ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಅಮಾಸೆಬೈಲ್, ಜ.17:
ವೈದ್ಯರನ್ನು ಜನರು ದೇವರೆಂದು ನಂಬಿದ್ದಾರೆ. ಆ ವೈದ್ಯರೇ ಬಾಂಬ್ ತಯಾರು ಮಾಡಿ ಬ್ಲಾಸ್ಟ್ ಮಾಡಿದರು. ಇಂತಹ ಸುಶಿಕ್ಷಿತ ಜನರಲ್ಲಿ ಈ ವಿಕೃತ ಭಾವನೆ ಯಾಕೆ ಬಂತು? ಶಿಕ್ಷಣದಲ್ಲಿ ಅಥವಾ ಬೋಧನೆಯಲ್ಲಿ ಏನೋ ಕೊರತೆ ಇದೆ. ಶಿಕ್ಷಣ ನಿಜವಾದ ಮನುಷ್ಯರನ್ನಾಗಿ ಮಾಡುವಲ್ಲಿ ಸೋಲುತ್ತಿದೆಯೇ? ಎಂದು ಪ್ರಶ್ನಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಶಿಕ್ಷಕರು ನೈತಿಕ ಮೌಲ್ಯ ಹಾಗೂ ಮೃಗೀಯ ಗುಣ ಹೊಡೆದೋಡಿಸಿ ಮಾನವೀಯತೆ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು. ಪ್ರಪಂಚದಲ್ಲಿ ನಾಲ್ಕನೆ ಅತಿ ದೊಡ್ಡ ಸೈನ್ಯ ನಮ್ಮಲ್ಲಿದ್ದು ವಿದೇಶದ ಶತ್ರುಗಳಿಗೆ ಹೆದರಬೇಕಾದ ಅಗತ್ಯವಿಲ್ಲ. ಆದರೆ ನಮ್ಮ ದೇಶದೊಳಗಿನ ಶತ್ರುಗಳೇ ಅಪಾಯಕಾರಿಗಳಾಗಿದ್ದು ಅವರಿನ್ನು ಓಡಿಸಬೇಕಾಗಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೆಂದ್ರ ನುಡಿದರು.

ಅವರು ಅಮಾಸೆಬೈಲಿನಲ್ಲಿ ಎ.ಜಿ.ಕೊಡ್ಗಿ ರಂಗ ಮಂದಿರದಲ್ಲಿ ನಡೆದ ಗೀತಾ ಎಚ್.ಎಸ್ ಎನ್.ಫೌಂಡೇಶನ್‌ನ ಸಪ್ತ ಸಂಭ್ರಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸರಕಾರಿ ಶಾಲೆಗಳು ಸೊರಗಬಾರದು. ಖಾಸಗಿ ಶಾಲೆಗಳಿಗೆಸ್ಪರ್ಧೆ ಕೊಡುವಂತಾಗಬೇಕು. ಹಾಗಾಗಬೇಕಾದಲ್ಲಿ ಸರಕಾರ ಹಾಗೂ ಖಾಸಗಿ ವ್ಯಕ್ತಿಗಳು ಸರಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ‍್ಯಗಳನ್ನು ನೀಡಬೇಕು. ಶಿಕ್ಷಕರು ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣ ಸಂಸ್ಥೆಗಳಿಗೆ ನೀಡುವ ಸಹಾಯ
ದೇವಸ್ಥಾನಗಳಿಗೆ ಮಾಡುವ ಸಹಾಯ ಎಂದು ಎಲ್ಲರೂ ಭಾವಿಸಬೇಕು ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಗೀತಾ ಎಚ್.ಎಸ್.ಎನ್.ಫೌಂಡೇಶನ್‌ನ ಅಧ್ಯಕ್ಷ ಶಂಕರ ಐತಾಳರಂತವರು ಪ್ರತೀ ಗ್ರಾಮದಲ್ಲಿ ಇದ್ದಲ್ಲಿ ಸರಕಾರಿ ಶಾಲೆಗಳು ಖಂಡಿತಾ ಉದ್ದಾರವಾಗಲಿದೆ ಎಂದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಅಧ್ಯಕ್ಷತೆ ವಹಿಸಿದ್ಸರು.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಗೀತಾ ಎಚ್.ಎಸ್.ಎನ್.ಫೌಂಡೇಶನ್ ಟ್ರಸ್ಟಿಗಳು ಅಮಾಸೆಬೈಲು ಸರಕಾರಿ ಶಾಲೆಯ ಅಭಿವೃದ್ಧಿಗೆ ಕಾರಣರು ಎಂದರು.

ವಿದ್ಯಾಂಗ ಉಪನಿರ್ದೇಶಕ ಲೋಕೇಶ್, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್ ಕಿಣಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕುಲಾಲ್, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಎಲೈಸಿ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್.ಭಟ್ ಸಪ್ತ ಸಂಭ್ರಮ ಪುಸ್ತಕ ಬಿಡುಗಡೆ ಮಾಡಿದರು.
ಉದ್ಯಮಿಗಳಾದ ಆನಂದ ಸಿ.ಕುಂದರ್ ಕೋಟ ಮಣೂರು, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೈದರಬಾದ್, ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ, ಆನಗಳ್ಳಿ ಕರುಣಾಕರ ಹೆಗ್ಡೆ ಬೆಂಗಳೂರು, ಶಂಕರ ಹೆಗ್ಡೆ ಜನ್ಯಾಡಿ, ಡಾ|ಇರ್ಫಾನ್ ಅಹಮ್ಮದ್ ಶಿವಮೊಗ್ಗ ಹಾಗೂ ಸಾಫಲ್ಯ ಟ್ರಸ್ಟ್ ರಿ. ಇದರ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ನಿವೃತ್ತ ಯೋಧರನ್ನು ಅಭಿನಂದಿಸಲಾಯಿತು.

ಏಳು ಸರಕಾರಿ ಶಾಲೆಗಳಿಗೆ, ಏಳು ವಿಶೇಷಚೇತನ ಮಕ್ಕಳಿಗೆ, ಏಳು ಮಂದಿಯ ವೈದ್ಯಕೀಯ ವೆಚ್ಚಕ್ಕೆ, ಏಳು ಗೃಹ ನಿರ್ಮಾಣಕ್ಕೆ, ಏಳು ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಚೆಕ್ ಹಸ್ತಾಂತರಿಸಲಾಯಿತು. ಏಳು ಮನೆಗಳಿಗೆ ಸೋಲಾರ್ ದೀಪ ವಿತರಿಸಲಾಯಿತು.

ಗೀತಾ ಎಚ್. ಎಸ್. ಎನ್. ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ ಅಮಾಸೆಬೈಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನ್ಮಾನ ಪತ್ರಗಳನ್ನು ಶಿಕ್ಷಕಿಯರಾದ ಶ್ರೀಮತಿ ಶೀಲಾ, ಅರ್ಪಿತಾ, ರಶ್ಮಿತಾ, ಆಶಾ, ಅರ್ಚನಾ ವಾಚಿಸಿದರು.

. ಟ್ರಸ್ಟಿ ಬೆಳ್ವೆ ಮಸ್ತಾಕ್ ಅಹಮ್ಮದ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ನಿರೂಪಿಸಿದರು.





