ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.)ಕೊಡವೂರು ಇದರ ಆಡಳಿತ ಮಂಡಳಿಯು ಸಹಕಾರಿ ಸಂಘದ ಸ್ವಂತ ಸ್ಥಳದಲ್ಲಿ ಸುಂದರವಾದ ಪ್ರಧಾನ ಕಚೇರಿಯ ಹವಾನಿಯಂತ್ರಿತ ‘ಸಮೃದ್ಧಿ’ ಹೆಸರಿನ ಕಟ್ಟಡ ನಿರ್ಮಿಸಿದ್ದು ಇದರ ಉದ್ಘಾಟನಾ ಸಮಾರಂಭ ಡಿಸೆಂಬರ್ ೭ ಅದಿತ್ಯವಾರ ಬೆಳಿಗ್ಗೆ ಗಂಟೆ ೧೦.೦೦ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ ನಾರಾಯಣ ಬಲ್ಲಾಳ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ್ ಜತ್ತನ್ ತಿಳಿಸಿದ್ದಾರೆ.
ನೂತನ ಕಟ್ಟಡವನ್ನು ಗ್ರಾಹಕರ ಅನುಕೂಲಕ್ಕೆ ಸ್ವಂತ ಜಾಗದಲ್ಲಿ ಬಹಳ ಸುಂದರವಾಗಿ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸಿಬ್ಬಂದಿಗಳ ಕಚೇರಿಯನ್ನು ಕೆಳಗಡೆಯೇ ನಿರ್ಮಿಸಲಾಗಿದೆ. ಆಡಳಿತ ಮಂಡಳಿ ಸಭಾಂಗಣ, ಭದ್ರತಾ ಕೊಠಡಿ, ಗ್ರಾಹಕರ ಭದ್ರತಾ ಕೋಶ, ಪಡಿತರ ಗೋಧಾಮ ಕಡತಗಳ ಕೊಠಡಿ, ನವೋದಯ ಪ್ರೇರಕರ ಕಚೇರಿ, ಮಿನಿ ಸಭಾಂಗಣವನ್ನು ಇಲ್ಲಿ ನಿರ್ಮಿಸಿದ್ದು ಜನರ ಅನುಕೂಲಕ್ಕೆ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಆಡಳಿತ ಮಂಡಳಿ ಸಭಾಂಗಣವನ್ನು ಕರ್ನಾಟಕ ಸರಕಾರದ ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲನೆ ಮಾಡಲಿದ್ದು ಸಭಾ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ ಎ. ಸುವರ್ಣ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ P. ನಾರಾಯಣ್ ಬಲ್ಲಾಳ್ ವಹಿಸಲಿದ್ದು ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಗ್ರಾಹಕರ ಭದ್ರತಾ ಕೋಶವನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ್‌ಮದ್ವರಾಜ್ ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ಸದಸ್ಯರ ಅನುಕೂಲಕ್ಕೆ ನಿರ್ಮಿಸಲಾದ ಲಿಫ್ಟನ್ನು ಮಾಜಿ ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದು ನವೋದಯ ಪ್ರೇರಕರ ಕಛೇರಿಯನ್ನು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ. ಮಿನಿ ಸಭಾಂಗಣವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿದ್ದು ಕಡತಗಳ ಕೊಠಡಿಯನ್ನು ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲ ಕುಮಾರಿ ಉದ್ಘಾಟಿಸಲಿದ್ದಾರೆ. ಗೋದಾಮು ಕೊಠಡಿಯನ್ನು ಉಪತಹಶೀಲ್ದಾರ್ ಶ್ರೀಮತಿ ಆಶಾ ಕೆ. ಉದ್ಘಾಟಿಸಲಿದ್ದಾರೆ.
ಬೆಳಕು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರ, ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ರಾಜೇಶ್ ರಾವ್ ಪಾಂಗಾಳ, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ. ಆರ್, ಸಹಕಾರ ಸಂಘಗಳ ಸಹಾಯಕ ನಿಬಂಧಕದ ಶ್ರೀ ಸುಧೀರ್ ಕುಮಾರ್ ಹಾಗೂ ಕೊಡವೂರು ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನಿರ್ದೇಶಕರಾದ ಬಿ ದಿನೇಶ್ ಪೈ, ಮನೋಜ್ ಆರ್ ಕರ್ಕೆರ, ನವೀನ್ ಶೆಟ್ಟಿ ಮೂಡುಬೆಟ್ಟು, ಶ್ರೀಶ ಕೊಡವೂರು, ಪ್ರಕಾಶ್ ಜಿ ಕೊಡವೂರು, ರತ್ನಾಕರ ಅಮೀನ್, ಸುರೇಶ್ ಶೆಟ್ಟಿ ಮೂಡಬೆಟ್ಟು, ಎನ್. ಭೋಜ ಕೊಡವೂರು, ಸತೀಶ್ ನಾಯ್ಕ್, ಶ್ರೀಮತಿ ಜ್ಯೋತಿ, ಶ್ರೀಮತಿ ಲಲಿತ ಜತ್ತನ್, ಕೆ.ಕಾಳು ಸೇರಿಗಾರ್, ಜಯಶೀಲ ಸುವರ್ಣ ಕಡೆಕಾರ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೯.೦೦ರಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರವೀಂದ್ರ ಪ್ರಭು ಮುಲ್ಕಿ ಸಾರಥ್ಯದ ರಾಗ್-ರಂಗ್ ತಂಡದಿಂದ ಸುಗಮ ಸಂಗೀತ ಹಾಗೂ ಮಧ್ಯಾಹ್ನ ೨ ಗಂಟೆಯಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಹಿಲ್ಲೂರು ರಾಮಕೃಷ್ಣ ಹೆಗಡೆ, ಸುನಿಲ್ ಭಂಡಾರಿ, ಶಿವಾನಂದ ಕೋಟ, ಬಳ್ಕೂರು ಕೃಷ್ಣಯಾಜಿ, ಸುಬ್ರಹ್ಮಣ್ಯ ಚಿಟ್ಟಾಣಿ, ಸಂತೋಷ್ ಹಿಲಿಯಾಣ, ವಿನಯ್ ಬೇರೊಳ್ಳಿ, ನಾಗೇಶ್ ಕುಳಿಮನೆ, ನಾಗೇಂದ್ರ ಮುರೂರು ಹಾಗೂ ರಕ್ಷಿತ್ ಕುಳಿಮನೆ ಇವರ ಕೂಡುವಿಕೆಯಲ್ಲಿ ಯಕ್ಷಗಾನ ‘ಚಂದ್ರಹಾಸ ಚರಿತ್ರೆ’ ಪ್ರದರ್ಶನಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ್ ಜತ್ತನ್ ತಿಳಿಸಿದ್ದಾರೆ.



