ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ :
ಉಡುಪಿ, ಜೂನ್ 19: ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಉಡುಪಿ ನಗರಸಭೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ (35) ಅವರು ಮೇ 27, 2026ರಂದು ಬೆಳಿಗ್ಗೆ 11.30ಕ್ಕೆ ಪೌರಾಯುಕ್ತರ ಆದೇಶದ ಮೇರೆಗೆ ಶಿವಳ್ಳಿ ಗ್ರಾಮದ ಕೊಳದಪೇಟೆ ರಸ್ತೆಯಲ್ಲಿರುವ ಸಾಯಿ ಹರ್ಷ ಸ್ವೈಯರ್ ಕಟ್ಟಡದ ಸಮೀಪದ ಕೆನರಾ ಇಲೆಕ್ಟ್ರಿಕಲ್ ಅಂಗಡಿ ಮಾಲಕ ಗುರುನಾಯಕ್ ಅವರ ಮನೆಗೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದ್ದರು.

ಈ ವೇಳೆ ಮನೆಯಲ್ಲಿ ಇದ್ದ ವರುಣ್ ಖೆಮಾನಿ ಹಾಗೂ ಮತ್ತೋರ್ವ ವ್ಯಕ್ತಿಗೆ, ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿರುವುದಾಗಿ ತಿಳಿಸಿದಾಗ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪರಿಶೀಲನೆಯ ವೇಳೆ ಮನೆಯ ಕಾಂಪೌಂಡ್‌ನಿಂದ ಮೂರು ನಾಯಿಗಳು ರಸ್ತೆಯ ಕಡೆಗೆ ಬರುತ್ತಿರುವುದು ಹಾಗೂ ಇನ್ನೂ ಮೂರು ನಾಯಿಗಳು ಮನೆಯ ಅಂಗಳದಲ್ಲಿ ಮುಕ್ತವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ನಾಯಿಗಳನ್ನು ನಿಯಂತ್ರಿಸಲು ಅಥವಾ ಕಟ್ಟಿ ಹಾಕಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದಾಗ, ಗುರುನಾಯಕ್ ಅವರ ಮನೆಯ ನಾಯಿಗಳು ರಸ್ತೆಗೆ ಬಂದು ಶಾಲೆಗೆ ಹೋಗುವ ಮಕ್ಕಳು, ಬೆಳಗಿನ ವಾಕಿಂಗ್ ಮಾಡುವ ವೃದ್ಧರು, ಸೈಕಲ್ ಹಾಗೂ ಬೈಕ್ ಸವಾರರನ್ನು ಬೆನ್ನಟ್ಟುತ್ತವೆ. ಅಲ್ಲದೆ, ಏಕಾಏಕಿ ವಾಹನಗಳ ಮುಂದೆ ಬರುವುದರಿಂದ ಅಪಘಾತ ಸಂಭವಿಸಿ ಜೀವಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧಿಕಾರಿಗಳು ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ, ಆರೋಪಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ರೀತಿಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 291, 292 ಹಾಗೂ 3(5) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



