ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ನ.೩: ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜ ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರ ಸಹಕಾರ ಸಂಘ ಇವರ ಜಂಟಿ ಸಹಯೋಗದೊಂದಿಗೆ ನ.೫ ರಂದು ರೈತರ ಭೂಮಿಗೆ ಸಂಬಂಧಿಸಿದ ಶಾಸನಬದ್ಧ ಹಕ್ಕುಗಳಾದ ಕುಮ್ಕಿ ಹಾಗೂ ಗೇರು ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿ ಹಾವಳಿ ಬಗ್ಗೆ ವಿಚಾರ ಸಂಕಿರಣವನ್ನು ಉಡುಪಿ ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ತಿಳಿಸಿದರು.
ಅವರು ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಇದರ ನಿರ್ದೇಶಕ ಪ್ರದೀಪ್ ಹೆಬ್ಬಾರ್ ಮಾತನಾಡಿ ಅನಾಧಿಕಾಲದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿ ಉಳ್ಳವರು ತಮ್ಮ ಖಾಸಗಿ ಭೂಮಿಯ ಗಡಿಯಿಂದ ನೂರು ಗಜದ ಅಂತರದವರೆಗಿರುವ ಸರ್ಕಾರಿ ಭೂಮಿಯಲ್ಲಿರುವ ಕೃಷಿ ಉಪಯೋಗಕ್ಕೆ ಬೇಕಾಗುವ ಸೊಪ್ಪು ತರಲೆ ಮರಗಳನ್ನು ಉಪಯೋಗಿಸುವ ಹಾಗೂ ಕಸುಹರುಗಳನ್ನು ಮೇಯಿಸಲು ದನದ ಮೇವು ಆಗಿರುವ ಹುಲ್ಲನ್ನು ತಂದು ಬಳಸುವ ಹಕ್ಕನ್ನು ಕುಮ್ಮಕಿ ಭೂಮಿಯಲ್ಲಿ ಬಹುಮಾಲಕರು ಹೊಂದಿರುತ್ತಾರೆ. ಇದನ್ನು ಮದ್ರಾಸ್ ರೆವೆನ್ಯೂ ಬೋರ್ಡ್ ಸ್ಟ್ಯಾಂಡಿಂಗ್ ಆರ್ಡಿನಲ್ಲಿ ಶಾಸನಬದ್ಧ ಹಕ್ಕಾಗಿ ಘೋಷಿಸಲಾಗಿತ್ತು ಮುಂದೆ ಕರ್ನಾಟಕ ಭೂ ಕಂದಾಯ ಅಧಿನಿಯಮ ಮತ್ತು ಅದರ ಅಡಿಯಲ್ಲಿ ರಚಿಸಿದ ನಿಯಮಗಳಲ್ಲಿ ಕೂಡ ಕೃಷಿ ಹಕ್ಕನ್ನು ಮಾನ್ಯ ಮಾಡಲಾಗಿದೆ ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಲ್ಲಿ ಸ್ಪಷ್ಟಪಡಿಸಲಾಗಿದೆ ಇದರಿಂದಾಗಿ ಕುಮ್ಕಿ ಭೂಮಿಯನ್ನು ರೈತರೇ ಸಂರಕ್ಷಿಸಿಕೊಂಡು ಬಂದಿರುತ್ತಾರೆ ಇಲ್ಲದಿದ್ದರೆ ಬೇರೆ ಸರ್ಕಾರಿ ಭೂಮಿಯಂತೆ ಕುಮ್ಕಿ ಭೂಮಿ ಕೂಡ ಅಕ್ರಮ ಸಕ್ರಮದಲ್ಲಿ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿತ್ತು ಈ ಕುಮ್ಕಿ ಭೂಮಿಗಳನ್ನು ಲಗ್ತು ವರ್ಗದವರಿಗೆ ಮಾಲೀಕತ್ವ ನೀಡಿ ಮಂಜೂರು ಮಾಡುವ ಕುರಿತು ಈ ಹಿಂದೆ ನಿಯಮಗಳನ್ನು ಮಾಡಿದ್ದು ಅದರ ಪ್ರಕಾರ ಕುಮ್ಕಿ ಭೂಮಿಯ ಗೈಡೆನ್ಸ್ ವ್ಯಾಲ್ಯೂ ಪಡೆದು ವರ್ಗದವರಿಗೆ ಮಾಲೀಕತ್ವ ನೀಡಲು ಸರ್ಕಾರ ತೀರ್ಮಾನಿಸಿತ್ತು ಆದರೆ ಅದು ಈವರೆಗೂ ಜಾರಿ ಬರಲಿಲ್ಲ ಹಾಗಾಗಿ ಈ ನಿಯಮ ಜಾರಿಗೆ ತಂದು ಕುಮ್ಕಿ ಭೂಮಿಯ ಮಾಲೀಕತ್ವವನ್ನು ವರ್ಗದವರಿಗೆ ನೀಡಬೇಕು ಎಂದರು.
ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಉಪಾಧ್ಯಕ್ಷ ಶೇಡಿ ಕೊಡ್ಲು ವಿಠ್ಠಲ್ ಶೆಟ್ಟಿ ಮಾತನಾಡಿ ಕಾಡು ಪ್ರಾಣಿಗಳ ಹಾವಳಿಯಿಂದ ಕರಾವಳಿ ಉದ್ದಕ್ಕೂ ಇರುವ ಜನವಸತಿ ಪ್ರದೇಶದ ಕೃಷಿಗೆ ನಿರಂತರ ಹಾನಿಯಾಗುತ್ತಿದೆ. ಈ ಕಾಡುಪ್ರಾಣಿಗಳ ನಿಯಂತ್ರಣ ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ. ಜಿಂಕೆ, ಕಾಡು ಹಂದಿ, ಮಂಗ, ಕಾಡುಕೋಣಗಳಿಂದಾಗಿ ಯಾವುದೇ ಕೃಷಿ ಮಾಡದ ಪರಿಸ್ಥಿತಿ ಉಂಟಾಗಿದೆ. ಕಾಡು ಪ್ರಾಣಿಗಳಿಂದಾಗಿ ನಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಕೃಷಿ ಮತ್ತು ಜನವಸತಿ ಪ್ರದೇಶಗಳಿಗೆ ಕಾಡುಪ್ರಾಣಿಗಳು ಬರದಂತೆ ಮತ್ತು ಕಾಡಿಗೆ ಜನರು ಹೋಗದಂತೆ ಕಾಡಿನ ರಕ್ಷಣೆ ಮತ್ತು ಕೃಷಿ ಹಾಗೂ ಜನವಸತಿ ಪ್ರದೇಶದ ಜನರಿಗೆ ಕೃಷಿ ಚಟುವಟಿಕೆ ನಡೆಸಲು ಹಾಗೂ ಜನಜೀವನ ಸುಗಮವಾಗಿ ನಡೆಸಿಕೊಂಡು ಹೋಗಲು ಸರಕಾರ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು ಮಾತನಾಡಿ ಸುಪ್ರಿಂಕೋರ್ಟ್ ಮಾರ್ಗದರ್ಶನದಂತೆ ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರಿದಿಯನ್ನು ಜಾರಿಯ ಬಗ್ಗೆ 7 ಬಾರಿ ಅಧಿಸೂಚನೆ ಹೊರಡಿಸಿದರೂ ರಾಜ್ಯ ಸರ್ಕಾರಗಳು ಸರಿಯಾದ ಮಾಹಿತಿಯನ್ನು ನೀಡದೆ ಜಿಲ್ಲೆಯ ೪೯ ಗ್ರಾಮಗಳ ಜನರು ಆತಂಕ ಅನುಭವಿಸುವಂತಾಗಿದೆ. ಗ್ರಾಮ ಮಟ್ಟದಲ್ಲಿ ಪರಿಶೀಲನೆ ಮಾಡಿ ಸರಿಯಾದ ಸರ್ವೆ ಮಾಡಲು ಸೂಚಿಸಿದ್ದರೂ ೧೯೯೬ರಿಂದ ಸರಿಯಾದ ಮಾಹಿತಿ ನೀಡದೆ ನಮ್ಮ ಜನರನ್ನು ಕತ್ತಲಲ್ಲಿ ಇರಿಸಿದ್ದಾರೆ. ಕಸ್ತೂರಿ ರಂಗನ್ ವರದಿ ಸೆಟಲೈಟ್ ಆಧಾರಿತವಾಗಿದ್ದು ತಳಮಟ್ಟದ ಸರ್ವೆ ಮಾಡಿ ಸತ್ಯಾಂಶವನ್ನು ಕೇಂದ್ರಕ್ಕೆ ವರದಿ ಮಾಡಬೇಕಾಗಿದ್ದ ರಾಜ್ಯ ಸರ್ಕಾರ ಅದನ್ನು ಮಾಡದೆ ಜನರನ್ನು ವಂಚಿಸಿದೆ. ಈಗ ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಮರು ಸಮೀಕರಿಸಿ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ಬದಿಗಿರಿಸಿ ಹೊಸ ಅಧಿಸೂಚನೆ ಹೊರಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಈ ಎಲ್ಲಾ ವಿಚಾರವನ್ನು ನ.೫ರಮದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಕೋರಿಕೊಂಡರು. ಪತ್ರಿಕಾಗೋಷ್ಟಿಯಲ್ಲಿ ಮಾಜಿ ಉಡುಪಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಉಪೇಂದ್ರ ನಾಯಕ್, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೈಕುಂಠ ಹೇರ್ಳೆ ಇದ್ದರು.


