ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ ಡಿ.24: ಮಕ್ಕಳಿಗೋಸ್ಕರ ತಂದೆ ತಾಯಿ ಸಂಪೂರ್ಣ ತ್ಯಾಗ ಮಾಡುತ್ತಾರೆ. ತಂದೆ ತಾಯಿ ಋಣವನ್ನು ತೀರಿಸಲು ಮಕ್ಕಳಿಂದ ಸಾಧ್ಯವೇ ಇಲ್ಲ. ಇದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಮಕ್ಕಳು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವುದು ಸರಿಯಲ್ಲ. ಯುವ ಜನತೆ ತನ್ನ ಊರು, ತಾವು ಕೆಲಸ ಮಾಡುವ ಸಂಸ್ಥೆ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ದಿನನಿತ್ಯ ಜೀವನಕ್ಕೆ ಬೇಕಾದವುಗಳನ್ನು ನಾವು ಸಮಾಜದಿಂದ ಪಡೆದಿರುತ್ತೇವೆ. ಆದ್ದರಿಂದ ಸಮಾಜಕ್ಕೂ ನಾವು ಏನಾದರೂ ಕೊಡಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಚಿತಕಾಮಾನಂದಜಿ ನುಡಿದರು. ಅವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂರರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷರ ಸಂಭಾವನೆಯಲ್ಲಿ ತಾರತಮ್ಯ ಸರಿಯಲ್ಲ – ಹೊರಟ್ಟಿ
ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಾಲಾ ಶಿಕ್ಷರಿಗೆ ಸರಿಯಾದ ಸಂಭಾವನೆ ನೀಡಿದಲ್ಲಿ ಅವರು ನೆಮ್ಮದಿಯಿಂದ ಪಾಠ ಮಾಡಲು ಸಾಧ್ಯವಾಗಲಿದೆ. ಖಾಸಗಿ ಶಾಲೆಯಲ್ಲಿ ಎಂ.ಎ.ಬಿಎಡ್ ಕಲಿತು ಪಾಠ ಮಾಡುವ ಶಿಕ್ಷಕರು 9000 ಸಂಭಾವನೆ ಪಡೆದುಕೊಳ್ಳುತ್ತಾರೆ. ಅದೇ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು 50ಸಾವಿರ ಸಂಭಾವನೆ ಪಡಕೊಳ್ಳುವಾಗ ಖಾಸಗಿ ಶಾಲಾ ಶಿಕ್ಷಕರು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ? ಸರಕಾರ ಈ ಬಗ್ಗೆ ಯೋಚಿಸಬೇಕು. ಎಲ್ಲ ತಾಯಂದಿರು ಮಕ್ಕಳಲ್ಲಿ ಡಾಕ್ಟರ್ ಇಂಜೀನಿಯರ್ ಆಗಬೇಕು ಎನ್ನುತ್ತಾರೆ. ಮಕ್ಕಳಿಗೆ ಸಂಸ್ಕಾರದ ಪಾಠ ಮಾಡುತ್ತಿಲ್ಲ. ಇಂದಿನ ಶಿಕ್ಷಣದಲ್ಲಿ ಸಂಸ್ಕಾರ ಕಡಿಮೆಯಾಗಿದೆ. ತಾಯಂದಿರು ಮಕ್ಕಳಿಗೆ ಸಂಸ್ಕಾರದ ಪಾಠ ಮಾಡಬೇಕು. ರಾಜಕಾರಣ ಮಾಡುವವರು ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಏನೇನೋ ಮಾಡಲುಹೋಗುತ್ತಾರೆ ಅದು ಸರಿಯಲ್ಲ. ಮಾತೃ ಭಾಷೆಯಲ್ಲಿ ಇರುವ ಶಕ್ತಿ ಬೇರೆ ಭಾಷೆಯಲ್ಲಿ ಇರಲ್ಲ. ಕನ್ನಡ ಮಾಧ್ಯಮದ ಶಾಲೆಗಳು ಉಳಿಯಬೇಕು. ಬೆಳೆಯಬೇಕು. ಸರಕಾರ ಅನುದಾನಿತ ಶಾಲೆಗಳ ಉಳಿವಿಗೆ ಸಹಕಾರ ನೀಡಬೇಕು ಎಂದರು.

ಸದನದ ಸಮಯ ವ್ಯರ್ಥವಾಗುತ್ತಿದೆ – ಕೆ. ಜಯಪ್ರಕಾಶ್ ಹೆಗ್ಡೆ
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಸದನದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ಇಂದು ಶಿಕ್ಷಣದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿಲ್ಲ. ಅಂದು ಚರ್ಚೆಯಾಗುತ್ತಿತ್ತು. ಜನಸಾಮಾನ್ಯರಿಗೆ ಅಗತ್ಯವಿಲ್ಲದ ವಿಷಯಕ್ಕೆ ಸದನದ ಸಮಯ ವ್ಯರ್ಥವಾಗುತ್ತಿರುವುದು ಬೇಸರದ ಸಂಗತಿ. ಸದನದ ಸಮಯ ಜನಸಾಮಾನ್ಯರ ಅಗತ್ಯತೆಗಳ ಚರ್ಚೆಗೆ ಮೀಸಲಾಗಬೇಕು ಎಂದರು.

ತಂತ್ರಜ್ಞಾನದ ದುರ್ಬಳಕೆ ಹಿರಿಯರಿಂದಾಗುತ್ತಿದೆ – ಜೋಗಿ
ಶಿಕ್ಷಣ ಶಿಕ್ಷೆ ಎಂದು ಮಕ್ಕಳಿಗೆ ಅನ್ನಿಸಬಹುದು. ಆದರೆ ಮುಂದೊಂದು ದಿನ ಅದೇ ಶಿಕ್ಷಣ ವ್ಯಕ್ತಿಯನ್ನು ಎತ್ತರದಲ್ಲಿ ಇರಿಸಲಿದೆ ಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ನಿರಂತರವಾಗಿ ಮಾಡುವ ದುಡಿಮೆಯನ್ನು ಕಲಿಸುವುದು ವಿದ್ಯೆ. ದೇವರು ನಮ್ಮನ್ನು ನಂಬುವಂತೆ ಬದುಕುವುದೇ ಶಿಕ್ಷಣ. ದೇವರು ಒಳ್ಳೇದು ಮಾಡಬೇಕಾದಲ್ಲಿ ನಾವು ಮೊದಲು ಒಳ್ಳೆಯವರಾಗಿ ಬದುಕುವ ಅರ್ಹತೆಯನ್ನು ಸಂಪಾದಿಸಿಕೊಳ್ಳಬೇಕು. ಯುಟ್ಯೂಬ್ ನೋಡಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ. ಯಾರು ತಂತ್ರ್ರಜ್ಞಾನ ತಿರಸ್ಕರಿಸುತ್ತಾರೋ ಅವರು ಎಂದಿಗೂ ಬೆಳೆಯಲು ಸಾಧ್ಯವಿಲ್ಲ. ತಂತ್ರಜ್ಞಾನವನ್ನು ದುರ್ಬಳಕೆ ಮಾಡುವವರು ಹಿರಿಯರೇ ಹೊರತು ಮಕ್ಕಳಲ್ಲ. ಮಕ್ಕಳಲ್ಲಿ ಮೊಬೈಲ್ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಹೇಳಿಕೊಡಬೇಕೇ ಹೊರತು ಮೊಬೈಲ್ ಕಸಿಯಬೇಡಿ ಎಂದು ಸಾಹಿತಿ ಗಿರೀಶ್ ರಾವ್ ಹತ್ವಾರ್ ನುಡಿದರು.
ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ ದೇವಾಲಯ ಹಾಗೂ ವಿದ್ಯಾಲಯ ಊರಿನ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಶಾಲೆ ಅಭಿವೃದ್ದಿ ಹೊಂದಬೇಕಾದಲ್ಲಿ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡಬೇಕಾಗುತ್ತದೆ ಎಂದರು.
ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಊರಿನ ಎಲ್ಲರೂ ಕೈ ಜೋಡಿಸಬೇಕು ಎಂದರು.
ಮಂದಾರ್ತಿ ದೇಗುಲದ ಅನುವಂಶಿಕ ಮೊಕ್ತೇಸರ ಎಚ್.ಧನಂಜಯಶೆಟ್ಟಿ, ಮುಖ್ಯ ಶಿಕ್ಷಕ ಉದಯ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ರತ್ನಾಕರ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹೇಶ್ ಉಡುಪ ದಂಪತಿಯನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ಮಹೇಶ್ ಶೆಟ್ಟಿ ಸ್ವಾಗತಿಸಿದರು. ಶಾಲಾ ಸಂಚಾಲಕ ಕೆ.ಮಹೇಶ್ ಉಡುಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಖರಾಮ ಸೋಮಯಾಜಿ ಸನ್ಮಾನಪತ್ರ ವಾಚಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್. ಸುದರ್ಶನ ಶೆಟ್ಟಿ ವಂದಿಸಿದರು. ಡಾ.ಚೈತ್ರ ಕಲ್ಕೂರ ನಿರೂಪಿಸಿದರು. ನಂತರ ಉಡುಪಿ ನಾಟಕ ತಂಡದವರಿಂದ ಶಾಂಭವೀ ನಾಟಕ ಪ್ರದರ್ಶನಗೊಂಡಿತು.



