ್ನತಿ ವೈಭವ 2025 ಉದ್ಘಾಟಿಸಲಿದ್ದಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸರಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದಿನಕರ ಹೇರೂರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿ ಪ್ರಸಾದ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ, ಸಹಕಾರಿ ಉಪನಿಬಂಧಕದ ಶ್ರೀಮತಿ ಲಾವಣ್ಯ, ಮಾಜಿ ಅಧ್ಯಕ್ಷರಾದ ವೆಂಕಟರಾಯ ನಾಯಕ್ ಉಪಸ್ಥಿತರಿರುವರು. ನಿರ್ದೇಶಕ ಜ್ಞಾನ ವಸಂತಶೆಟ್ಟಿ ಇರ್ಮಾಡಿ ತಿಮ್ಮಪ್ಪ ಹೆಗ್ಡೆ ಸಂಸ್ಮರಣೆ ಮಾಡಲಿದ್ದಾರೆ. ಸಂಜೆ 5.30 ರಿಂದ ಯಕ್ಷವೈಭವದ ಪ್ರಯುಕ್ತ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಯಕ್ಷಕಲಾ ತಂಡ ಮತ್ತು ಪ್ರಸಿದ್ಧ ಅತಿಥಿ ಕಲಾವಿದರಿಂದ ಮಾರುತಿ ಪ್ರತಾಪ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಬಿರ್ತಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.



