ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಎ.೨೫: ಕಾರಂತರೆಂಬ ನಡೆದಾಡುವ ವಿಶ್ವಕೋಶವನ್ನು ಮುಂದಿನ ತಲೆಮಾರುಗಳಿಗೆ ಶಾಶ್ವತವಾಗಿ ನೆನಪಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕೆಂದು ಉಡುಪಿ ಚಿಕ್ಕ ಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಅವರು ಸಾಸ್ತಾನ ಕೋಸ್ಟಲ್ ಪ್ಯಾರಡೈಸ್‌ನಲ್ಲಿ ನಡೆದ ಕಾರಂತರ ಸುಳಿಯಲ್ಲಿ ಪುಸ್ತಕ ಬಿಡುಗೊಡೆಗೊಳಿಸಿ ಮಾತನಾಡಿದರು.

ಕಾರಂತರದ್ದು ವಿಭಿನ್ನ ವ್ಯಕ್ತಿತ್ವ. ಅವರು ಚುನಾವಣೆಗೆ ನಾಮಪತ್ರವನ್ನು ಹಾಕಿ ಪ್ರಚಾರ ಮಾಡದೆ ಅಮೇರಿಕಕ್ಕೆ ಹೊರಟು ಹೋಗಿದ್ದರು. ಚುನಾವಣೆಯಲ್ಲಿ ಸೋತಾಗ ಜೈಕಾರ, ಧಿಕ್ಕಾರ ಎರಡು ನನ್ನ ಪಾಲಿಗೆ ಒಂದೇ ಎಂದು ಹೇಳಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಅವರು ಜೈಲಿಗೆ ಹೋಗಿದ್ದರು. 90 ಹರೆಯದಲ್ಲೂ ಯಕ್ಷಗಾನ ವೇಷವನ್ನು ಹಾಕಿ ಕುಣಿದಿದ್ದರು. ಕಾರಂತರಲ್ಲಿ ವೈವಿದ್ಯತೆ ಇತ್ತು. ನಿರಾಳ ಮನಸ್ಸು ಇತ್ತು. ಲೀಲಾ ಆಳ್ವಾ ಎಂಬ ಬಂಟರ ಹೆಣ್ಣುಮಗಳನ್ನು ಮದುವೆಯಾಗಿ ಅಂತರ್ಜಾತಿ ಮದುವೆಯನ್ನು ಅಂದೇ ಬೆಂಬಲಿಸಿದ್ದರು. ಅನೇಕ ವಿದ್ಯಮಾನಗಳ ನಡುವೆ ಕಾರಂತರ ವಿಚಾರಧಾರೆಗಳು ನಮ್ಮ ನಡುವೆ ಇವೆ ಎಂದರು.

ಡಾ.ಉಲ್ಲಾಸ್ ಕಾರಂತ್ ಮಾತನಾಡಿ ಎಲ್ಲಾ ಜೀವನ ಚರಿತ್ರೆಗಳು ಹೊಗಳಿಕೆಯಲ್ಲೇ ಮುಕ್ತಾಯವಾಗುತ್ತದೆ. ಆದರೆ ನಾವು ಕಾರಂತರ ಬಗ್ಗೆ ಅವರ ಸಮಕಾಲಿನವರನ್ನು ಮಾತನಾಡಿಸಿ, ವಾಸ್ತಾವಿಕವಾಗಿ ನಡೆದಿರುವ ಎಲ್ಲಾ ವಿಚಾರಗಳನ್ನು ಸಂಗ್ರಹಿಸಿ ಬರೆದಿದ್ದೇವೆ. ನೋವು ನಲಿವುಗಳನ್ನು ಸೇರಿಸಿದ್ದೇವೆ. ನಮ್ಮ ಅಮ್ಮನ ವಿಷಯವನ್ನೂ ಬರೆದಿದ್ದೇವೆ. ನಾವು ಇಂಗ್ಲೀಷ್‌ನಲ್ಲಿ ಬರೆದ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ಬಂದಿದ್ದು ವಿಶ್ವೇಶ್ವರ ಭಟ್ ಕನ್ನಡಕ್ಕೆ ಭಾಷಾಂತರಿಸಿದ್ದು ಪುಸ್ತಕ ಅದ್ಭುತವಾಗಿ ಮೂಡಿಬಂದಿದೆ ಎಂದರು.
ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಅಧ್ಯಕ್ಷತೆಯನ್ನು ವಹಿಸಿದ್ದು ಅವರು ಮಾತನಾಡಿ ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು. ಅವರದ್ದು ಧೀಮಂತ ವ್ಯಕ್ತಿತ್ವ ಕಾಡಲಿನಷ್ಟೇ ಆಳವಾಗಿದೆ, ಆಕಾಶದಷ್ಟು ಎತ್ತರವಾಗಿದೆ. ಅವರು ಯಾವತ್ತೂ ಸಣ್ಣವರಾಗಿ ಇರಲಿಲ್ಲ. ಶಿವರಾಮ ಕಾರಂತರ ಬಗ್ಗೆ ಎಷ್ಟೇ ಪುಸ್ತಕ ಬಂದರೂ ಇನ್ನೂ ಬರೆಯಲಿಕ್ಕೆ ಸಾಕಷ್ಟು ವಿಷಯಗಳು ಸಿಗುತ್ತವೆ. ಅವರ ವ್ಯಕ್ತಿತ್ವವೇ ವಿಭಿನ್ನ ಎಂದರು.

ಲೇಖಕ, ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ ಶಿವರಾಮ ಕಾರಂತರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಕಾರಂತರು ನಿಜವಾದ ಅರ್ಥದಲ್ಲಿ ಕರ್ನಾಟಕದ ರವೀಂದ್ರನಾಥ ಠಾಗೂರ್. ಈ ರೀತಿಯ ವ್ಯಕ್ತಿಯ ಚಿತ್ರಣವನ್ನು ಪುಸ್ತಕರೂಪಕ್ಕೆ ಇಳಿಸುವುದು ಬಹಳ ಕಷ್ಟ. ಕಾರಂತರ ಬಗ್ಗೆ ಅವರ ಮೂವರು ಮಕ್ಕಳು ಸಮಚಿತ್ತದಿಂದ ಕಂಡು ಬರೆದಿದ್ದಾರೆ. ಇಲ್ಲಿಯ ತನಕ ನೋಡದೇ ಇರುವ ಕಾರಂತರ ಗುಣ ವಿಶೇಷವನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ನೋಡದೆ ಇರುವ ವಿಭಿನ್ನ ಜೀವನ ಚರಿತ್ರೆ ಇದಾಗಿದೆ ಎಂದರು.
ನಾಗರಿಕ ವಾರಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಹಾಗೂ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
. ಜನಸೇವಾ ಟ್ರಸ್ಟ್ ಸಂಚಾಲಕ ವಸಂತ ಗಿಳಿಯಾರ್ ಸ್ವಾಗತಿಸಿದ್ದು ಪೂರ್ಣಿಮ ಸುನಿಲ್ ಪಾಂಡೇಶ್ವರ ಪ್ರಾರ್ಥಿಸಿದರು. ರಾಘವೇಂದ್ರ ರಾಜ್ ಸಾಸ್ತಾನ ವಂದಿಸಿದ್ದು ಪತ್ರಕರ್ತ ಕೆ.ಸಿ.ರಾಜೇಶ್ ನಿರೂಪಿಸಿದರು.



