ಕುಂದಾಪುರ, ಮೇ ೧೧: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆ ಸಮೀಪದ ಗುಡ್ಡೆಯಂಗಡಿಯಲ್ಲಿ ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮೇ ೨೫ರಂದು ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕರಾದ ಮೂಡಬಿದ್ರಿಯ ಎಸ್ಎಫ್ ಎಲಿಕ್ಸರ್ ಇಂಡಿಯಾ ಪ್ರೈ ಲಿ. ಮಾಲಕ ಡಾ. ಜಿ. ರಾಮಕೃಷ್ಣ ಆಚಾರ್ ತಿಳಿಸಿದರು. ಅವರು ಗುಡ್ಡೆಯಂಗಡಿಯ ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಗುಡ್ಡೆಯಂಗಡಿ ನನ್ನ ಹುಟ್ಟೂರು. ಇಲ್ಲಿಂದ ಹೊರಟು ಮೂಡಬಿದ್ರಿಯಲ್ಲಿ ಉದ್ಯಮ ಆರಂಭಿಸಿ ಇಂದು ೨೩ ದೇಶಗಳಲ್ಲಿ ವ್ಯವಹಾರ ಮಾಡುತ್ತಿದ್ದೇವೆ. ಎಐ ಮತ್ತು ಅಟೋಮೇಶನ್ ಯುಗದಲ್ಲಿ ಕೈಗಾರಿಕೆಗಳು ೨೦೩೫ರ ಹೊತ್ತಿಗೆ ಪದವೀಧರ ವ್ಯಕ್ತಿಗಳ ಅವಶ್ಯಕತೆ ಕಡಿಮೆಯಾಗುತ್ತದೆ. ತಾಂತ್ರಿಕ ಕೌಶಲ್ಯ ಹೊಂದಿರುವ ವ್ಯಕ್ತಿಗಳ ಅವಶ್ಯಕತೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ನಾವು ಈ ಊರಿನಲ್ಲಿ ಸ್ಕಿಲ್ ಡೆವಲಪ್ಮೆಂಟ್ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಇದರ ಸೌಲಭ್ಯವನ್ನು ಈ ಭಾಗದ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಇಲ್ಲಿ ಕಲಿಯುವವರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು.

ಪ್ರತಿ ಬ್ಯಾಚ್ಗೆ 20 ವಿದ್ಯಾರ್ಥಿಗಳ ಮಿತಿ ಇರಿಸಿಕೊಳ್ಳಲಾಗಿದೆ. ಅನುಭವಿ ಶಿಕ್ಷಕರಿಂದ ತರಬೇತಿ ನೀಡಲಿದ್ದೇವೆ. ಕೈಗಾರಿಕಾ ಅನುಭವ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ SKF Elixer India Pvt. Ltd., ಮೂಡಬಿದ್ರಿಯಲ್ಲಿ3 ತಿಂಗಳ ಇಂಟರ್ನ್ ಶಿಪ್ ಅವಕಾಶ ನೀಡಲಾಗುವುದು. ಜೊತೆಗೆ ಉತ್ಪಾದನಾ ವಿಧಾನ, ಗುಣಮಟ್ಟ ಪರಿಶೀಲನೆ ಮತ್ತು ಪ್ರಾಜೆಕ್ಟ್ ಅನುಭವ ಉದ್ಯೋಗಕ್ಕೆ ಸಹಾಯ ಮತ್ತು ಮಾರ್ಗದರ್ಶನ ಮಾಡಲಾಗುವುದು. ವಿದೇಶಿ ಉದ್ಯೋಗಾವಕಾಶಗಳ ಮಾಹಿತಿ ನೀಡಲಾಗುವುದು ಎಂದರು.
ಸಂಸ್ಥೆಯ ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣರವರು ಮಾತನಾಡಿ ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳನ್ನು ಮನಗಂಡು ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ಡಾ.ರಾಮಕೃಷ್ಣ ಆಚಾರ್ ರವರು ಗುರಿ ಇರಿಸಿಕೊಂಡಿದ್ದಾರೆ. ಕೌಶಲ್ಯಾಧಾರಿತ ತರಬೇತಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಉದ್ಯೋಗಾಧಾರಿತ ಪ್ರಮಾಣಪತ್ರ ಕೋರ್ಸ್ಗಳನ್ನು ಆರಂಭಿಸಲಾಗಿದೆ.

ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ನಲ್ಲಿ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ & ವೆಲ್ಡಿಂಗ್, ಮೆಕ್ಯಾನಿಕ್ – ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಗ್ ಸೇರಿದಂತೆ ಹಲವು ತಾಂತ್ರಿಕ ಕೋರ್ಸ್ಗಳನ್ನು ನಡೆಸಲಾಗುತ್ತದೆ. SSಐಅ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಪಾಸ್ ಅಥವಾ ಫೇಲ್ ಎನ್ನುವ ಬೇಧವಿಲ್ಲ . ಮಹಿಳೆಯರಿಗಾಗಿ ವಿಶೇಷವಾಗಿ ಫ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗುವುದು. ಇಲ್ಲಿ ತರಬೇತಿ ಪಡೆದ ಮಹಿಳೆಯರು ಸ್ಕಿಲ್ಡ್ ಟೈಲರಿಂಗ್ & ಫ್ಯಾಶನ್ ಡಿಸೈನಿಂಗ್ ಮಾಡಬಹುದು. ಉಡುಪು ತಯಾರಿಕೆ ಮತ್ತು ಪ್ಯಾಟರ್ನ್ ಮೇಕಿಂಗ್ ಮಾಡಬಹುದು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮಾತನಾಡಿ ಡಾ.ರಾಮಕೃಷ್ಣ ಆಚಾರ್ರವರು ಗುಡ್ಡೆಯಂಗಡಿಯಲ್ಲಿ ಹುಟ್ಟಿದವರು. ಕೋಟ್ಯಾಂತರ ರೂ ವ್ಯಯಿಸಿ ಒಳ್ಳೆಯ ಉದ್ದೇಶದಲ್ಲಿ ಇಲ್ಲಿ ಎಸ್ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭಿಸುತ್ತಿದ್ದಾರೆ. ಇಂಡಸ್ಟ್ರಿಯಲ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಅವರು ಜಾಗತಿಕ ಮಟ್ಟದ ಉದ್ಯಮಗಳನ್ನು ಅವರು ಸ್ಥಾಪಿಸಿದ್ದಾರೆ. ಸಂಪೂರ್ಣ ಕೌಶಲ್ಯಾಧಾರಿತ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕೆಂದು ನುಡಿದರು.



