• April 28, 2026
  • Last Update April 28, 2026 6:02 am
  • Brahmavara

ಸುಜ್ಞಾನ ಎಜುಕೇಶನ್ ಟ್ರಸ್ಟ್ : ಬೇಸಗೆ ಶಿಬಿರ ಉದ್ಘಾಟನೆ

ಸುಜ್ಞಾನ ಎಜುಕೇಶನ್ ಟ್ರಸ್ಟ್ : ಬೇಸಗೆ ಶಿಬಿರ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.೨೭: ಸುಜ್ಞಾನ ಎಜುಕೇಶನ್ ಟ್ರಸ್ಟ್, ಸುಜ್ಞಾನ ಪಿಯು ಕಾಲೇಜ್ , ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ ಮತ್ಯಾಡಿ ಇಲ್ಲಿ ಬೇಸಗೆ ಶಿಬಿರ ಮಂಥನ ಉದ್ಘಾಟನಾ ಸಮಾರಂಭ ಏಪ್ರಿಲ್ 26ರಂದು ನಡೆಯಿತು.


ಸಮಾರಂಭವನ್ನು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಅವರು ಮಾತನಾಡಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಸದಾ ಜಾಗೃತರಾಗಿರಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತ ಕ್ಷೇತ್ರಕ್ಕೆ ಅವರನ್ನು ಮುಂದೆ ಸಾಗುವಂತೆ ಪ್ರೇರೇಪಿಸಬೇಕು . ಡ್ರಗ್ಸ್ ಹಾಗೂ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಮಕ್ಕಳು ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಕಲೆ, ಕ್ರೀಡೆಯಲ್ಲೂ ಸಾಧನೆ ಮಾಡಿದವರು ಸಮಾಜದಲ್ಲಿ ಅನೇಕರಿದ್ದಾರೆ. ಕಲೆ ಕ್ರೀಡೆಯಲ್ಲಿ ಆಸಕ್ತ ಮಕ್ಕಳನ್ನು ಅದೇ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೇರೇಪಿಸಬೇಕೆಂದು ನುಡಿದರು.
ಮುಖ್ಯ ಅತಿಥಿ ಚಿತ್ರನಟಿ ಶ್ರುತಿಯವರು ಮಾತನಾಡುತ್ತಾ ಡಾ.ರಾಜ್ ಓದಿದ್ದು ಕೇವಲ ೪ನೇ ತರಗತಿ. ಅವರ ಆಸಕ್ತ ಕ್ಷೇತ್ರ ನಟನೆಯಲ್ಲಿ ಅವರು ಬಹುದೊಡ್ಡ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ ೧೦ನೇ ತರಗತಿ ಫೇಲ್ ಆಗಿದ್ದರು. ಆದರೆ ಕ್ರಿಕೆಟ್‌ನಲ್ಲಿ ವಿಶ್ವ ಖ್ಯಾತಿಗಳಿಸಿದರು. ಮಕ್ಕಳು ವಿದ್ಯೆಯನ್ನು ಗೆಲ್ಲಬೇಕೇ ಹೊರತು ಅಂಕಗಳನ್ನಲ್ಲ. ಜೀವನವನ್ನು ಎದುರಿಸಲು ತಮ್ಮನ್ನು ತಾವು ಗೆಲ್ಲುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕು. ಸುಜ್ಞಾನ ಶಿಕ್ಷಣ ಸಂಸ್ಥೆ ಮಕ್ಕಳ ಪ್ರತಿಭೆ ಗುರುತಿಸಲು ಶಿಕ್ಷಣದ ಜೊತೆಯಲ್ಲಿ ಇಂತಹ ಸಮ್ಮರ್ ಕ್ಯಾಂಪ್ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ವಹಿಸಿದ್ದು ಅವರು ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಪೂರಕವಾಗಿ ಬೇಸಗೆ ಶಿಬಿರವನ್ನು ನಡೆಸುತ್ತಾ ಬಂದಿದ್ದೇವೆ. ಸಂಸ್ಥೆ ಆರಂಭದಿಂದಲೂ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದು ಇದಕ್ಕೆ ಸಹಕರಿಸುತ್ತಿರುವ ಶಿಕ್ಷಕ ವೃಂದ ಹಾಗೂ ಪೋಷಕರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಸಹಾಯಕ ನಿರ್ದೇಶಕ ಆನಂದ ಪಿ, ಅಂತರಾಷ್ಟ್ರೀಯ ಜಾದುಗಾರ ಕುದ್ರೋಳಿ ಗಣೇಶ, ಗುತ್ತಿಗೆದಾರ ಅರುಣ್ ಕುಮಾರ್ ಹೆಗ್ಡೆ, ನೃತ್ಯ ಸಂಯೋಜಕ ರವಿ ಮಾಸ್ಟರ್ ಭಾಗವಹಿಸಿದ್ದರು.


ವೇದಿಕೆಯಲ್ಲಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಪ್ರಾಂಶುಪಾಲ ರಂಜನ್ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಸಹಾಯಕ ನಿರ್ದೇಶಕ ಆನಂದ ಪಿ, ಹಾಗೂ ಖ್ಯಾತ ಚಿತ್ರನಟಿ ಶ್ರುತಿ ಅವರನ್ನು ಸನ್ಮಾನಿಸಲಾಯಿತು. ಇದೇ ದಂದರ್ಭ ಜಿಲ್ಲಾ ಮಟ್ಟದ ಪರೀಕ್ಷೆಯಲ್ಲಿ ಪಾಸಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.


ಸುಜ್ಞಾನ ಎಜುಕೇಶನ್ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದು ನಮ್ಮ ಜವಾಬ್ದಾರಿಯಾಗಿದ್ದು ಅದೇ ಉದ್ದೇಶದಲ್ಲಿ ಬೇಸಗೆ ಶಿಬಿರ ನಡೆಸುತ್ತಾ ಬಂದಿದ್ದೇವೆ. ಆರಂಭದಲ್ಲಿ ೪೦೦-೫೦೦ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು ಈ ಬಾರಿ ೧೫೦೦ ಮಂದಿ ಭಾಗವಹಿಸುತ್ತಿದ್ದಾರೆ ಎಂದು ನುಡಿದರು. .
ವಿನಯ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page