udupimitra.in
  • June 14, 2026
  • Last Update June 14, 2026 4:42 pm
  • Brahmavara

ಸೇವಾ ಸಂಕಲ್ಪ ಕಾರ್ಯಕ್ರಮ: ಸಂಪತ್ ಕುಮಾರ್ ಶೆಟ್ಟಿಯವರ ಕೊಡುಗೆ ಶ್ಲಾಘನೀಯ- ಕೋಟ ಶ್ರೀನಿವಾಸ ಪೂಜಾರಿ

ಸೇವಾ ಸಂಕಲ್ಪ ಕಾರ್ಯಕ್ರಮ:  ಸಂಪತ್ ಕುಮಾರ್ ಶೆಟ್ಟಿಯವರ ಕೊಡುಗೆ ಶ್ಲಾಘನೀಯ- ಕೋಟ ಶ್ರೀನಿವಾಸ ಪೂಜಾರಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಕುಂದಾಪುರ, ಜೂನ್ ೧೪: ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿಯವರು ತಮ್ಮ ವಿವಿಧ ಸಂಸ್ಥೆಗಳ ಮೂಲಕ ಸುಮಾರು ೪,೦೦೦ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು, ಸಾವಿರಾರು ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಕಾರಣರಾಗಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋ ಶ್ಫ್ರೀನಿವಾಸ್ ಪೂಜಾರಿ ಹೇಳಿದರು.


ಅವರು ಕೋಟೇಶ್ವರದ ಯುವ ಮೆರಿಡಿಯನ್ ಗ್ರಾಮ್ಮಿ ಬಾಲ್‌ರೂಮ್ ಸಭಾಂಗಣದಲ್ಲಿ ನಡೆದ ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ‘ಸೇವಾ ಸಂಕಲ್ಪ ಸಹಾಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಪತ್ ಕುಮಾರ್ ಶೆಟ್ಟಿಯವರ ಸಂಸ್ಥೆಯಂತಹ ಹತ್ತಾರು ಉದ್ಯಮಗಳು ಬೆಳೆದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಸ್ಥೆಯು ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಖಾಸಗಿ ವಲಯದಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ದೊರೆಯುತ್ತಿರುವ ಬೆಂಬಲ ಸಮಾಜಕ್ಕೆ ಮಾದರಿಯಾಗಿದೆ. ಸಂಪತ್ ಕುಮಾರ್ ಶೆಟ್ಟಿಯವರು ತಮ್ಮ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದು, ತಮ್ಮ ಆದಾಯದ ಒಂದು ಭಾಗವನ್ನು ವಿದ್ಯಾರ್ಥಿಗಳ ಹಾಗೂ ಅಗತ್ಯವಿರುವವರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯವಿದ್ದಾಗ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಕೃಷ್ಣ ಪ್ರಸಾದ್ ಸಂಸ್ಥೆ ಉತ್ತಮ ಉದಾಹರಣೆಯಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಯೊಬ್ಬನು ಶಿಕ್ಷಣದ ಮೂಲಕ ಉನ್ನತ ಮಟ್ಟಕ್ಕೇರಿದಾಗ ಮಾತ್ರ ಸಮಾಜದಲ್ಲಿ ನೈಜ ಬದಲಾವಣೆ ಸಾಧ್ಯವಾಗುತ್ತದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಫೌಂಡೇಶನ್ ಮೂಲಕ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


೨೦೧೨ರಲ್ಲಿ ಆರಂಭಗೊಂಡ ಸಂಸ್ಥೆಯ ಯಶಸ್ಸಿನ ಹಿಂದೆ ಸಿಬ್ಬಂದಿಗಳ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಪ್ರಸ್ತುತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ರೂ1 ಕೋಟಿ ನಿಧಿಯನ್ನು ಮೀಸಲಿಡಲಾಗಿದ್ದು, ಅದರ ಶೇಕಡಾ 80ರಷ್ಟು ಮೊತ್ತವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅವರ ಕನಸುಗಳಿಗೆ ನೆರವಾಗುವ ಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ಕೇವಲ 13ವರ್ಷಗಳ ಅವಧಿಯಲ್ಲಿ ಸಂಪತ್ ಶೆಟ್ಟಿಯವರು ತಮ್ಮ ಕೈಗಾರಿಕೆಯನ್ನು ಯಶಸ್ಸಿನ ಶಿಖರಕ್ಕೇರಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವುದು ಶ್ಲಾಘನೀಯ ಸಾಧನೆ ಎಂದರು.
ಪತ್ರಕರ್ತ ಕೆ.ಸಿರಾಜೇಶ್ ಮಾತನಾಡಿ, ವ್ಯಕ್ತಿಯ ಆಯ್ಕೆಗಳು ಅವನನ್ನು ಶ್ರೇಷ್ಠತೆಯತ್ತ ಕೊಂಡೊಯ್ಯುತ್ತವೆ. ಉತ್ತಮ ಮೌಲ್ಯಗಳು ಮತ್ತು ಸೂಕ್ತ ನಿರ್ಧಾರಗಳೇ ಸಂಪತ್ ಶೆಟ್ಟಿಯವರ ಯಶಸ್ಸಿನ ಹಿಂದಿನ ಶಕ್ತಿ ಎಂದು ಹೇಳಿದರು.


ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಸಂಪತ್ ಕುಮಾರ್ ಶೆಟ್ಟಿಯವರು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಶುಭ ಹಾರೈಸಿದರು.
ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಕೊತ್ತಾಡಿಯ ಡಾ.ಉಮೇಶ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ೩೫ ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ ಮೂವರು ವಿದ್ಯಾರ್ಥಿಗಳನ್ನು ಸಂಪತ್ ಕುಮಾರ್ ಶೆಟ್ಟಿಯವರು ದತ್ತು ಸ್ವೀಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್ ಮಾತನಾಡಿ ನೀಡುವವರ ಔದಾರ್ಯವು ಪಡೆಯುವವರ ಯೋಗ್ಯತೆಗಿಂತಲೂ ಶ್ರೇಷ್ಠವಾಗಿದೆ. ನೆರವು ಪಡೆದವರು ಮುಂದಿನ ದಿನಗಳಲ್ಲಿ ತಾವೂ ಸಮಾಜಕ್ಕೆ ಕೊಡುಗೆ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು. ಶಿಕ್ಷಣ ದತ್ತು ಯೋಜನೆಯಡಿ 10 ವಿದ್ಯಾರ್ಥಿಗಳಿಗೆ ಹಾಗೂ ೨೪ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ದೀನಬಂಧು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಂಡಾರು ಹಾಗೂ ಮಹಾತ್ಮ ಗಾಂಧಿ ಪ್ರೌಢಶಾಲೆ, ಸೈಬ್ರಕಟ್ಟೆಯ ಅತಿಥಿ ಶಿಕ್ಷಕರ ವಾರ್ಷಿಕ ವೇತನಕ್ಕಾಗಿ ಸಹ ಚೆಕ್‌ಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಯುವ ಮೆರಿಡಿಯನ್ ಸಂಸ್ಥೆಯ ಉದಯಕುಮಾರ್ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ ಸೋನಾಲಿ ಸಂಪತ್‌ಕುಮಾರ್ ಶೆಟ್ಟಿ ವೇದಿಕೆಯಲ್ಲಿದ್ದರು.
ಕೃಷ್ಣಪ್ರಸಾದ್ ಸ್ಟೀಲ್ ಮ್ಯಾನೇಜರ್ ಶ್ರೀನಿವಾಸ ಶೆಟ್ಟಿ ವಂದಿಸಿದರು. ಎಳ್ಳಂಪಳ್ಳಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page