ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಮೇ೨ : ಕುಂದಾಪುರ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ಸುಜ್ಞಾನ ವಿದ್ಯಾ ಸಂಸ್ಥೆಗೆ ಹೆಚ್ಚು ಬೇಡಿಕೆ ಬಂದಿದೆ. ಇಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ತಂಡದ ಪರಿಶ್ರಮದಿಂದ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಈ ಶಿಕ್ಷಣ ಸಂಸ್ಥೆಯನ್ನು ನಾನು ಗಮನಿಸುತ್ತಿದ್ದು ಕಡಿಮೆ ಅವಧಿಯಲ್ಲಿ ಗುಣಮಟ್ಟದ

ಶಿಕ್ಷಣದ ಮೂಲಕ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣಕುಮಾರ್ ಕೊಡ್ಗಿ ನುಡಿದರು. ಅವರು ಮೇ. 2 ರಂದು ಸುಜ್ಞಾನ ಪಿಯು ಕಾಲೇಜು , ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮಂಥನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿ ಪತ್ರಕರ್ತ ಕೆ.ಸಿ.ರಾಜೇಶ್ ಮಾತನಾಡಿ ಸ್ವಂತ ಮಕ್ಕಳನ್ನು ಮನೆಯಲ್ಲಿ ಹಾಕಿಕೊಳ್ಳಲಾಗದ ವಾತಾವರಣ ಕೆಲವು ಮನೆಗಳಲ್ಲಿದೆ. ಅಂತಹದ್ದರಲ್ಲಿ7 ದಿನಗಳ ಕಾಲ ರಾಜ್ಯದ ಬೇರೆಬೇರೆ ಕಡೆಗಳಿಂದ ಬಂದಿರುವ 1200 ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿಕೊಂಡು ಯಾವ ವಿದ್ಯಾರ್ಥಿಗೂ ಯಾವುದೇ ತೊಂದರೆಯಾಗದಂತೆ ಡಾ. ರಮೇಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉತ್ತಮ ಪ್ರೇರಣದಾಯಕ ಶಿಬಿರವನ್ನು ಸುಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ನಡೆಸಲಾಗಿದೆ. ಮಕ್ಕಳನ್ನು ಬೆಳಿಗ್ಗೆ ಮೊಬೈಲ್ ಅಲರಾಂ ಅಥವಾ ತಂದೆ ತಾಯಿ ಏಳಿಸುವುದು ಸರಿಯಲ್ಲ. ಹೊಸ ಹೊಸ ಕನಸುಗಳೊಂದಿಗೆ ಮಕ್ಕಳೇ ಬೆಳಿಗ್ಗೆ ಬೆಳಿಗ್ಗೆ ಏಳಬೇಕು. ನಿರ್ದಿಷ್ಠ ಗುರಿಯನ್ನಿರಿಸಿಕೊಂಡು ಕನಸನ್ನ ಸಾಕಾರಗೊಳಿಸಿಕೊಳ್ಳಲು ಸಾಧನೆ ಮಾಡಬೇಕೆಂದು ನುಡಿದರು.

ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ ಸುಮಾರು ೧೫೦೦ ವಿದ್ಯಾರ್ಥಿಗಳು ಶಿಬಿರಕ್ಕೆ ನೊಂದಾವಣೆ ಮಾಡಿಕೊಂಡಿದ್ದರು. ಅಷ್ಟೊಂದು ಮಕ್ಕಳಿಗೆ ಒಂದೇ ಕಡೆ ಶಿಬಿರ ನಡೆಸದೆ ಹಲವಾರು ತಂಡಗಳನ್ನಾಗಿ ಮಾಡಿ ಶಿಬಿರ ನಡೆಸಲಾಗಿದೆ. ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಸಿಕ್ಕಿದ ಅನುಭವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ ಕಳೆದ ೪ ವರ್ಷದ ಹಿಂದೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿಯವರು ಕಂಡ ಕನಸಿನಂತೆ ಈ ಶಿಬಿರ ಆರಂಭಿಸಿ ಪ್ರತೀ ವರ್ಷ ಮುಂದುವರಿಸಿಕೊಂಡು ಬಂದಿದ್ದೇವೆ. ಶಿಬಿರಕ್ಕೆ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾಗವಹಿಸಿದ ಮಕ್ಕಳಿಗೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಿದ್ದೇವೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದರೊಂದಿಗೆ ಮೌಲ್ಯಾಧಾರಿತ ಹಾಗೂ ನೈತಿಕ ವಿಷಯಗಳನ್ನು ತಿಳಿಸುವುದು ನಮ್ಮ ಶಿಬಿರದ ಗುರಿಯಾಗಿದ್ದು ಅತ್ಯಂತ ಯಶಸ್ವಿಯಾಗಿ ಮಂಥನ ಬೇಸಿಗೆ ಶಿಬಿರ ಮುಗಿಸಿದ ತೃಪ್ತಿ ನಮಗಿದೆ ಎಂದರು.

ಮುಖ್ಯೋಪಾದ್ಯಾಯರಾದ ಪ್ರದೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರೀಯಾ ಎಸ್ ಕಾಂಚನ್ , ಸಾನ್ನಿಧ್ಯ, ಪ್ರಣಿತ ಕೇಶವ, ಅವನಿ ಮಂಥನ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಪೋಷಕರಾದ ಸುರೇಂದ್ರರಾವ್ ಕುಂದಾಪುರ ,ರಾಘವೇಂದ್ರ ಶೇಟ್, ರೇಖಾ ಕುಲಾಲ್, ಶ್ರೀಮತಿ ರಾಧಾ, ಆಜಾದ್ ಮಹಮ್ಮದ್ ಸುಜ್ಞಾನ ಶಿಕ್ಷಣ ಸಂಸ್ಥೆ ಹಾಗೂ ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಶಿಬಿರದಲ್ಲಿ ಮಕ್ಕಳಿಗೆ ನೈಜ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡಲಾಗಿದೆ. ಸ್ಟಾರ್ ಹೋಟೆಲ್ ನವರು ನೀಡುವ ಉತ್ತಮ ಆಹಾರವನ್ನು ಇಲ್ಲಿ ನೀಡಲಾಗಿದೆ. ಶಿಬಿರವನ್ನು ಸಾಕಷ್ಟು ಯೋಚನೆ ಮಾಡಿ, ಯೋಜನೆ ರೂಪಿಸಿ ನಡೆಸಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಅಶೋಕ್ ತೆಕ್ಕಟ್ಟೆ ಮಾತನಾಡಿ ೧೫೦೦ ಮಕ್ಕಳನ್ನು ಒಂದೆಡೆ ಸೇರಿಸಿ ಉಪಯುಕ್ತ ರೀತಿಯಲ್ಲಿ ಮಂಥನ ಶಿಬಿರ ಮುಗಿಸಲಾಗಿದೆ. ದೂರದ ಬೆಂಗಳೂರಿನ ಮಕ್ಕಳು ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ನೀಡಲಾಗಿದೆ ಎಂದರು.
ಮಂಥನ ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ಶಿಕ್ಷಕಿ ವೈಷ್ಣವಿ ಓದಿದರು. ಪ್ರಾಂಶುಪಾಲ ರಂಜನ ಶೆಟ್ಟಿ ಸ್ವಾಗತಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ವಿನಯ್ ನಿರೂಪಿಸಿದರು.






