• February 9, 2026
  • Last Update February 2, 2026 6:06 pm
  • Brahmavara

ಸಂಸದರು, ಶಾಸಕರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

ಸಂಸದರು, ಶಾಸಕರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಉಡುಪಿಮಿತ್ರ ಪತ್ರಿಕೆ ಸುದ್ದಿ:
ಬ್ರಹ್ಮಾವರ, ಡಿ.೩೧ :
ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ನಡೆಯುತ್ತಿರುವ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು. ಈ ಸಂದರ್ಭ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಹೆದ್ದಾರಿಯಲ್ಲಿರುವ ಸಮಸ್ಯೆಗಳ ಬಗ್ಗೆ ಹೊಸದಾಗಿ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪಡುಬಿದ್ರಿ, ಬ್ರಹ್ಮಾವರ, ಉಡುಪಿ ಅಂಬಾಗಿಲು, ಕೋಟ ಜಂಕ್ಷನ್, ತೆಕ್ಕಟ್ಟೆ ಹೀಗೆ ನಾಲ್ಕೈದು ಪ್ರದೇಶಗಳಲ್ಲಿ ಮೇಲ್ಸೆತುವೆ ಮಾಡಬೇಕೆನ್ನುವ ಪ್ರಸ್ತಾವನೆಗೆ ಹೊಸದಾಗಿ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಎರಡು ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೆಜಮಾಡಿಯಿಂದ ಪ್ರಾರಂಭವಾಗಿ ಕುಂದಾಪುರದವರೆಗೆ 64 ಕಿ.ಮೀ. ಸರ್ವಿಸ್ ರಸ್ತೆ ಮಾಡಬೇಕೆಂಬ ಬೇಡಿಕೆಗನುಣವಾಗಿ ಈಗ 26ಕಿ.ಮೀ. ಮಂಜೂರು ಮಾಡಿದ್ದಾರೆ. ಆ ಕಾಮಗಾರಿ ಕೆಲಸ ನಡೆಯುತ್ತಿದೆ. ಹೆಜಮಾಡಿಯಿಂದ ಕುಂದಾಪುರದವರೆಗೆ ಅಗಲೀಕರಣಗೊಂಡು ಸರ್ವಿಸ್ ರಸ್ತೆ ನಿರ್ಮಾಣದಿಂದ ಅಷ್ಟಪಥದ ರೀತಿಯಲ್ಲಿ ಕಾಮಗಾರಿ ನಡೆಯಲಿದೆ. ದಿನನಿತ್ಯ ಸುಮಾರು ಏಳೆಂಟು ಅಪಘಾತಗಳಾಗುತ್ತಿದ್ದು ಅದರಲ್ಲಿ ಒಂದೆರಡು ಗಂಭೀರವಾಗುತ್ತಿದೆ. ಈ ಅಪಘಾತಗಳನ್ನು ನಿಯಂತ್ರಿಸಲು, ಕೆಲವು ಕಡೆ ಮೇಲ್ಸೆತುವೆ ಮಾಡಲು, ಫೂಟ್ ಬ್ರಿಡ್ಜ್ ಮಾಡಲು ಅನುಮೋದನೆ ಪಡಕೊಂಡು ಕಾಮಗಾರಿ ಪರಿಶೀಲನೆ ಮಾಡುತ್ತಿದ್ದೇವೆ. ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಸಾರ್ವಜನಿಕರು ಸಹಕಾರ ನೀಡಬೇಕಾಗಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯ ನೀರು ಎಲ್ಲಿಗೆ ಹೋಗಬೇಕೆಂಬ ಚರ್ಚೆಯೂ ಇದೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮಾಡಲಾಗುತ್ತಿದೆ.


ಇತ್ತೀಚೆಗಿನ ವರ್ಷಗಳಲ್ಲಿ ಇದೇ ಮೊದಲಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಪಿಆರ್ ಮಾಡಲು ಅನುಮೋದನೆ ಸಿಕ್ಕಿದೆ. ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಲು ಪ್ರಯತ್ನಿಸಲಾಗುವುದು. ಸರಾಗವಾದ ಸಂಚಾರ, ಅಪಘಾತಗಳ ನಿಯಂತ್ರಣ, ಸರ್ವಿಸ್ ರಸ್ತೆಯ ರಚನೆ ಅಗತ್ಯವಾದುದರಿಂದ ಸ್ಥಳಿಯಾಡಳಿತ ಪ್ರತಿನಿಧಿಗಳು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಅವರು ಕೊಟೇಶ್ವರ, ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಸಾಸ್ತಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ, ಸರ್ವಿಸ್ ರಸ್ತೆಯ ಕಾಮಗಾರಿ ವೀಕ್ಷಿಸಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.


ಈ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಪೂಜಾರಿ, ವಿಠಲ ಪೂಜಾರಿ ಐರೋಡಿ, ಪ್ರತಾಪ್ ಶೆಟ್ಟಿ ಸಾಸ್ತಾನ, ಜ್ಯೋತಿ ಉದಯ ಪೂಜಾರಿ, ಸುಲತಾ ಹೆಗ್ಡೆ, ರಾಘವೇಂದ್ರ ಆಚಾರ್ಯ, ಗೋವಿಂದ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ನಾಸಿರ್, ಆಶಿಕಾ ಕೆ.ಜೆ, ಪ್ರಾಜೆಕ್ಟ್ ಮ್ಯಾನೇಜರ್ ಚಂದ್ರಶೇಖರ್, ಉಪಸ್ಥಿತರಿದ್ದರು. ಸಂಸದರು ಹಾಗೂ ಶಾಸಕರು ಜನರ ಅಹವಾಲುಗಳನ್ನು ಆಲಿಸಿದರು.


ಬೀಜಾಡಿ : ಮಳೆಗಾಲದ ನೀರಿನ ಸಮಸ್ಯೆ ಈ ಹಿಂದೆ ಆಗಿರುವ ಹೈವೆ ಕಾಮಗಾರಿಯಿಂದ ಎಲ್ಲಾ ಕಡೆಯ ನೀರನ್ನು ಬೀಜಾಡಿಯ ಫಿಶರೀಸ್ ರಸ್ತೆಯ ಚರಂಡಿಗೆ ಬಿಡಲಾಗಿದ್ದು ಇದರಿಂದ ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ದ್ವಿಚಕ್ರವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಮತ್ತು ಸ್ಥಳಿಯ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದ್ದು ಸರಿಪಡಿಸುವಂತೆ ಇಲ್ಲಿನ ಸಾರ್ವಜನಿಕರು ಕೋರಿಕೊಂಡರು.


ಕುಂಭಾಶಿ ಮಹದ್ವಾರ ಉಳಿಸಲು ಮನವಿ :
ಕುಂಭಾಶಿ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಹಾದ್ವಾರದವರೆಗೂ ಸರ್ವಿಸ್ ರಸ್ತೆಗೆ ಗುರುತು ಮಾಡಿದ್ದು ಮಹಾದ್ವಾರವನ್ನು ಉಳಿಸುವಂತೆ ಕುಂಭಾಶಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಮಾಜಿ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯ, ರವಿರಾಜ್ ಉಪಾಧ್ಯಾಯ, ಕೊರ್ಗಿ ವಿಠಲ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಸುಕನ್ಯಾ, ಸದಸ್ಯರಾದ ರಾಧಾದಾಸ್, ಕಮಲಾಕ್ಷ ಪೈ, ಉದ್ಯಮಿ ಸುರೇಶ್ ಬೆಟ್ಟಿನ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರ ಹಾಗೂ ಇನ್ನಿತರರು ಸಂಸದರು ಮತ್ತು ಶಾಸಕರಲ್ಲಿ ಮನವಿ ಮಾಡಿದರು.ಸಂಸದರು, ಶಾಸಕರು ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದಾಗ ಮುಖ ಮಂಟಪಕ್ಕೆ ಯಾವುದೇ ತೊಂದರೆ ಮಾಡಲ್ಲ ಅದನ್ನು ಉಳಿಸಲಾಗುವುದು ಎಂದರು.


ತೆಕ್ಕಟ್ಟೆ ಪೈಪ್‌ಲೈನ್ ಹಾನಿ
ತೆಕ್ಕಟ್ಟೆಯಲ್ಲಿ ಹೆದ್ದಾರಿ ಅಗಲೀಕರಣ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದಿಂದ ಸ್ವಜಲಧಾರ ಯೋಜನೆಯ ಪೈಪ್‌ಲೈನ್ ಹಾಗೂ ೨ ಬೋರ್‌ವೆಲ್ ಹಾಳಾಗಿದ್ದು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮಲ್ಯಾಡಿ ಶಿವರಾಮ ಶೆಟ್ಟಿಯವರು ಕೋರಿಕೊಂಡರು. ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭನಾ ಶೆಟ್ಟಿ, ಸದಸ್ಯರಾದ ಸಂಜೀವ ದೇವಾಡಿಗ, ವಿನೋದ ದೇವಾಡಿಗ, ಪಿ.ಡಿ.ಓ ಸಂತೋಷ, ಕಿರಣ್ ಪೂಜಾರಿ ತೆಕ್ಕಟ್ಟೆ, ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ, ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *