ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಮಾ.26:
‘ರಾ’ ಎಂದಾಗ ನಮ್ಮಲ್ಲಿರುವ ಎಲ್ಲಾ ದೋಷ, ದುರಿತ, ಪಾಪಕರ್ಮಗಳು ಹೊರಹೋಗಿ ‘ಮ’ ಎಂದಾಕ್ಷಣ ಬಾಯಿ ಮುಚ್ಚುವುದರಿಂದ ಹೊರ ಹೋದ ದೋಷಗಳು ಮತ್ತೆ ನಮ್ಮೊಳಗೆ ಪ್ರವೇಶಿಸಲು ಅವಕಾಶ ಇಲ್ಲದೆ ಇರುವುದರಿಂದ ರಾಮ ನಾಮಸ್ಮರಣೆಗೆ ವಿಶೇಷ ಮಹತ್ವ ಇದೆ. ಅಂತಹ ರಾಮನ ಮೂರ್ತಿಯನ್ನು ರಾಘವೇಂದ್ರ ಅಡಿಗರು ಪ್ರತಿಷ್ಢಾಪಿಸಿ ಈ ಭಾಗದ ಜನರಿಗೆ ರಾಮನನ್ನು ಭಜಿಸಲು ಅವಕಾಶ ಒದಗಿಸಿದ್ದಾರೆ ಎಂದು ವಿದ್ವಾನ್ ಮಾಧವ ಅಡಿಗರು ನುಡಿದರು. ಅವರು ಮಾ.26 ರಂದು ಬಿದ್ಕಲ್‌ಕಟ್ಟೆ ಕೊಳನಕಲ್ ಕ್ರಾಸ್‌ನಲ್ಲಿ ಶ್ರೀ ರಾಮಚಂದ್ರ ಪ್ರತಿಷ್ಠಾಪನೆ ಹಾಗೂ ನಾಗಲಕ್ಷ್ಮೀ ಹೈಟ್ಸ್ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಘವೇಂದ್ರ ಅಡಿಗ ದಂಪತಿಗಳು ಹೋರಾಟದ ಪಥದಲ್ಲಿ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನು ಏರಿದ್ದಾರೆ. ಅವರು ಸಮಾಜದಲ್ಲಿ ಯಾರಿಗೆ ಅನ್ಯಾಯವಾದರೂ ಪ್ರತಿಭಟಿಸುತ್ತಾ ಬಂದಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಇಚ್ಚಾಶಕ್ತಿಯಿಂದ ನಾಗಲಕ್ಷ್ಮೀ ಹೈಟ್ಸ್‌ನ್ನು ಸ್ಥಾಪಿಸಿದ್ದಾರೆ ಎಂದರು.

ವೇ.ಮೂ. ವಂಡಾರು ರಮೇಶ್ ಬಾಯರಿ ನಾಗಲಕ್ಷ್ಮೀ ಹೈಟ್ಸ್ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಕಾಶ್ ಬಾಯರಿ ಯವರು ಮಾತನಾಡಿ ರಾಘವೇಂದ್ರ ಅಡಿಗರು ಹೋರಾಟ, ಶ್ರಮದಿಂದ ಉದ್ಯಮದಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂದರು.

ಪುರೋಹಿತ್ ದಾಮೋದರ ಶರ್ಮಾ ಮಾತನಾಡಿ ಸ್ವಾಭಿಮಾನದಿಂದ ಬದುಕು ಸಾಗಿಸಿದ ರಾಘವೇಂದ್ರ ಅಡಿಗರು ರಾಮಚಂದ್ರನ ಮೂರ್ತಿ ಪ್ರತಿಷ್ಠಾಪಿಸಿ ಪ್ರಭು ರಾಮಚಂದ್ರನ ದರ್ಶನ ಎಲ್ಲರಿಗೂ ಲಭಿಸುವಂತೆ ಮಾಡಿದ್ದಾರೆ.

ಉದ್ಯಮಿ ಶಂಕರ ಹೆಗ್ಡೆ ಮಾತನಾಡಿ ಹಲವಾರು ವರ್ಷಗಳಿಂದ ಬಿದ್ಕಲ್ ಕಟ್ಟೆಯಲ್ಲಿ ರಾಮ ಮಂದಿರ ನಿರ್ಮಿಸುವ ಪ್ರಯತ್ನದಲ್ಲಿ ನಾವೆಲ್ಲ ಇದ್ದೆವು. ಆದರೆ ಜಾಗದ ಸಮಸ್ಯೆಯಿಂದ ಸ್ಥಾಪಿಸಲು ಸಾಧ್ಯವಾಗಿಲ್ಲ. ಇದೀಗ ರಾಘವೇಂದ್ರ ಅಡಿಗರು ರಾಮನನ್ನು ಸ್ಥಾಪಿಸಿ ಆ ಕೊರತೆಯನ್ನು ನೀಗಿಸಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಪವಿತ್ರಾ ರಾಘವೇಂದ್ರ ಅಡಿಗ ವಹಿಸಿದ್ದು ಅವರು ಮಾತನಾಡಿ ಹಿರಿಯರ ಆಶೀರ್ವಾದದಿಂದ ನಮ್ಮ ಕನಸು ನೆರವೇರಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗಾವಳಿ ಮಹೇಶ್ ಶೆಣೈ, ಸಂತೋಷ ಕುಮಾರ್ ಶೆಟ್ಟಿ, ಇಂಜೀನಿಯರ್ ಪ್ರಶಾಂತ್, ಗ್ರಾಮ ಪಂಚಾಯತ್ ಪಿಡಿಓ ವನಿತಾ ಶೆಟ್ಟಿ ಉಪಸ್ಥಿತರಿದ್ದರು.

ರಾಮಚಂದ್ರ ಮೂರ್ತಿಯ ಶಿಲ್ಪಿ ನವೀನ್, ಕೋಟೇಶ್ವರ ಮಹೀ ಡೆವಲಪರ್ಸ್‌ನ ಇಂಜೀನಿಯರ್ ಆಶ್ರಯ ಶೆಟ್ಟಿ, ಜೆರಾಲ್ಡ್ ಡಿಸೋಜ, ಇಲೆಕ್ಟ್ರಿಷಿಯನ್ ಈಶ, ಶೇಖರ ಮೇಸ್ತ್ರಿ, ಪಾಕಶಾಸ್ತ್ರಜ್ಞರುಗಳಾದ ಆನಂದರಾಮ ಉಡುಪ, ಕಾರೆಬೈಲು ಅನಂತಕೃಷ್ಣ ಮಂಜ, ಶ್ರೀಮತಿ ಅನ್ನಪೂರ್ಣ ಕಾರಂತ್, ಮಂಜುನಾಥ ಮಯ್ಯ, ಹಾಗೂ ಸ್ವಚ್ಚತೆಯಲ್ಲಿ ಸಹಕಾರ ನೀಡುತ್ತಾ ಬಂದಿರುವ ಶ್ರೀಮತಿ ಗಿರಿಜಾ, ಶ್ರೀಮತಿ ಸಾಧು, ಶ್ರೀಮತಿ ಪುಟ್ಟು, ಶ್ರೀಮತಿ ಪದ್ದು, ಶ್ರೀಮತಿ ಗಿರಿಜಾ, ಶ್ರೀಮತಿ ರೇಖಾರವರನ್ನು ಸನ್ಮಾನಿಸಲಾಯಿತು.
ರಾಘವೇಂದ್ರ ಅಡಿಗ ಸ್ವಾಗತಿಸಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಾಧಿಕಾ ಪ್ರಶಾಂತ ಹೊಳ್ಳ ವಂದಿಸಿದರು. ನಂತರ ರಾಮ ಭಜನಾ ಕಾರ್ಯಕ್ರಮ ನಡೆಯಿತು.





