ವರದಿ : ಚಿತ್ತೂರು ಪ್ರಬಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬೆಂಗಳೂರು, ಮೇ.೨೮ : ಮುಖ್ಯ ಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಇಂದು ಮಧ್ಯಾಹ್ನ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಾದ್ಯಮದವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ ನನಗೆ ೨ ಬಾರಿ ಮುಖ್ಯಮಂತ್ರಿಯಾಗಲು, 2ಬಾರಿ ವಿರೋಧ ಪಕ್ಷದ ನಾಯಕನಾಗುವ ಅವಕಾಶ ಸಿಕ್ಕಿದೆ. ಈ ಅವಕಾಶ ನೀಡಿರುವ ಸೋನಿಯಾ ಗಾಂಧಿಯವರಿಗೆ, ರಾಹುಲ್ ಗಾಂಧಿಯವರಿಗೆ, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಪಾರವಾದ ಧನ್ಯವಾದ ಸಲ್ಲಿಸಿಕೊಳ್ಳುತ್ತೇನೆ. 2006ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೇನೆ. 2006ರಿಂದ ಕಾಂಗ್ರೆಸ್ಸಿನ ಕಾರ್ಯಕರ್ತರು, ಎಲ್ಲಾ ಮುಖಂಡರು ಶಾಸಕರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ನನಗೆ ಪ್ರೀತಿಯನ್ನು ತೋರಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭ ಧನ್ಯವಾದ ಸಲ್ಲಿಸಿಕೊಳ್ಳುತ್ತೇನೆ. 2013-ರಿಂದ 2018ವರೆಗೆ ಆಮೇಲೆ 2023 ರಿಂದ ಇಲ್ಲಿಯವರೆಗೆ ನಾನು 2 ಬಾರಿ ಮುಖ್ಯಮಂತ್ರಿಯಾಗಿರುವಾಗ ನನ್ನ ಜೊತೆ ಕೆಲಸ ಮಾಡಿರುವ ನನ್ನ ಸಹದ್ಯೋಗಿಗಳಿಗೆ ಬೆಂಬಲ, ಪ್ರೀತಿ ವ್ಯಕ್ತ ಮಾಡಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ

ನಾನು ಹಳ್ಳಿಗಾಡಿನಿಂದ ಬಂದವನು. ನಾನು ಮುಂದೊಂದು ದಿನ ಶಾಸಕನಾಗುತ್ತೇನೆ, ಮಂತ್ರಿಯಾಗುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ, ವಿರೋಧ ಪಕ್ಷದ ನಾಯಕನಾಗುತ್ತೇನೆ ಎಂಬ ಕನಸು ಕಂಡಿಲ್ಲ. ನಾನು ರಾಜಕಾರಣಕ್ಕೆ ಬಂದದ್ದು ಆಕಸ್ಮಿಕ. ನನ್ನ ಕುಟುಂಬದವರ‍್ಯಾರು ರಾಜಕಾರಣದಲ್ಲಿ ಇಲ್ಲ. ನಾನು ರಾಜಕಾರಣಕ್ಕೆ ಬಂದ ದಿನದಿಂದ ಬುದ್ದ, ಬಸವ, ಅಂಬೇಡ್ಕರ್, ಗಾಂಧೀಜಿಯವರ ತತ್ವ ಆದರ್ಶಗಳಲ್ಲಿ ಹಾಗೂ ಸಂವಿಧಾನದಲ್ಲಿ ಅಪಾರ ಗೌರವ ಇಟ್ಟುಕೊಂಡಿದ್ದೆ. ಎಲ್ಲರೂ ಒಂದು ಕುಟುಂಬವಾಗಿ ಬಾಳಬೇಕು ಮತ್ತು ಈ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕೆಂಬ ಉದ್ದೇಶ ಹೊಂದಿದ್ದೇನೆ. ಅದಕ್ಕಾಗಿಯೇ ಬುದ್ದನ ವಿಚಾರ, ಬಸವಣ್ಣನವರ ವಿಚಾರ, ಅಂಬೇಡ್ಕರ್ ವಿಚಾರ ನನಗೆ ಆದರ್ಶಪ್ರಾಯ. ಇಡೀ ಸಮಾಜ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿ ತೋಟವಾಗಬೇಕು, ಸಮಾನ ಅವಕಾಶ ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶಗಳಿಲ್ಲದೇ ಇರುವುದರಿಂದಲೇ ಸಮಾಜದಲ್ಲಿ ಅಸಮಾನತೆ ಇರುವಂತಹದ್ದು. ಈ ಅಸಮಾನತೆ ತೊಲಗಬೇಕು. ಅದಕ್ಕಾಗಿಯೇ ನಮ್ಮ ಸರಕಾರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಪ್ರಯತ್ನ ಮಾಡಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನು ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು .

ಪ್ರಣಾಳಿಕೆಯ ಭರವಸೆ ಈಡೇರಿಸಿದ್ದೇವೆ :
ಪಕ್ಷದ ಪ್ರಣಾಳಿಕೆಯಲ್ಲಿ 2013ರಿಂದ 18 ವರೆಗೆ 165 ಭರವಸೆಗಳನ್ನು ಕೊಟ್ಟಿದ್ದು 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರ ಪ್ರಣಾಳಿಕೆಯಲ್ಲಿ ಸುಮಾರು 550ಕ್ಕೂ ಹೆಚ್ಚು ಭರವಸೆಗಳನ್ನು ಕೊಟ್ಟಿದ್ದು ಸುಮಾರು 300 ಭರವಸೆಗಳನ್ನು ಈಡೇರಿಸಿದ್ದೇವೆ. ಅದರೊಂದಿಗೆ 5 ಗ್ಯಾರೆಂಟಿ ಯೋಜನೆಗಳನ್ನು ಮೊದಲನೇ ವರ್ಷವೇ ಈಡೇರಿಸಿದ್ದೇವೆ. 1,40,000 ಕೋಟಿಗೂ ಹೆಚ್ಚು ಗ್ಯಾರೆಂಟಿ ಯೋಜನೆಗೆ ವಿನಿಯೋಗಿಸಿದ್ದೇವೆ. ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸತಕ್ಕಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇದು ನನಗೆ ಮತ್ತು ಪಕ್ಷಕ್ಕೆ ಸಂತೃಪ್ತಿ ಕೊಟ್ಟಿದೆ. ಭರವಸೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ನನ್ನ ಮೇಲೆ ಅಪಪ್ರಚಾರ ಮಾಡಿದರು. ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ಇಡೀ ದೇಶದಲ್ಲೇ ತಲಾ ಆದಾಯದಲ್ಲಿ ನಂ.೧ ಸ್ಥಾನದಲ್ಲಿದೆ. ಜಿ.ಎಸ್‌ಟಿ ಕಲೆಕ್ಷನ್‌ನಲ್ಲಿ ದೇಶದಲ್ಲಿ ನಂ.2 ಸ್ಥಾನದಲ್ಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿಯಾಗಿ ರಾಜ್ಯದ ಮೇಲೆ ಸಾಲ ಮಾಡಿದ್ದಾರೆ ಎಂಬುದು ರಾಜಕಾರಣಕ್ಕಾಗಿ ಮಾಡಿರುವ ಆರೋಪವಾಗಿದೆ. ರಾಜ್ಯದ ಬೆಳವಣಿಗೆ ದರ ಶೇ.8.2ರಷ್ಟಿದೆ. ಹಣಕಾಸು ನಿಯಮದ ಅನುಸಾರವೇ ನಾನು ಸಾಲ ಮಾಡಿದ್ದೇನೆ. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಕರ್ನಾಟಕ ಸಾಲದ ಪ್ರಮಾಣ ಜಿಎಸ್ ಡಿಪಿಯ ಒಳಗೆ ಇದೆ. ಈ ವರ್ಷ ೧೯ ಸಾವಿರ ಕೋಟಿ ಆದಾಯ ಕೊರತೆ ಇದೆ. 15ನೇ ಹಣಕಾಸು ಆಯೋಗದಂತೆ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ. ರಾಜ್ಯದ ಹಣಕಾಸು ಯೋಜನೆಗಳಿಗೆ ಕೇಂದ್ರ ಸರಿಯಾಗಿ ಅನುದಾನ ನೀಡುತ್ತಿಲ್ಲ. ಜಿಎಸ್‌ಟಿ ನಷ್ಟ ತುಂಬಿಕೊಡುವುದಾಗಿ ಹೇಳಿದ್ದರು. ಅದನ್ನು ನಿಲ್ಲಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಜಾಸ್ತಿಯಾಗಿದೆ. ನಾನು ಯಾವತ್ತೂ ಕೂಡ ಅಧಿಕಾರದ ಹಿಂದೆ ಹಣದ ಹಿಂದೆ ಹೋದವನಲ್ಲ. ಆಸ್ತಿ ಪಾಸ್ತಿ ಮಾಡಿಕೊಳ್ಳುವ ಯೋಚನೆ ಮಾಡಿದವನಲ್ಲ. ಮತದಾರರು ಅಧಿಕಾರ ಕೊಟ್ಟಿದ್ದಾರೆ. 1978ರಲ್ಲಿ ತಾಲೂಕಾ ಬೋರ್ಡ್ ಮೆಂಬರ್ ಆದವನು. ರಾಜಕಾರಣದ ಜೀವನ ಸುಮಾರು ೫೦ ವರ್ಷ ಆಗಿದೆ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಇಂದಿನ ರಾಜಕಾರಣದಲ್ಲಿ ಜನಶಕ್ತಿ ಇದ್ದರೆ ಮಾತ್ರ ರಾಜಕಾರಣ ಮಾಡಲು ಸಾಧ್ಯ. ಅಧಿಕಾರ ಕೊಡುವವರು ಜನರೇ ಆಗಿದ್ದಾರೆ. ನಾನು ಇಂದೂ ಕೂಡ ನಂಬಿರುವ ಮೌಲ್ಯಗಳ ಜೊತೆ ರಾಜಿ ಮಾಡಿಕೊಂಡಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಬದುಕಿನ ಪ್ರಾಥಮಿಕ ಅಗತ್ಯತೆ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಸಮಾಜದಲ್ಲಿರುವ ಎಲ್ಲಾ ಬಡವರಿಗೂ ಕೂಡ ಅನ್ನ, ಗೃಹಲಕ್ಷ್ಮೀ ಮೂಲಕ 2000 ವನ್ನು ಎಲ್ಲಾ ಜಾತಿಯವರಿಗೆ, ಎಲ್ಲಾ ಧರ್ಮಿಯರಿಗೂ ನೀಡಿದ್ದೇವೆ. ಎಲ್ಲರಿಗೂ ಗೃಹಜ್ಯೋತಿಯನ್ನು ನೀಡಿದ್ದೇವೆ. ಸರಕಾರಿ ಬಸ್ಸುಗಳಲ್ಲಿ ಕರ್ನಾಟಕದ ಒಳಗೆ ಎಲ್ಲಿಗೆ ಬೇಕಾದರೂ ಹೋಗಲು ಮಹಿಳೆಯರಿಗೆ ಅವಕಾಶ ಕೊಟ್ಟಿದ್ದೇವೆ. ನೆಲ, ಭಾಷೆ, ನೀರಿನ ಬಗ್ಗೆ ಯಾವತ್ತೂ ರಾಜಿಯಾಗಿಲ್ಲ. ೮ ವರ್ಷಗಳು ಮುಖ್ಯಮಂತ್ರಿಯಾಗಿದ್ದೆ. ೨ ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೆ. ಈ ಅವಕಾಶವನ್ನು ಕಾಂಗ್ರೆಸ್ ಪಕ್ಷ ನನಗೆ ನೀಡಿದೆ. ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದಾಗ ನಾನು ಅಂಹಿದ ಸಂಘಟನೆಯಲ್ಲಿದ್ದಾಗ ಕಾಂಗ್ರೆಸ್ಸಿನ ಸೋನಿಯಾ ಗಾಂಧಿಯವರು ನನ್ನನ್ನು ಕಾಂಗ್ರೆಸ್ಸಿಗೆ ಆಹ್ವಾನಿಸಿದರು. ನನ್ನ ಜೊತೆ ಬಂದ 8 ಮಂದಿ ಶಾಸಕರ ಜೊತೆ ಕಾಂಗ್ರೆಸ್ ಸೇರಿಕೊಂಡೆವು. ನಾನು ಏನೇ ಆಗಿದ್ದರೂ ಅದಕ್ಕೆ ಸಂವಿಧಾನ ಕಾರಣ. ಸಂವಿಧಾನದ ಕಾರಣದಿಂದ ನಾನು ಉಪ ಮುಖ್ಯಮಂತ್ರಿ, ವಿಪಕ್ಷನಾಯಕ, ಮುಖ್ಯಮಂತ್ರಿಯಾದೆ. ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಜನರ ಸಮಾನತೆಗಾಗಿ ಹೋರಾಟ ಮಾಡುತ್ತೇನೆ ಎಂಬ ಭರವಸೆಯನ್ನು ರಾಜ್ಯದ ಜನತೆಗೆ ನೀಡುತ್ತೇನೆ.
ಹೈ ಕಮಾಂಡ್‌ನವರು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ಹೇಳಿದ್ದಾರೆ. ನಾನು ಆಗಲ್ಲ ಎಂದಿದ್ದೇನೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ನನ್ನನ್ನು ಜನರು ೫ ವರ್ಷಕ್ಕೆ ಆಯ್ಕೆ ಮಾಡಿದ್ದು ಇಲ್ಲಿಯೇ 5ವರ್ಷ ಕೆಲಸ ಮಾಡಲಿದ್ದೇನೆ. ನಾನು ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಪತ್ರಿಕಾಗೋಷ್ಟಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.



