• February 9, 2026
  • Last Update February 2, 2026 6:06 pm
  • Brahmavara

ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನ :ದೇವತಾ ರೂಪದಲ್ಲಿ ನಂದಿ ಆಗಮಿಸಿದೆ – ಅನಂತ ಪದ್ಮನಾಭರವರ ಹೇಳಿಕೆ

ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನ :ದೇವತಾ ರೂಪದಲ್ಲಿ  ನಂದಿ ಆಗಮಿಸಿದೆ – ಅನಂತ ಪದ್ಮನಾಭರವರ ಹೇಳಿಕೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಡಿ.೬ : ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀಣೋದ್ಧಾರ ಕೆಲಸವನ್ನು ಹಮ್ಮಿಕೊಂಡಿದ್ದು ಶಿಲಾ ಕೆಲಸದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಏಪ್ರಿಲ್‌ನಲ್ಲಿ ನಡೆಯುವ ರಥೋತ್ಸವದ ನಂತರ ದೇವಸ್ಥಾನದ ಹಳೆ ಗುಡಿಯನ್ನು ತೆಗೆದು ನೂತನ ಗುಡಿಯ ಕೆಲಸ ಆರಂಭವಾಗಲಿದೆ.



ಜೀರ್ಣೋದ್ಧಾರದ ಸಂದರ್ಭವೇ ಹಳೆಯ ಧ್ವಜ ಮರ ತೆಗೆದು ನೂತನ ಧ್ವಜಮರವನ್ನು ಸ್ಥಾಪಿಸಲು ಅದರ ಕೆಲಸವೂ ಆರಂಭಗೊಂಡಿದೆ.. ದೇವಸ್ಥಾನದ ಧ್ವಜ ಮರಕ್ಕೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಹಾಗೂ ಕುಟುಂಬಸ್ಥರು ಸುಳ್ಯದಿಂದ ಮರವೊಂದನ್ನು ತಂದು ಅರ್ಪಿಸಿದ್ದಾರೆ. ಈ ಮರವನ್ನು ಕಳೆದ ಜನವರಿಯಲ್ಲಿ ದೇವಸ್ಥಾನದ ಕೆರೆಯಲ್ಲಿ ನೀರಿಗೆ ಹಾಕಲಾಗಿತ್ತು. ನಂತರ ಅಗಸ್ಟ್ ತಿಂಗಳಲ್ಲಿ ಕೆರೆಯಿಂದ ಮೇಲಕ್ಕೆ ತೆಗೆದು ಒಣಗಲು ಬಿಡಲಾಗಿತ್ತು. ಡಿ.೫ರಂದು ಧ್ವಜಮರದ ಕೆಲಸಕ್ಕೆ ಮಹೂರ್ತ ನಿಗದಿಗೊಳಿಸಿ ಪೂಜೆ ಸಲ್ಲಿಸಲಾಗಿತ್ತು. ದೇವರ ನೂತನ ಧ್ವಜಮರ ಮಹೂರ್ತ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರನಿಗೆ ಏಕಾದಶರುದ್ರ, ಅಭಿಷೇಕ ಹಾಗೂ ಮಹಾಪೂಜೆ ಮುಗಿಸಿ ನಂತರ ನೂತನ ಧ್ವಜಮರದ ಪೂಜೆಗೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಕ್ತಾದಿಗಳು ಹಾಗೂ ಅರ್ಚಕರು ಆಗಮಿಸಿ ಪೂಜೆ ನೆರವೇರಿಸಿದ್ದರು.
ನಂದಿಯ ಆಗಮನ !
ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷ ಮೇಷ ಮಾಸದ ಚಿತ್ರಾಪೌರ್ಣಮಿಯಂದು ನಡೆಯುವ ಧ್ವಜಾರೋಹಣ ಸಂದರ್ಭ ಇಲ್ಲಿ ವೃಷಭ ಧ್ವಜಾರೋಹಣ ಮಾಡುತ್ತಾರೆ. ಅಂದರೆ ಧ್ವಜದಲ್ಲಿ ನಂದಿಯ ಚಿತ್ರವೇ ಇರುತ್ತದೆ. ನೂತನ ಧ್ವಜ ಮರ ಪೂಜೆಯ ಸಂದರ್ಭವೇ ಎಲ್ಲಿಯೋ ಇದ್ದ ವೃಷಭ (ನಂದಿ) ಆಗಮಿಸಿದ್ದು ಭಕ್ತರಲ್ಲಿ ಸಂಚಲನ ಉಂಟು ಮಾಡಿದೆ. ಅತ್ಯಂತ ಕಾರಣಿಕ ಕ್ಷೇತ್ರವೆಂದೇ ಇಲ್ಲಿನ ಭಕ್ತಾದಿಗಳು ಅಭಿಪ್ರಾಯ ಪಡುವ ಈ ದೇವಸ್ಥಾನದ ಧ್ವ್ವಜಮರದ ಪೂಜೆಯ ಸಂದರ್ಭ ನಂದಿಯ ಆಗಮನದ ಬಗ್ಗೆ ಇಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದು ಇದು ದೇವರ ಕಾರಣಿಕ ಎಂದು ಮಾತನಾಡಿಕೊಂಡಿದ್ದಾರೆ.


ದೇವತಾ ರೂಪದಲ್ಲಿ ಪ್ರತ್ಯಕ್ಷವಾಗಿ ನಂದಿ ಆಗಮಿಸಿದೆ – ಅನಂತ ಪದ್ಮನಾಭರವರ ಹೇಳಿಕೆ
ನಂದಿ ಆಗಮನದ ಕುರಿತು ದೇವಸ್ಥಾನದ ಅನುವಂಶೀಯ ಯಜಮಾನ ಕುಟುಂಬದ ಶ್ರೀ ಅನಂತ ಪದ್ಮನಾಭರವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಧ್ವಜಮರದ ಪೂಜೆಯ ಸಂದರ್ಭವೇ ಈ ಘಟನೆ ನಡೆದಿದ್ದು ನಿಜಕ್ಕೂ ನಮ್ಮ ಪಾಲಿಗೆ ಅಚ್ಚರಿಯಾಗಿದೆ. ನಂದಿ ದೇವತಾ ರೂಪದಲ್ಲಿ ಪ್ರತ್ಯಕ್ಷವಾಗಿ ಆಗಮಿಸಿದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಮಾಡದೆ ನಾವು ಕೊಟ್ಟ ಹಣ್ಣನ್ನು ಸೇವಿಸಿ ತೆರಳಿದೆ. ಈ ಸಂದರ್ಭ ಹಾಜರಿದ್ದ ಎಲ್ಲರಿಗೂ ಕಣ್ಣಾರೆ ತುಂಬಿಕೊಳ್ಳುವ ಯೋಗ ಭಾಗ್ಯವೂ ಒದಗಿ ಬಂದಿದೆ. ಇಂತಹ ಕಾಲಘಟ್ಟದಲ್ಲೂ ದೇವರು ಸ್ವತಃ ಕಾರಣಿಕದ ನಿದರ್ಶನಗಳನ್ನು ಒದಗಿಸಿರುವುದು ಎಲ್ಲರ ಮನಸ್ಸಿಗೂ ಸಂತೋಷ ತಂದಿದೆ. ಕೆತ್ತನೆಯ ಕಾರ್ಯಾರಂಭದ ಸಂದರ್ಭ ನಡೆದ ಈ ಘಟನೆ ಅತ್ಯಂತ ಶುಭದಾಯಕ ಎಂದು ನಾವು ಭಾವಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *