• May 26, 2026
  • Last Update May 26, 2026 5:06 pm
  • Brahmavara

ತಾಂತ್ರಿಕ ತರಬೇತಿಯಿಂದ ಯುವಕರಿಗೆ ಉದ್ಯೋಗಾವಕಾಶ : ಡಾ. ಜಿ. ರಾಮಕೃಷ್ಣ ಆಚಾರ್

ತಾಂತ್ರಿಕ ತರಬೇತಿಯಿಂದ ಯುವಕರಿಗೆ ಉದ್ಯೋಗಾವಕಾಶ : ಡಾ. ಜಿ. ರಾಮಕೃಷ್ಣ ಆಚಾರ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಕುಂದಾಪುರ, ಮೇ.೨೫: ಇಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ನಿಪುಣ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸಲಿದೆ. ನಮ್ಮ ಸಂಸ್ಥೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವವರಲ್ಲಿ ಶೇಕಡಾ ೫೦ ರಷ್ಟು ಮಂದಿ ಉತ್ತರ ಪ್ರದೇಶದವರಾಗಿದ್ದಾರೆ. ಸ್ಥಳೀಯ ಯುವಕರಿಗೆ ಹೆಚ್ಚು ಅವಕಾಶ ದೊರಕುವಂತೆ ಮಾಡಲು ಈ ತಾಂತ್ರಿಕ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ಎಸ್‌ಕೆ ಎಫ್ ಎಲಿಕ್ಸರ್ ಇಂಡಿಯಾ ಪ್ರೈಲಿ. ಚೇರ್ಮನ್ ಡಾ.ಜಿ.ರಾಮಕೃಷ್ಣ ಆಚಾರ್ ತಿಳಿಸಿದರು. ಅವರು ಯಡಾಡಿ ಮತ್ಯಾಡಿ ಸಮೀಪದ ಗುಡ್ಡೆಯಂಗಡಿಯಲ್ಲಿ ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ, ಮಹಿಳೆಯರಿಗೆ ಕೌಶಲ್ಯ ಆಧಾರಿತ ಫ್ಯಾಷನ್ ಡಿಸೈನ್ ಕೋರ್ಸ್ ಒಳಗೊಂಡ ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಬಳಿಕ ವಿದ್ಯಾರ್ಥಿಗಳಿಗೆ ಕೇವಲ ಒಂದು ವರ್ಷದ ತರಬೇತಿ ಮತ್ತು ಇಂಟರ್ನ್‌ಶಿಪ್ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಇತರ ಕಡೆಗಳಲ್ಲಿ ಇದೇ ತರಬೇತಿಗೆ ಮೂರು ವರ್ಷ ಬೇಕಾಗುತ್ತದೆ. ಆದರೆ ಇಲ್ಲಿ ಒಂದು ವರ್ಷದಲ್ಲೇ ಉದ್ಯೋಗ ಪಡೆಯುವ ಅವಕಾಶವಿದೆ ಎಂದರು.
ಸಂಸ್ಥೆಯಲ್ಲಿ ವೆಲ್ಡಿಂಗ್ ಮತ್ತು ಫಿಟ್ಟಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಸಿ ಮತ್ತು ಪ್ಲಂಬಿಂಗ್ ಸೇರಿದಂತೆ ವಿವಿಧ ತಾಂತ್ರಿಕ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಸಂಸ್ಥೆಯಲ್ಲಿಯೇ ಉದ್ಯೋಗ ಅವಕಾಶವೂ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.


ನಮ್ಮ ಸಂಸ್ಥೆಯಿಂದ ವಿದೇಶಗಳಿಗೆ ದಿನಕ್ಕೆ 1 ರಿಂದ 2 ಸಾವಿರ ಟನ್ ಅಕ್ಕಿ ಉತ್ಪಾದನೆ ಮಾಡುವ ಪ್ಲಾಂಟ್‌ಗಳನ್ನು ಪೂರೈಸಲಾಗುತ್ತಿದೆ. ಆದರೆ ಇಂತಹ ಪ್ಲಾಂಟ್‌ಗಳನ್ನು ನಿರ್ವಹಿಸಲು ತಾಂತ್ರಿಕ ಪರಿಣಿತಿ ಹೊಂದಿದ ಸಿಬ್ಬಂದಿ ಕೊರತೆಯಾಗಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಸುಮಾರು 3 ಲಕ್ಷ ರೂಪಾಯಿ ವರೆಗೆ ಸಂಬಳ ಪಡೆಯುವ ಅವಕಾಶಗಳಿವೆ ಎಂದು ಹೇಳಿದರು..
ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿಯೂ ಉತ್ತಮ ಅವಕಾಶಗಳಿವೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ವಿದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಿಂದ ಭಾರತೀಯ ತಾಂತ್ರಿಕ ಪರಿಣಿತರ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಯುವಕರು ತಾಂತ್ರಿಕ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಎಸ್‌ಕೆಎಫ್ ಇಂಡಸ್ಟ್ರಿಯಲ್ ತರಬೇತಿ ಸಂಸ್ಥೆಯಲ್ಲಿ ಉದ್ಯೋಗಾಧಾರಿತ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ ಎಂದು ಡಾ. ಜಿ. ರಾಮಕೃಷ್ಣ ಆಚಾರ್ ಹೇಳಿದರು.
ಸಂಸ್ಥೆಯನ್ನು ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಮೋಹನ್ ಆಳ್ವಾ ಉದ್ಘಾಟಿಸಿ ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಡಾ.ಜಿ.ರಾಮಕೃಷ್ಣ ಆಚಾರ್ಯರು ಹೊಸದಾಗಿ ಆರಂಭಿಸುತ್ತಿರುವ ತಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ನೀಡಿದ ನಂತರ ತಮ್ಮದೇ ಸಂಸ್ಥೆಗಳಲ್ಲಿ ಉದ್ಯೋಗ ನೀಡಲು ಹೊರಟಿದ್ದು ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಡಾ. ಆಳ್ವಾ ನುಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಚೇರಿ ಉದ್ಘಾಟಿಸಿದರು. ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಇಲೆಕ್ಟ್ರಿಕಲ್ಸ್ & ಇಲೆಕ್ಟ್ರಾನಿಕ್ಸ್ ವಿಭಾಗವನ್ನು, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ.ಸುಧಾಕರ ಶೆಟ್ಟಿ ಕಂಪ್ಯೂಟರ್ ವಿಭಾಗವನ್ನು, ಫ್ಯಾಶನ್ ಡಿಸೈನಿಂಗ್ ವಿಭಾಗವನ್ನು ಲೆಕ್ಕಪರಿಶೋಧಕ ಸಿಎ ಎಸ್.ಎಸ್.ನಾಯಕ್, ಫಿಟ್ಟಿಂಗ್ & ಪ್ಲಂಬಿಂಗ್ ವಿಭಾಗವನ್ನು ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಅರುಣ್ ಕುಮಾರ್ ಹೆಗ್ಡೆ, ತರಗತಿ ಕೊಠಡಿಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಚೇರ್ಮನ್ ಡಾ. ರಮೇಶ್ ಶೆಟ್ಟಿ ಹಾಗೂ ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಎಸ್ ಕೆ ಎಫ್ ಇಂಡಸ್ಟಿಯಲ್ ಟ್ರೈನಿಂಗ್ ಸೆಂಟರ್ ತಾಂತ್ರಿಕ ಸಲಹೆಗಾರ ಎ.ಬಾಲಕೃಷ್ಣ ಮಾತನಾಡಿ ನಾವು ಮೂರು ವರ್ಷದ ತರಬೇತಿಯನ್ನು ಕೇವಲ ಒಂದು ವರ್ಷಕ್ಕೆ ಕಡಿತಗೊಳಿಸಿದ್ದೇವೆ. ಅದರಲ್ಲೂ ೯ ತಿಂಗಳು ಮಾತ್ರ ಟ್ರೈನಿಂಗ್ ನೀಡಿ ನಂತರ ಅವರಿಗೆ ೩ ತಿಂಗಳು ಮೂಡಬಿದ್ರೆಯಲ್ಲಿ ಇಂಟರ್ನಶಿಪ್ ನೀಡಲಾಗುವುದು. ನಂತರ ವಿದೇಶಗಳಿಗೂ ಕಳಿಸಲು ಸಹಕಾರ ನೀಡಲಾಗುವುದು ಎಂದರು.
ಫ್ಯಾಶನ್ ಡಿಸೈನ್ ತರಬೇತಿ ಬಗ್ಗೆ ಶ್ರೀಮತಿ ವಿದ್ಯಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಚಾರಿಟೆಬಲ್ ಟ್ರಸ್ಟ್ ಗೌರವ ಟ್ರಸ್ಟಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಮತ್ತು ಫ್ಯಾಶನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಶ್ರೀವಿದ್ಯಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿಲಾಯಿತು.
ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಜ್ವಲ್ ಆರ್. ಆಚಾರ್, ತೇಜಸ್ ಆರ್. ಆಚಾರ್ ಹಾಗೂ ರಕ್ಷಿತ್ ಆರ್. ಆಚಾರ್ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿಕೊಂಡರು.
ಸುಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದ್ದು ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪುರೋಹಿತ್ ದಾಮೋದರ ಆಚಾರ್ಯರು ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page