ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ನ.23: ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.) ಅಂಬೇಡ್ಕರ್ ವಾದ ಬ್ರಹ್ಮಾವರ ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಶೋಷಿತ ಜನಜಾಗೃತಿ ಸಮಾವೇಶ ಬ್ರಹ್ಮಾವರ ಆಶ್ರಯ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ ಕರ್ನಾಟಕ ಸಂಘರ್ಷ ಸಮಿತಿಯಲ್ಲಿ ಕಳೆದ ೫೦ ವರ್ಷಗಳಿಂದ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಹೋರಾಟ ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಈಗಿನ ಎಲ್ಲಾ ಪದಾಧಿಕಾರಿಗಳದ್ದು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮಾತನಾಡಿ ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶೋಷಿತರ, ಬಡವರ ಪರವಾಗಿ ನಿಂತು ಕೆಲಸ ಮಾಡುತ್ತೇವೆ. ಕೊಲ್ಲೂರಿನಲ್ಲಿ ಗಂಗೆ ಕೊರಗರವರ ಮನೆಯನ್ನು ಜೆಸಿಬಿಯಿಂದ ಕೆಡವಿದಾಗ ದಲಿತ ಸಂಘರ್ಷ ಸಮಿತಿ ಮುಂದೆ ನಿಂತು ಹೋರಾಟ ನಡೆಸಿ ಕೊರಗ ಮಹಿಳೆಗೆ ಅದೇ ಜಾಗದಲ್ಲಿ ನಿವೇಶನ ಮತ್ತು ಮನೆಯನ್ನು ಕೊಡಿಸುವ ಕೆಲಸ ಮಾಡಿದ್ದೇವೆ ಎಂದರು.

ಜಿಲ್ಲಾ ಪ್ರಧಾನ ಸಂಚಾಲಕ, ನ್ಯಾಯವಾದಿ ಮಂಜುನಾಥ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡುತ್ತಾ ಸಮಾಜದಲ್ಲಿ ಅಂದಿನ ಅಸ್ಪ್ರಶ್ಯತೆ ಇಂದು ಕಡಿಮೆಯಾಗಿರಬಹುದು ಆದರೆ ನಮ್ಮ ಯುವಕರನ್ನು ಬಳಸಿಕೊಂಡು ಸುಳ್ಳು ಅಟ್ರಾಸಿಟಿ ದಾಖಲಿಸುವುದು ಜಾಸ್ತಿಯಾಗಿದೆ. ನಮ್ಮ ಸಮುದಾಯದ ಯುವಕರು ಜಾಗೃತರಾಗಬೇಕು. ಹಿರಿಯರು ಹೋರಾಟದ ಮಾರ್ಗದಿಂದ ನಮ್ಮ ಸಂಘಟನೆಗೆ ಬಲ ತುಂಬಿದ್ದಾರೆ. ಆ ಹೋರಾಟದ ಮಾರ್ಗವನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗಿ ಮುಂದಿನ ಜನಾಂಗಕ್ಕೆ ದಾಟಿಸಬೇಕು ಎಂದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ ಮೀಸಲಾತಿಯನ್ನು ಅಂದು ಕಾಂಗ್ರೆಸ್ ಸರಕಾರ ತಂದು ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಪ್ರಥಮ ಕಾನೂನು ಸಚಿವರಾಗಿ ಸಂವಿಧಾನ ರಚಿಸಿದ್ದು ಆ ಸಂವಿಧಾನ ಮಾರ್ಗದಲ್ಲಿ ದೇಶದ ಜನತೆ ಸಾಗುತ್ತಿದ್ದಾರೆ. ಅಂಬೇಡ್ಕರ್‌ರ ಈ ಕೊಡುಗೆ ಮಹತ್ತರವಾದುದು ಎಂದರು.
ಉದ್ಯಮಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಸ್.ನಾರಾಯಣ ಮಾತನಾಡಿ ನಾವು ಈ ಮಟ್ಟಕ್ಕೆ ಬರಬೇಕಾದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕಾರಣರು ಎಂದರು.
ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ಶ್ರೀಮತಿ ವಸಂತಿ ಶಿವಾನಂದ್, ಗೀತಾ ಸುರೇಶ್ ಕುಮಾರ್, ಕುಸುಮಾ ಕಟ್ಕರೆ, ಅಣ್ಣಪ್ಪ ನಕ್ರೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ಭಾಸ್ಕರ ನಿಟ್ಟೂರು, ಶಿವರಾಜ್ ಬೈಂದೂರು, ರಾಘವ ಕುಕ್ಕುಜೆ, ಶಂಕರದಾಸ್ ಚೇಂಡ್ಕಳ, ದೇವು ಹೆಬ್ರಿ, ರಾಜೇಂದ್ರನಾಥ ಕಾಪು, ಕುಮಾರ್ ಕೋಟ, ಶ್ಯಾಮ ಸುಂದರ್ ತೆಕ್ಕಟ್ಟೆ ಉಪಸ್ಥಿತರಿದ್ದರು.

ಇದೇ ಸಂದರ್ಭ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ನಡೆದಿದ್ದು
ಭಾಸ್ಕರ್ ಮಾಸ್ಟರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಂಕರ್ ದಾಸ್ ಹೋರಾಟದ ಹಾಡನ್ನು ಹಾಡಿದರು. ಹೈಸ್ಕೂಲು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ, ವಿಭಾಗೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿ ನಂತರ ದಕ್ಷಿಣ ಭಾರತ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಈಗ ಕಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಟಕ ಕ್ಯೂರಿಯಸ್ ಇದರ ರಚನೆಕಾರ ವರದರಾಜ್ ಬಿರ್ತಿ ಮತ್ತು ಶ್ರೇಷ್ಟ ನಿರ್ದೇಶಕ ಪ್ರಶಸ್ತಿ ಪಡೆದ ರೋಹಿತ್ ಬೈಕಾಡಿ ಇವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು. ಸುಧಾಕರ ಮಾಸ್ಟರ್ ವಂದಿಸಿದ್ದು ಶರತ್ ಆರೂರು, ಲಿಂಗಪ್ಪ ಮಾಸ್ಟರ್ ಬಿರ್ತಿ ಹಾಗೂ ಸದಾನಂದ ಹಂಗಾರಕಟ್ಟೆ ನಿರೂಪಿಸಿದರು,



