ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಸೆ..8: ಬ್ರಹ್ಮಾವರ : ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ 1070.00 ಕೋಟಿ ರೂ. ವ್ಯವಹಾರ ನಡೆಸಿದೆ. ಸಂಘವು 31-03-2026 ಕ್ಕೆ 6.16 ಕೋಟಿ ರೂಗಳ ಪಾಲು ಬಂಡವಾಳ ಹೊಂದಿದೆ. ರೂ. 244.76 ಕೋಟಿಗೂ ಮಿಕ್ಕಿ ಠೇವಣೆ ಸಂಗ್ರಹಿಸಿ ರೂ. 182.50 ಕೋಟಿಗೂ ಮಿಕ್ಕಿ ಸಾಲ ನೀಡಿದೆ. ಈ ಸಂಘದಲ್ಲಿ
ಸುಮಾರು ಶೇ.99 ರಷ್ಟು ಸಾಲ ವಸೂಲಾತಿಯಾಗಿದೆ. 31-03-2026 ಕ್ಕೆ ಸಂಘವು ರೂ. 31.72 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ರೂ. 113.35 ಕೋಟಿ ವಿವಿಧ

ಬ್ಯಾಂಕ್‌ಗಳಲ್ಲಿ ವಿನಿಯೋಗಿಸಿದೆ. ಸುಮಾರು ರೂ. 10 ಕೋಟಿಯಷ್ಟು ಸ್ಥಿರ ಚರ ಆಸ್ತಿಯನ್ನು ಸಂಘವು ಹೊಂದಿದೆ. ಸದಸ್ಯರಿಗೆ ಹೌಸಿಂಗ್ ಲೋನ್ ಬಡ್ಡಿಯನ್ನು 10% ಗೆ ಇಳಿಸಿದ್ದು ಈ ಬಾರಿ ಸದಸ್ಯರಿಗೆ 19.5% ಡಿವಿಡೆಂಡ್ ನೀಡಲಿದ್ದೇವೆ. ಎಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ನುಡಿದರು. ಅವರು ಸೆ.೮ರಂದು ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು. ಸಂಘದ ಯಶಸ್ಸಿನ ಹಿಂದೆ ಸಂಘದ ಸದಸ್ಯರ ಪ್ರಾಮಾಣಿಕ ವ್ಯವಹಾರ, ನಿರ್ದೇಶಕರು ಹಾಗೂ 9 ಶಾಖೆಯ 40 ಮಂದಿ ಸಿಬ್ಬಂದಿಗಳ ಪರಿಶ್ರಮ ಕಾರಣ. ಸಂಘದ ಶಿಸ್ತಬದ್ಧ ವ್ಯವಹಾರ ಗಮನಿಸಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ “ ಅತ್ಯುತ್ತಮ ಸಹಕಾರ ಸಂಘ ರಾಜ್ಯ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ “ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ“ ಈ ಬಾರಿ ದೊರಕಿದೆ.

ನಮ್ಮ ಸದಸ್ಯರು ಮಹಾ ಸಭೆಯಲ್ಲಿ ಮಾತ್ರ ಸಲಹೆ ಕೋಡಬೇಕೆಂದಿಲ್ಲ.ಸದಸ್ಯರು 365 ದಿನಗಳಲ್ಲಿ ಯಾವತ್ತೂ ಸಲಹೆ ಕೊಡಬಹುದು. ನೀಲಾವರದಲ್ಲಿ ಶಾಖೆ ಆರಂಭಿಸಿದ್ದು ಹೇರೂರಿನಲ್ಲಿ ಶಾಖೆ ತೆರೆಯಲಿದ್ದು ಅದಕ್ಕೆ ಜಾಗ ಹುಡುಕಾಡುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ ನಿರ್ದೇಶಕರಾದ ಜ್ಞಾನ ವಸಂತ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಾಗವೇಣಿ ಪಂಡರೀನಾಥ, ನಳಿನಿ ಪ್ರದೀಪ್ ರಾವ್, ಎಸ್. ದಯಾನಂದ ನಾಯಕ್, ಶ್ರೀನಿವಾಸ ಶೆಟ್ಟಿ, ಸಂತೋಷ ಜತ್ತನ್, ಎಸ್. ನಾರಾಯಣ, ನಿತ್ಯಾನಂದ ನಾಯ್ಕ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್. ಸುಭಾಶ್ಚಂದ್ರ ಶೆಟ್ಟಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಂಘದ ನಿವೃತ್ತ ಸಿಬ್ಬಂದಿ ಶ್ರೀಪತಿರಾವ್ ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಹಾಗೂ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು.ಸಂಘದ ಸಿಬ್ಬಂದಿ ಲೋಕನಾಥ ನಾಯರಿ ಸನ್ಮಾನ ಪತ್ರ ವಾಚಿಸಿದರು.ಸುಬ್ರಹ್ಮಣ್ಯ ಗಾಣಿಗ ಪ್ರಾರ್ಥಿಸಿದರು. ವಾಸುದೇವ ನಕ್ಷತ್ರಿ ವಂದಿಸಿದರು.ಮ್ಯಾನೇಜರ್ ಪ್ರಕಾಶ್ ಸ್ವಾಗತಿಸಿ ನಿರೂಪಿಸಿದರು.




