• April 6, 2026
  • Last Update April 6, 2026 5:26 pm
  • Brahmavara

ಬಾರ್ಕೂರು: ಸುಜ್ಞಾನ ವಿದ್ಯಾರ್ಥಿ ವೇತನ ಪರೀಕ್ಷೆ ಉದ್ಘಾಟನೆ

ಬಾರ್ಕೂರು: ಸುಜ್ಞಾನ ವಿದ್ಯಾರ್ಥಿ ವೇತನ ಪರೀಕ್ಷೆ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಎ.೫: ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಯ ಹಿಂದೆ ಬೀಳದೆ, ಪ್ರಶ್ನಿಸುವ ಪ್ರವೃತ್ತಿ ಮತ್ತು ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕರೆ ನೀಡಿದರು.


ಬಾರ್ಕೂರು ಎಜುಕೇಶನ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಇವುಗಳ ಜಂಟಿ ಆಶ್ರಯದಲ್ಲಿ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಉದ್ಘಾಟಿಸಿ ಅವರು ಮಾತನಾಡಿ ವಿದ್ಯಾರ್ಥಿವೇತನವು ಕೇವಲ ಆರ್ಥಿಕ ನೆರವಲ್ಲ, ಪ್ರತಿಭೆಗೆ ಸಿಗುವ ಮಾನ್ಯತೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ಪೂರ್ವ ಸಿದ್ಧತೆ ಅತ್ಯಗತ್ಯವಾಗಿದ್ದು, ತರಗತಿಯಲ್ಲಿ ಕಲಿತ ಜ್ಞಾನವನ್ನು ಪ್ರಾಯೋಗಿಕವಾಗಿ ಅಳವಡಿಸಿ ಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು.


ಸೋಲು ಗೆಲುವಿನ ಏಣಿ: ಪಿಎಸ್‌ಐ ಅಶೋಕ್
ಮುಖ್ಯ ಅತಿಥಿಯಾಗಿದ್ದ ಬ್ರಹ್ಮಾವರ ಪಿಎಸ್‌ಐ ಅಶೋಕ್ ಮಾತನಾಡಿ ಸೋಲು ಯಶಸ್ಸಿನ ಹಾದಿಯ ಪಾಠ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಪಿಯುಸಿ ಬದುಕಿನ ನಿರ್ಣಾಯಕ ಕಾಲಘಟ್ಟ: ಪ್ರೊ. ಬಾಲಕೃಷ್ಣ ಶೆಟ್ಟಿ

ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ರಾಮಕೃಷ್ಣ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪಿಯುಸಿಯ ಎರಡು ವರ್ಷಗಳ ಶ್ರಮವು ಮುಂದಿನ ೭೦ ವರ್ಷಗಳ ಬದುಕನ್ನು ಹಸನಾಗಿಸುತ್ತದೆ. ವಿದ್ಯಾರ್ಥಿಗಳು ಮೊಬೈಲ್, ಕ್ರಿಕೆಟ್, ಸಿನಿಮಾ ಮತ್ತು ಅನಗತ್ಯ ಹರಟೆಯೆಂಬ ನಾಲ್ಕು ಸಿ (ಅ) ಗಳಿಂದ ದೂರವಿದ್ದಾಗ ಮಾತ್ರ ಸಾಧನೆ ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾರ್ಕೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಮಾತನಾಡಿ, ೮೦ ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯನ್ನು ಉಳಿಸಿ ಬೆಳೆಸಲು ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನೊಂದಿಗೆ ಆಡಳಿತಾತ್ಮಕ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಹೊರತು ಸಂಸ್ಥೆಯನ್ನು ಮಾರಾಟ ಮಾಡಿಲ್ಲ. ದಕ್ಷ ಆಡಳಿತಕ್ಕೆ ಹೆಸರಾದ ಸುಜ್ಞಾನ ಸಂಸ್ಥೆಯು ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಲಿದೆ ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದರು.
ಗ್ರಾಮೀಣ ವಿದ್ಯಾರ್ಥಿಗಳ ಕನಸಿಗೆ ಸುಜ್ಞಾನ ಆಸರೆ: ಪ್ರತಾಪ್ ಚಂದ್ರ ಶೆಟ್ಟಿ
ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಡಾ. ರಮೇಶ್ ಶೆಟ್ಟಿ ಅವರ ೩೦ ವರ್ಷಗಳ ಶೈಕ್ಷಣಿಕ ಅನುಭವದಡಿ ಈ ಸಂಸ್ಥೆಯು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಬೆಳೆಯಲಿದೆ ಎಂದರು.


ಗ್ರಾಮೀಣ ವಿದ್ಯಾರ್ಥಿಗಳ ಐಐಟಿ, ನೀಟ್ ಕನಸಿಗೆ ಸುಜ್ಞಾನ ಆಸರೆ: ಭರತ್ ಶೆಟ್ಟಿ
ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನೀಡುವುದು ಸುಜ್ಞಾನ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿದರೂ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆ ಸೇರಬಹುದು ಎಂಬುದಕ್ಕೆ ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ನಿಶಾ ಜೋಗಿ ಅವರ ಸಾಧನೆಯೇ ಸಾಕ್ಷಿ. ಇದು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು. ಅಲ್ಲದೆ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಶೇ. 50ರಿಂದ ಶೇ. 100ರವರೆಗೆ ಶುಲ್ಕ ರಿಯಾಯಿತಿ ನೀಡಲಾಗುವುದು. ವಿಶೇಷವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ

ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ದೆಹಲಿಯಿಂದ ತರಿಸಲಾದ ಅತ್ಯುನ್ನತ ಗುಣಮಟ್ಟದ ಎನ್‌ಸಿಇಆರ್‌ಟಿ ಆಧಾರಿತ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಣವು ಕೇವಲ ನಗರ ಪ್ರದೇಶದ ಶ್ರೀಮಂತರಿಗೆ ಸೀಮಿತವಾಗಬಾರದು ಎಂಬುದು ನಮ್ಮ ಆಶಯ ಬಾರ್ಕೂರು ಎಜುಕೇಶನ್ ಸೊಸೈಟಿಯ ಆಶಯದಂತೆ ಕನಿಷ್ಠ ವೆಚ್ಚದಲ್ಲಿ ವಿಶ್ವದರ್ಜೆಯ ಶಿಕ್ಷಣ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದು ಭರತ್ ಶೆಟ್ಟಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಸಂಚಾಲಕ ರಾಜ್‌ಗೋಪಾಲ ನಂಬಿಯಾರ್, ಆಡಳಿತಾಧಿಕಾರಿ ಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ್ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

administrator

Related Articles

Leave a Reply

Your email address will not be published. Required fields are marked *

You cannot copy content of this page