ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಏಪ್ರಿಲ್ 19:
ಆಧುನಿಕ ಸಂಗೀತದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಪದ ಹಾಡುಗಳು ಮತ್ತು ಜನಪದ ಕಲೆಗಳು ನಿಧಾನವಾಗಿ ಮರೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.

ಅವರು ಕೋಡಿ ಕನ್ಯಾನದಲ್ಲಿ ಶ್ರೀ ಬ್ರಾಹ್ಮೀ ಗ್ರೂಪ್ಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವ ಮಾನವ ಫೌಂಡೇಶನ್ (ಗುರುಮಿಠಕಲ್, ಯಾದಗಿರಿ) ಹಾಗೂ ತನ್ಮಯ್ ಪ್ರೊಡಕ್ಷನ್ಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಜನಪದ ಸಿರಿ” ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ರೀತಿಯ ಜನಪದ ಕಲಾಪ್ರಕಾರಗಳನ್ನು ಜೀವಂತಗೊಳಿಸುವ ಕಾರ್ಯಕ್ರಮಗಳು ಪ್ರಶಂಸನೀಯವೆಂದು ಹೇಳಿದರು.

ಕಾರ್ಯಕ್ರಮಕ್ಕೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಶುಭಾಶಯ ಕೋರಿದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿ, ಜನಪದ ಕಲೆಗಳಿಗೆ ಯಕ್ಷಗಾನ ಕಲೆಗೂ ಸಮಾನ ಸ್ಥಾನಮಾನವಿದ್ದು, ಯುವಜನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ನಿರ್ಲಕ್ಷ್ಯದಿಂದ ಈ ಕಲೆಗಳು ಹಿನ್ನಡೆಯಾಗುತ್ತಿವೆ ಎಂದು ತಿಳಿಸಿದರು. ಜನಪದ ಕಲೆಗಳ ಸಂರಕ್ಷಣೆಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಯರತ್ನ ಚಾರಿಟೇಬಲ್ ಟ್ರಸ್ಟ್‌ನ ದಿನೇಶ್ ಹೆಗ್ಡೆ ಮೊಳಹಳ್ಳಿ, ಡಾ. ಕೃಷ್ಣ ಕಾಂಚನ್, ಶಂಕರ್ ಬಂಗೇರ, ಜಯಂತ ಅಮೀನ್, ರವೀಶ್ ಕುಂದರ್, ರವೀಂದ್ರ ಪೂಜಾರಿ, ಸತೀಶ್ ತಿಂಗಳಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೋಟ ಸುರೇಶ್ ಬಂಗೇರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊರಗ ಪೂಜಾರಿ, ಮೈತ್ರಿ ಯುವ ಮಂಡಲದ ಅಧ್ಯಕ್ಷ ರಮೇಶ್ ತಿಂಗಳಾಯ ಹಾಗೂ ರಾಘವೇಂದ್ರ ಕರ್ಕೇರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಂಕರ್ ದಾಸ್ ಮಲ್ಪೆ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು



