ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.25: ಪ್ರತಿಯೊಂದು ಮನೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸದ ವಿಲೇವಾರಿ ಸ್ಥಳಿಯ ಪಂಚಾಯತ್‌ಗಳಿಗೆ ಬಹುದೊಡ್ಡ ಸವಾಲು ಎಂಬಂತಾಗಿದೆ. ಸಾರ್ವಜನಿಕರು ಮನೆಯಲ್ಲಿ ಕಸ ಇಟ್ಟುಕೊಳ್ಳಲಾಗದೆ ಕಸವನ್ನು ತಂದು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಸರಿಯಾದ ರೀತಿಯಿಂದ ವಿಲೇವಾರಿಯಾಗದೆ ಇರುವುದರಿಂದ ಹಸಿ ಕಸದಿಂದ ವಾಸನೆ ಹರಡುತ್ತದೆ. ಹಾರಾಡಿ, ಚಾಂತಾರು, ಐರೋಡಿ ಹಾಗೂ ಹಾವಂಜೆ ಪಂಚಾಯತ್ ವ್ಯಾಪ್ತಿಯ ಕಸವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಸಾಸ್ತಾನದ ಗುಜರಿ ವ್ಯಾಪಾರಸ್ಥರಾದ ರಜಾಕ್ ಹಾಗೂ ಅಲ್ತಾಫ್ ಎಂಬ ಯುವಕರಿಬ್ಬರು ನಿರ್ವಹಿಸುತ್ತಿದ್ದಾರೆ. ಆರೇಳು ತಿಂಗಳುಗಳಿಂದ ಅತ್ಯಂತ ಶ್ರದ್ಧೆಯಿಂದ ೭ ಎ ಎಸ್.ಗಾಡಿಗಳನ್ನು ಹಾಕಿಕೊಂಡು ತಮ್ಮ 3೦ ಮಂದಿ ಸಿಬ್ಬಂದಿಗಳೊಂದಿಗೆ ಪರಿಸರದ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ಕಸವನ್ನು ಉರಿ ಬಿಸಿಲಲ್ಲಿ ಸಂಗ್ರಹಿಸಿದ್ದಾರೆ. ಅವರು ಹಾಗೂ ಅವರ ಸಿಬ್ಬಂದಿಗಳ ಕೆಲಸ ನಿಜಕ್ಕೂ ಶ್ಲಾಘನೀಯವಾದುದು. ಅವರಿಗೆ ಸ್ಥಳಿಯಾಡಳಿತ, ಜಿಲ್ಲಾಡಳಿತ ಹಾಗೂ ನಮ್ಮ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕಾಗಿದೆ. ಕಸ ನಿರ್ವಹಣೆಗೆ ಅಲ್ತಾಫ್ ಹಾಗೂ ರಜಾಕ್ ಸಾರ್ವಜನಿಕರ ಸಹಕಾರ ಕೋರಿದ್ದು ಈ ಕುರಿತು ಒಂದು ವರದಿ ಇಲ್ಲಿದೆ.

ಚಾಂತಾರು, ಐರೋಡಿ, ಹಾರಾಡಿ, ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದ ಕಸವನ್ನು ರಜಾಕ್ ಹಾಗೂ ಅಲ್ತಾಫ್ ಅವರ ಕಸವಿಲೇವಾರಿ ಮಾಡುವ ಸಿಬ್ಬಂದಿಗಳು ಎ.೧೮ರಂದು ಸ್ವಚ್ಚಗೊಳಿಸಿದರು. ಕಳೆದ ಆರೇಳು ತಿಂಗಳುಗಳಿಂದ ರಜಾಕ್ ಹಾಗೂ ಅಲ್ತಾಫ್ ಅವರು ೭ ಎ.ಎಸ್.ಗಾಡಿಗಳನ್ನು ಕಸ ಸಂಗ್ರಹಕ್ಕೆ ಕಳುಹಿಸಿ ಆಯಾಯ ಪಂಚಾಯತ್ ವ್ಯಾಪ್ತಿಯ ಎಸ್.ಎಲ್.ಆರ್.ಎಂ. ಘಟಕಗಳಿಗೆ ಸಾಗಿಸಿ ಅಲ್ಲಿ ಒಣಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸುತ್ತಿದ್ದಾರೆ. ಇವರ ತಂಡದ ಸ್ವಚ್ಚಗೊಳಿಸುವ ಈ ಕೆಲಸವನ್ನು ಆಯಾಯ ಪಂಚಾಯತ್ ವ್ಯಾಪ್ತಿಯ ಜನರು ಬೆಂಬಲಿಸಬೇಕಾಗಿದೆ. ಊರಿನ ಸ್ವಚ್ಚತೆಯ ಜವಾಬ್ದಾರಿ ಎಲ್ಲರದ್ದು ಎಂಬುದನ್ನು ಯಾರೂ ಮರೆಯಬಾರದು.
ಒಣ ಕಸವನ್ನು ಸಂಗ್ರಹಿಸುವ ಅವರು ಅದನ್ನು ಸುಮಾರು 27ಕ್ಕೂ ಹೆಚ್ಚು ವಿಧದಲ್ಲಿ ಬೇರ್ಪಡಿಸುತ್ತಿದ್ದಾರೆ. ಪ್ಲಾಸ್ಟಿಕ್, ಬಾಟಲಿಗಳು, ಎಣ್ಣೆ ಪ್ಯಾಕೆಟ್‌ಗಳು, ಔಷಧದ ಬಾಟಲಿಗಳು, ಕಬ್ಬಿಣದ ವಸ್ತುಗಳು, ಪೇಪರ್‌ಗಳು, ಟಯರ್, ಫೈಬರ್ ವಸ್ತುಗಳು, ಸ್ಟೀಲ್ ಐಟಂಗಳು, ಜ್ಯೂಸ್‌ಕಪ್‌ಗಳು, ನೀರಿನ ಫೈಪ್‌ಗಳು, ಹೀಗೆ ೨೭ ವಿಭಾಗದಲ್ಲಿ ವಿಭಾಗಿಸಿ ಚೀಲಗಳಿಗೆ ತುಂಬಿಸಿ ಸಾಗಿಸುತ್ತಿದ್ದಾರೆ.
ಹಸಿಕಸದಿಂದ ಗೊಬ್ಬರ ಉತ್ಪಾದನೆ :
ಇಲ್ಲಿ ಸಂಗ್ರಹಿಸುವ ಹಸಿ ಕಸವನ್ನು ಸಂಗ್ರಹಿಸಿ ಗೊಬ್ಬರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ೧೫ ಅಡಿಯ ಪ್ರತ್ಯೇಕ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು ಈ ಟ್ಯಾಂಕ್‌ಗಳಿಗೆ ಹಸಿ ಕಸವನ್ನು ಪ್ರತಿ ದಿನ ಹಾಕಲಾಗುತ್ತಿದೆ. ಬ್ಲ್ಯಾಕ್ ಸೋಲ್ಜರ್ ಪ್ಲೈ ಲಾರ್ವಗಳನ್ನು ಈ ಟ್ಯಾಂಕ್‌ಗಳಿಗೆ ಹಾಕಿ ಈ ಹುಳಗಳು ಹಸಿ ಕಸ ತಿಂದು ಗೊಬ್ಬರವನ್ನು ಉತ್ಪಾದಿಸುತ್ತಿವೆ. ಈ ಲಾರ್ವಗಳು ಚಿಟ್ಟೆಯಾಗುವ ಹಂತಕ್ಕೆ ಬಂದಾಗ ಅದನ್ನು ತೆಗೆದು ಬೇರೆ ಟ್ಯಾಂಕ್‌ಗಳಿಗೆ ವರ್ಗಾಯಿಸುತ್ತಾರೆ. ಈ ಟ್ಯಾಂಕ್‌ಗಳಿಗೆ ಸುತ್ತಲೂ ನೆಟ್ ಹಾಕಿ, ಹಾರಿ ಹೋಗದಂತೆ ತಡೆದು ಅದೇ ಚಿಟ್ಟೆಗಳಿಂದ ಮರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಮರಿಗಳನ್ನು ಪುನಃ ಗೊಬ್ಬರ ಮಾಡಲು ಬಳಸಿಕೊಳ್ಳುತ್ತಿದ್ದು ಎಷ್ಟೇ ಹಸಿ ಕಸ ಇದ್ದರೂ ಈ ಹುಳಗಳು ತಿಂದು ಗೊಬ್ಬರ ಉತ್ಪಾದಿಸುತ್ತಿವೆ. ಈ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಹಸಿಕಸದಿಂದ ಗೊಬ್ಬರ ಉತ್ಪಾದಿಸಲಾಗುತ್ತಿದೆ.
ಕಸ ಎಸೆಯಬೇಡಿ – ರಜಾಕ್
ನಾವು ಕಸ ಸಂಗ್ರಹಿಸಲು ೭ ಗಾಡಿಗಳನ್ನು ಹಾಕಿದ್ದು ಮನೆ ಮನೆಗೆ ಈ ವಾಹನಗಳನ್ನು ಕಳುಹಿಸಿ ಹಸಿ ಕಸ ಹಾಗೂ ಒಣ ಕಸವನ್ನು ಸಂಗ್ರಹಿಸುತ್ತಿದ್ದೇವೆ. ಈ ಕಸವನ್ನು ಎಸ್.ಎಲ್.ಆರ್.ಎಮ್. ಘಟಕಕ್ಕೆ ಸಾಗಿಸಿ ವ್ಯವಸ್ಥಿತವಾಗಿ ವಿಂಗಡಿಸಿ ವಿಲೇವಾರಿ ಮಾಡುತ್ತಿದ್ದೇವೆ. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು.೬೦- ೭೦ ರೂ. ಆಸೆಗೆ ದಯವಿಟ್ಟು ಎಲ್ಲೆಂದರಲ್ಲಿ ಕಸವನ್ನು ಎಸೆದು ಪರಿಸರ ಹಾಳು ಮಾಡಬೇಡಿ. ಎಸ್.ಎಲ್.ಆರ್.ಎಂ. ಘಟಕಕ್ಕೆ ತಂದು ಕೊಟ್ಟರೂ ನಾವು ಅದನ್ನು ತೆಗೆದುಕೊಳ್ಳುತ್ತೇವೆ. ಗ್ರಾಮ ಪಂಚಾಯತ್‌ನ ಅಧಿಕಾರಿಗಳು, ಜನಪ್ರತಿನಿಧಿಗಳು ಕಸವನ್ನು ನಿಭಾಯಿಸಲು ನಮಗೆ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸರಕಾರ ನಮಗೆ ಬೇಕಾದ ಮೆಶಿನರಿಗಳನ್ನು, ಸೂಕ್ತ ಕಟ್ಟಡ, ಅನುದಾನ ಒದಗಿಸಿದರೆ ಖಂಡಿತವಾಗಿಯೂ ನಾವು ಕಸದ ಸಮಸ್ಯೆಯನ್ನು ಸಂಪೂರ್ಣವಾಗಿ ನಿಭಾಯಿಸುತ್ತೇವೆ ಎಂದು ಗುಜರಿ ವ್ಯಾಪಾರಸ್ಥರಾದ ರಜಾಕ್ ಗುಂಡ್ಮಿ ನುಡಿಯುತ್ತಾರೆ.
ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಇರಲಿ – ಅಲ್ತಾಫ್
ಹಾರಾಡಿ, ಚಾಂತಾರು, ಹಾವಂಜೆ, ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಗಳ ಎಲ್ಲಾ ಗ್ರಾಮ ಹಾಗೂ ವಾರ್ಡ್‌ಗಳಲ್ಲಿರುವ ಕಸವನ್ನು ನಾವು ಸಂಗ್ರಹಿಸುತ್ತಿದ್ದೇವೆ. ಎಸ್.ಎಲ್.ಆರ್.ಎಮ್ ಘಟಕಕ್ಕೆ ನಮ್ಮ ವಾಹನಗಳ ಮೂಲಕ ಸಾಗಿಸಿ ಅತ್ಯಂತ ವ್ಯವಸ್ಥಿತವಾಗಿ ವಿಂಗಡಿಸಿ ಸ್ವಚ್ಚತೆಯನ್ನು ಕಾಪಾಡುತ್ತಿದ್ದೇವೆ. ಸುಮಾರು ೩೦ ಮಂದಿ ಸಿಬ್ಬಂದಿಗಳ ಜೊತೆ ಸೇರಿ ಪ್ರತಿ ಮನೆಯ ಕಸ ಸಂಗ್ರಹಿಸುತ್ತಿದ್ದೇವೆ. ವಿಶೇಷವೆಂದರೆ ರಸ್ತೆ ಬದಿಯಲ್ಲಿ ಎಸೆದುಹೋಗಿರುವ ಕಸವನ್ನು ಗ್ರಾಮ ಪಂಚಾಯತ್ ಆಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಬೆಂಬಲದೊಂದಿಗೆ ಊರಿ ಬಿಸಿಲಿನಲ್ಲಿ ಒಟ್ಟುಗೂಡಿಸಿ ಘಟಕಕ್ಕೆ ಸಾಗಿಸಿ ಸ್ವಚ್ಚಗೊಳಿಸಿದ್ದೇವೆ. ದಯವಿಟ್ಟು ಸಾರ್ವಜನಿಕರು ಮತ್ತೆ ಈ ಸ್ಥಳದಲ್ಲಿ ಕಸ ಹಾಕಬೇಡಿ.
ಕಸ ಹಾಗೂ ಎಸ್‌ಎಲ್‌ಆರ್ ಎಂ ಘಟಕ ಎಂದರೆ ವಾಸನೆ, ಗಲೀಜು ಎಂಬರ್ಥದಲ್ಲಿ ದೂರ ಸರಿಯುವ ಅಗತ್ಯವಿಲ್ಲ. ಘಟಕಕ್ಕೆ ನೀವು ಬಂದು ನೋಡಿದರೆ ಇಲ್ಲಿನ ಸ್ವಚ್ಚತೆಯ ಅರಿವು ನಿಮಗಾಗಲಿದೆ. ನಾವು ಇಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸಿದ್ದೇವೆ. ಅತ್ಯಂತ ಸ್ವಚ್ಚವಾಗಿಡಲು ಪ್ರತಿ ದಿನ ಪ್ರಯತ್ನಿಸುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪೂರ್ಣ ಬೆಂಬಲ ನಮಗೆ ಬೇಕಾಗಿದೆ. ದಯವಿಟ್ಟು ಎಲ್ಲೆಂದರಲ್ಲಿ ಕಸ ಎಸೆಯಬೇಡಿ. ನಮ್ಮ ವಾಹನ ಬಂದಾಗ ಕಸವನ್ನು ಕೊಟ್ಟು ಸಹಕಾರ ನೀಡಿ. ಪರಿಸರ ಸ್ವಚ್ಚವಾಗಿಡಲು ನಮ್ಮೊಂದಿಗೆ ನೀವು ಕೂಡ ಕೈ ಜೋಡಿಸಬೇಕೆಂದು ಗುಜರಿ ವ್ಯಾಪಾರಸ್ಥರಾದ ಅಲ್ತಾಫ್ ಗುಂಡ್ಮಿ ವಿನಂತಿಸಿದ್ದಾರೆ.
ಅಲ್ತಾಫ್ ಹಾಗೂ ರಜಾಕ್‌ರಿಗೆ ಸಹಕಾರ ನೀಡಿ – ಕುಮಾರ್ ಸುವರ್ಣ ಬೈಕಾಡಿ
ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಿದಾಗ ಆರೇಳು ತಿಂಗಳ ಹಿಂದೆ ನಾನು ಗುಜರಿ ವ್ಯಾಪಾರಸ್ಥರಾದ ರಜಾಕ್ ಗುಂಡ್ಮಿ ಹಾಗೂ ಅಲ್ತಾಫ್ ಗುಂಡ್ಮಿ ಇವರನ್ನು ಸಂಪರ್ಕಿಸಿ ಕಸ ವಿಲೇವಾರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ವಿನಂತಿಸಿದೆ. ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡು ಅತ್ಯಂತ ಜವಾಬ್ದಾರಿಯಿಂದ ಕಸ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಹಾರಾಡಿ ಗ್ರಾಮ ಪಂಚಾಯತ್ ಮಾತ್ರವಲ್ಲದೆ, ಚಾಂತಾರು ಹಾವಂಜೆ, ಐರೋಡಿ ಗ್ರಾಮ ಪಂಚಾಯತ್‌ಗಳಲ್ಲೂ ತಮ್ಮ ಸಿಬ್ಬಂದಿಗಳೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಪರಿಸರ ಸ್ವಚ್ಚವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಹಾಗೂ ಪ್ರತಿಯೊಂದು ಮನೆಯವರು ಅಲ್ತಾಫ್ ಹಾಗೂ ರಜಾಕ್‌ರಿಗೆ ಬೆಂಬಲ ನೀಡಬೇಕು. ದಯವಿಟ್ಟು ನಿಗದಿಪಡಿಸಿದ ಶುಲ್ಕವನ್ನು ಕೊಟ್ಟು ಸಹಕರಿಸಿದಲ್ಲಿ ಆರ್ಥಿಕವಾಗಿಯೂ ನೀವು ಬೆಂಬಲ ನೀಡಿದಂತಾಗುತ್ತದೆ ಎಂದು ಹಾರಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಕುಮಾರ್ ಬೈಕಾಡಿ ನುಡಿದಿದ್ದಾರೆ.








