ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಕೇಂದ್ರದ ಅಧಿಸೂಚನೆಗೆ ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸದ 1994ರಿಂದ ಆಡಳಿತಕ್ಕೆ ಬಂದ ಎಲ್ಲಾ ರಾಜ್ಯ ಸರ್ಕಾರಗಳೇ ಹೊಣೆ ಎಂದು ಸಾಮಾಜಿಕ ಚಿಂತಕರೂ, ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಅತುಲ್‌ಕುಮಾರ್ ಶೆಟ್ಟಿ ಉಡುಪಿ ಮಿತ್ರಕ್ಕೆ ತಿಳಿಸಿದ್ದಾರೆ.
1994ರಲ್ಲಿ ಸುಪ್ರೀಂ ಕೋರ್ಟ್‌ಗೆ ಬಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ1984ರ ವೈಲ್ಡ್‌ಲೇಫ್ ಕಾನೂನು ಸರಿಯಾಗಿ ಅನುಷ್ಟಾನವಾಗುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸು ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅರಣ್ಯ ಸಂರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತ್ತು. ಆಗ ಕೇಂದ್ರ ಸರ್ಕಾರ ಮಾಧವ ಗಾಡ್ಗೀಳ್ ಕಮಿಟಿ, ಕಸ್ತೂರಿ ರಂಗನ್ ಸಮಿತಿಗಳನ್ನು ರಚಿಸಿ ವರದಿ ಪಡೆದುಕೊಂಡು ೨೦೧೪ರಲ್ಲಿ ಪ್ರಥಮ ಅಧಿಸೂಚನೆ ಪ್ರಕಟಿಸಿತ್ತು.

ವರದಿಯಲ್ಲಿ ನಾವು ಸೆಟಲೈಟ್ ಚಿತ್ರಣ ಆಧರಿಸಿ ವ್ಯಾಪ್ತಿ ಸೂಚಿಸಿದ್ದೇವೆ. ನೀವು ಗ್ರೌಂಡ್‌ಲೆವೆಲ್‌ನಲ್ಲಿ ಪರಿಶೀಲಿಸಿ, ಇಲ್ಲಿ ಕಾಡು ಇದೆಯೇ? ಮನುಷ್ಯರಿಗೆ ತೊಂದರೆಯಾಗುತ್ತಿದೆಯೇ? ಎಂಬುದನ್ನು ಕಂಡು ಆಕ್ಷೇಪಣೆ ಸಲ್ಲಿಸಬೇಕೆಂದು ಸೂಚಿಸಿದ್ದರು. ಇದನ್ನು ಗಮನಿಸಿದ ಕೇರಳ ಸರ್ಕಾರ 2015ರಲ್ಲಿ ಸರಿಯಾಗಿ ಪರಿಶೀಲಿಸಿ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿ ಜನ ವಸತಿ ಪ್ರದೇಶಗಳನ್ನು ಕೈ ಬಿಡುವಂತೆ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕುಂಭಕರ್ಣ ನಿದ್ದೆಯಲ್ಲೇ ಕಾಲಕಳೆದರು. ಇವರು ಸರಿಯಾಗಿ ಪರಿಶೀಲನೆ ಮಾಡದೆ ಅರಣ್ಯ ಅಂತ ಬರೆದುಕೊಂಡಿದ್ದ ೧೯೬೦ರ ಹಳೆ ಅಡಂಗಲ್‌ನ ದಾಖಲೆಯನ್ನೇ ಕೇಂದ್ರಕ್ಕೆ ಸಲ್ಲಿಸುತ್ತಾ ಬಂದರು ಹೊರತು ಗ್ರ್ರೌಂಡ್‌ಲೆವೆಲ್ ಸರ್ವೆ ಮಾಡಲೇ ಇಲ್ಲ. ಹಾಗಾಗಿ ಜಿಲ್ಲೆಯ ಜನವಸತಿ ಪ್ರದೇಶ ಇರುವ ೩೬ ಗ್ರಾಮಗಳು ಕಸ್ತೂರಿ ರಂಗನ್ ಸಿದ್ದಪಡಿಸಿದ ಸೆಟಲೈಟ್ ಆಧಾರಿತ ವರದಿಯಲ್ಲಿ ಉಳಿದುಕೊಂಡಿವೆ. ಈ ಜನವಸತಿ ಇರುವ ಗ್ರಾಮಗಳನ್ನು ಕೈ ಬಿಡಬೇಕಿತ್ತು. ಆ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ೧೯೧೪ರಿಂದ ಇದುವರೆಗೆ ಆಳಿದ ಎಲ್ಲಾ ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದು ಈ ಎಲ್ಲಾ ರಾಜ್ಯ ಸರ್ಕಾರಗಳು ಇದಕ್ಕೆ ಹೊಣೆಗಾರರಾಗಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಏನನ್ನೂ ಮಾಡುತ್ತಿಲ್ಲ. ವರದಿ ಜಾರಿಯಾದಲ್ಲಿ ೩೬ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆ ಆಗಲಿದೆ. ಶಾಸಕರು, ಜನಪ್ರತಿನಿಧಿಗಳು ಈ ಬಗ್ಗೆ ರಾಜ್ಯದ ಅರಣ್ಯ ಸಚಿವರ ಗಮನಕ್ಕೆ ತಂದು ಸೂಕ್ತ ಸರ್ವೆ ಮಾಡಿ ಈ ಗ್ರಾಮಗಳನ್ನು ಕೈಬಿಡುವಂತೆ ಕ್ರಮ ಕೈಗೊಳ್ಳಬೇಕೆಂದು ಡಾ. ಅತುಲ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.




