udupimitra.in
  • July 21, 2026
  • Last Update July 21, 2026 5:51 pm
  • Brahmavara

ಬಾರಕೂರಿನಲ್ಲಿ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗೆ ಆರೋಗ್ಯ ಸಚಿವರ ಭೇಟಿ

ಬಾರಕೂರಿನಲ್ಲಿ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗೆ ಆರೋಗ್ಯ ಸಚಿವರ ಭೇಟಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಜು.೨೧ ಬಾರ್ಕೂರಿನಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಚರ್ಚ್, ಮಸೀದಿ, ದೇಗುಲಗಳ ನಿರ್ಮಾಣವಾಗಿದೆ ಹಾಗೂ ಇಲ್ಲಿನ ಜನರು ಸೌಹಾರ್ದವಾಗಿ
ಬದುಕಿದ್ದಾರೆ. ಇಂದಿಗೂ ಬಾರ್ಕೂರು ಸೌಹಾರ್ದತೆಗೆ ಮಾದರಿಯಾಗಿದೆ. ಬಾರ್ಕೂರು ಅನೇಕ ರಾಜರ ಆಡಳಿತ ಹಾಗೂ ಕಾಲಘಟ್ಟಗಳನ್ನು ಕಂಡಿದೆ. ಇಲ್ಲಿನ ಸೌಹಾರ್ದ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳು ಅಚಲವಾಗಿ ಉಳಿದಿರುವುದು ದೇಶಕ್ಕೆ ಮಾದರಿಯಾಗಿದೆ. ಕರ್ನಾಟಕದ ಅತ್ಯಂತ ಪುರಾತನ ಜುಮ್ಮಾ ಮಸೀದಿಗಳಲ್ಲಿ ಒಂದಾದ ಮಾಲಿಕ್ ದಿನಾರ್ ಮಸೀದಿ, ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಐತಿಹಾಸಿಕ ಚರ್ಚ್ ಇಲ್ಲಿರುವುದು ಭಾರತದ ಬಹುಸಂಸ್ಕೃತಿಯ ಪರಂಪರೆಗೆ ಸಾಕ್ಷಿಯಾಗಿದೆ. ಬಾರ್ಕೂರು ಕೇವಲ ಐತಿಹಾಸಿಕ ಪಟ್ಟಣವಲ್ಲ ಪ್ರೀತಿ, ವಿಶ್ವಾಸ, ಸಹೋದರತ್ವ ಮತ್ತು ಸಹಬಾಳ್ವೆಯನ್ನು ಪೀಳಿಗೆಯಿಂದ ಪೀಳಿಗೆಗೆ ಉಳಿಸಿಕೊಂಡು ಬಂದ ಪುಣ್ಯಭೂಮಿಯಾಗಿದೆ.

ಯುವಜನತೆ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು. ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆ ಯುವಪೀಳಿಗೆಯದ್ದಾಗಿದೆ ಎಂದು ಕರ್ನಾಟಕ ಸರಕಾರದ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಜು.೨೧ರಂದು ಬಾರ್ಕೂರಿನಲ್ಲಿ ಪಂಚಲಿಂಗೇಶ್ವರ ದೇವಸ್ಥಾನ, ಸೆಂಟ್ ಪೀಟರ್ ಚರ್ಚ್, ಮಾಲೀಕ್ ದಿನಾರ್ ಮಸೀದಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಇತಿಹಾಸ ಪ್ರಸಿದ್ಧವಾದ ಬಾರಕೂರಿನ ಗತವೈಭವವನ್ನು ಪ್ರಪಂಚಕ್ಕೆ ತೆರದಿಡುವ ನಿಟ್ಟಿನಲ್ಲಿ ಕೆಲಸಗಳಾಗಬೇಕಿದೆ. ಸರಕಾರಕ್ಕೆ ಬಾರ್ಕೂರು ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡುತ್ತೇನೆ. ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.


ಮಾಲೀಕ್ ದಿನಾರ್ ಜುಮ್ಮಾ ಮಸೀದಿಗೆ ಭೇಟಿ :
ಆರಂಭದಲ್ಲಿ ಬಾರ್ಕೂರಿನ ಮಾಲೀಕ್ ದಿನಾರ್ ಜುಮ್ಮಾ ಮಸೀದಿಗೆ ಭೇಟಿ ನೀಡಿದ ಸಚಿವರನ್ನು ಮಾಲಿಕ್ ದಿನಾರ್ ಮಸೀದಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ ಕರಾವಳಿ ಭಾಗಕ್ಕೆ ಸೇರಿದ ಸಚಿವರು ಈಗಾಗಲೆ ೨-೩ ಬಾರಿ ಕರಾವಳಿ ಭಾಗದಲ್ಲಿ ಸಂಚಾರ ಮಾಡಿ ಈ ಭಾಗದ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸುತ್ತಿದ್ದಾರೆ. ಸುಗ್ಗಿ ಸುಧಾಕರ ಶೆಟ್ಟರ ಕಲ್ಪನೆಯಂತೆ ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಸೂಕ್ತ ಪರಿಶೀಲನೆ ಮಾಡಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರು ಹಾಗೂ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಸಭೆ ನಡೆಸಿ ಈ ಭಾಗದ ಅಭಿವೃದ್ಧಿಗೆ ನೀಲನಕ್ಷೆಯನ್ನು ತಯಾರಿಸಲಿದ್ದೇವೆ ಎಂದು ನುಡಿದರು.


ಈ ಸಂದರ್ಭ ವೇದಿಕೆಯಲ್ಲಿ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುಬಾರಕ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರ್, ಸ್ಥಳೀಯ ಮುಖಂಡ ಶಾಂತಾರಾಮ ಶೆಟ್ಟಿ ಬಾರ್ಕೂರು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಬ್ರಹ್ಮಾವರತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬ್ರಹ್ಮಾವರ ಬ್ಲಾಕ್
ಕಾಂಗ್ರೇಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ದಿನೇಶ್ ಹೆಗ್ಡೆ ಮೊಳಹಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಬಾರ್ಕೂರಿನ ಅಭಿವೃದ್ಧಿಯ ಬಗ್ಗೆ ಮಸೀದಿಯ ವತಿಯಿಂದ ಮನವಿ ಸಲ್ಲಿಸಲಾಯಿತು.


ಸೈಂಟ್ ಪೀಟರ್ಸ್ ಚರ್ಚ್‌ಗೆ ಭೇಟಿ :
ಅನಂತರ ಬಾರಕೂರು ಸೈಂಟ್ ಪೀಟರ್ಸ್ ಚರ್ಚ್‌ಗೆ ಭೇಟಿ ನೀಡಿದ್ದು ಚರ್ಚ್‌ನ ಧರ್ಮಗುರುಗಳಾದ ರೆನಾಲ್ಡ್ ಮಿರಾಂಡ ಅವರು ಸಚಿವರನ್ನು ಸ್ವಾಗತಿಸಿದರು. ಈ ಸಂದರ್ಭ ಚರ್ಚ್‌ನಲ್ಲಿ ಸಚಿವರ ಒಳಿತಿನ ಕೆಲಸದಲ್ಲಿ ಏಸುವಿನ ಅನುಗ್ರಹ ಸದಾ ಇರಲಿ ಎಂದು ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ಚರ್ಚ್‌ನ ಆಡಳಿತ ಮಂಡಳಿ ಸದಸ್ಯರೊಂದಿಗೆ ಸ್ಥಳೀಯ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಮನವಿ ಸಲ್ಲಿಸಿದರು.


ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ :
ತದ ನಂತರ ಸಚಿವರು ಜೀರ್ಣೋದ್ಧಾರಗೊಳ್ಳಲಿರುವ ಬಾರ್ಕೂರು ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದರು. ಈ ಸಂದರ್ಭ ಸಚಿವರನ್ನು ವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಸಚಿವರನ್ನು ಸ್ವಾಗತಿಸಿಕೊಂಡರು. ಅನಂತರ ಪಂಚಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇಗುಲದ ಅಭಿವೃದ್ಧಿಗೆ ಹಾಗೂ ಬಾರ್ಕೂರಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಬಾರಕೂರು ಶಾಂತಾರಾಮ ಶೆಟ್ಟಿ, ಗ್ಯಾರಂಟಿ ಸಮಿತಿಯ ಸುನಿತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ದೇಗುಲ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಪುರೋಹಿತ್ ದಾಮೋದರ ಶರ್ಮಾ, ರಮೇಶ್ ಭಟ್ ನಾಯರ್‌ಬೆಟ್ಟು, ಮೊದಲಾದವರಿದ್ದರು.


ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಬಾರ್ಕೂರು ಮುಖ್ಯರಸ್ತೆ ಅಭಿವೃದ್ಧಿಯೊದಿಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯೊಂದಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.
ಬ್ರಹ್ಮಾವರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಸರ್ಕಾರದ ಗಮನ ಸೆಳೆದು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page