ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎಪ್ರಿಲ್ 20:
ಪರಶುರಾಮ ಸೃಷ್ಟಿಯಲ್ಲಿ ದೈವರಾಧನೆ ಹಾಗೂ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು, ದೈವಸ್ಥಾನ ಮತ್ತು ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳು, ಬ್ರಹ್ಮಕಲಶದಂತಹ ಕಾರ್ಯಕ್ರಮಗಳು ಯುವಜನತೆಯಲ್ಲಿ ಧಾರ್ಮಿಕ ಭಾವನೆಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅಭಿಪ್ರಾಯಪಟ್ಟರು.

ಅವರು ಪರಾರಿ ಬೊಬ್ಬರ್ಯ ದೈವಸ್ಥಾನದ ಪುನಃ ಪ್ರತಿಷ್ಠಾಪನಾ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಬ್ಬರ್ಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೊಳಲಗಿರಿ ಗುರುರಾಜ್ ಭಟ್ ವಹಿಸಿದ್ದರು.
ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಚೇರ್ಮನ್ ಮತ್ತು ಆಡಳಿತ ನಿರ್ದೇಶಕ ಪ್ರಕಾಶ್‌ಚಂದ್ರ ಶೆಟ್ಟಿ ಮಾತನಾಡಿ, ಬೊಬ್ಬರ್ಯ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮದಿಂದ ಈ ಭಾಗದಲ್ಲಿ ಧಾರ್ಮಿಕ ಜಾಗೃತಿ ಹೆಚ್ಚುವಂತಾಗಿದೆ ಎಂದು ಹೇಳಿದರು.

ಬಿಲ್ಲವ ಸಮಾಜದ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಮಾತನಾಡಿ, ಮಾನವೀಯತೆ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಿರಿಯರು ಯುವಜನತೆಗೆ ಜೀವನ ಮೌಲ್ಯಗಳು ಮತ್ತು ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಹೇಳಿದರು.

ಉದಯವಾಣಿಯ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಮಟಪಾಡಿ ಕುಮಾರಸ್ವಾಮಿ ಮಾತನಾಡಿ, “ನಮಗೆ ಹೊರಗಿನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯ ಅಂತಸ್ತು ಹೆಚ್ಚಾದಂತೆ ಒಳಗಿನ ಮೌಲ್ಯ ಕಡಿಮೆಯಾಗುತ್ತಿದೆ. ಧಾರ್ಮಿಕ ನಂಬಿಕೆ ಮತ್ತು ಚಿಂತನೆಗಳು ಅಂತಃಸತ್ವವನ್ನು ಹೆಚ್ಚಿಸಲು ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಿ.ಎಂ. ಎಲೆಕ್ಟ್ರಿಕಲ್ಸ್ ಮಾಲಿಕ ಮಾಧವ ಪಾಣ, ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಮೊಗವೀರ ಸಂಘಟನೆಯ ಉಪ್ಪೂರು ಘಟಕದ ಗೌರವಾಧ್ಯಕ್ಷ, ಕೆ.ಸಿ. ಅಮೀನ್, ಮೌನ ಇನ್ಫ್ರಾ ಮತ್ತು ಡೆವಲಪರ‍್ಸ್ ಮಾಲಕ ನವೀನ್ ಪೆರ್ಡೂರು, ಜಿ.ಕೆ. ಎಲೆಕ್ಟ್ರಿಕಲ್‌ನ ವಿಕ್ರಾಂತ್ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ, ಉದ್ಯಮಿ ಆತ್ಮರಾಮ ಪಾಟೀಲ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಮತ್ಸೋದ್ಯಮಿ ಹರೀಶ್ ಪೂಜಾರಿ, ಸುರೇಶ್ ಬಿ. ಶೆಟ್ಟಿ, ಜಯ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅರ್ಚಕ ಗುರುರಾಜ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ದೈವಸ್ಥಾನ, ದೇವಸ್ಥಾನ ಮತ್ತು ಮನೆಗೊಂದು ತುಳಸಿಕಟ್ಟೆ ನಮ್ಮ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು. ಪರಾರಿಯಲ್ಲಿ ೪೦೦-೫೦೦ ವರ್ಷಗಳಿಂದ ಬೊಬ್ಬರ್ಯನ ಪೂಜೆ ನಡೆಯುತ್ತಿದ್ದು, ಭಕ್ತರ ಸಹಕಾರದಿಂದ ದೈವಸ್ಥಾನದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಜೀರ್ಣೋದ್ಧಾರಕ್ಕೆ ದುಡಿದ ಕಾರ್ಯಕರ್ತರು, ದಾನಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶಿಕ್ಷಕ ಪ್ರಶಾಂತ್ ಶೆಟ್ಟಿ ನಿರೂಪಿಸಿದ್ದು, ಲಕ್ಷ್ಮೀಶ್ ಭಟ್ ವಂದಿಸಿದರು.



