• May 5, 2026
  • Last Update May 5, 2026 3:05 am
  • Brahmavara

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ‘ಶ್ರೀ ಭಾರತಿ ತೀರ್ಥ ಪುರಸ್ಕಾರ’

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ‘ಶ್ರೀ ಭಾರತಿ ತೀರ್ಥ ಪುರಸ್ಕಾರ’

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ನಿರಂತರವಾಗಿ ತಮ್ಮ ಆರ್ಥಿಕ ಸಹಕಾರ ನೀಡುತ್ತಾ ಬಂದಿರುತ್ತಾರೆ. ಎಲ್ಲಿಯೇ ಒಳ್ಳೆಯ ಕೆಲಸ ನಡೆದರೂ ಅಲ್ಲಿ ಅವರಿಂದ ಸಾಧ್ಯವಾದ ಸಹಕಾರ ನೀಡುತ್ತಾ ಬಂದಿರುತ್ತಾರೆ. ಅಂತಹ ಶಕ್ತಿ ಹಾಗೂ ಬುದ್ದಿಯನ್ನು ಭಗವಂತ ಅವರಿಗೆ ಕೊಟ್ಟಿದ್ದಾನೆ. ತುಂಬಾ ಜನರಿಗೆ ಸಮಾಜದಲ್ಲಿ ಆರ್ಥಿಕ ಶಕ್ತಿ ಇದ್ದರೂ ಕೊಡುವಂತಹ ಬುದ್ದಿ ಹಾಗೂ ಪ್ರೇರಣೆ ಇಲ್ಲ. ಶಕ್ತಿ ಹಾಗೂ ಪ್ರೇರಣೆ ಎರಡೂ ಇರತಕ್ಕಂತವರು ಕೆಲವರು ಮಾತ್ರ. ಅಂತವರಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಒಬ್ಬರು. ಅವರು ಭಗವದ್ಭಕ್ತರಾಗಿ, ಗುರು ಭಕ್ತರಾಗಿ, ಧರ್ಮಶ್ರದ್ಧೆ ಹೊಂದಿದ್ದಾರೆ. ವಿಶೇಷವಾಗಿ ಪೀಠದ ಸೇವೆ ಹಾಗೂ ಧಾರ್ಮಿಕವಾದ ಕಾರ್ಯ ಮಾಡುತ್ತಾ ಬಂದಿರುವ ಅವರಿಗೆ ಶ್ರೀ ಭಾರತಿ ತೀರ್ಥ ಪುರಸ್ಕಾರವನ್ನು ನೀಡುತ್ತಿದ್ದೇವೆ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ತಮ್ಮ ಆರ್ಶೀರ್ವಚನದ ಸಂದರ್ಭ ನುಡಿದರು.
ಅವರು ಆನೆಗುಡ್ಡೆಯ ನಾಗಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ (ಶೃಂಗೇರಿ ಶಂಕರ ಮಠ) ಮೇ ೪ ರಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ನೂತನ ರಥ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ನೂತನ ರಥವನ್ನು ಸಮರ್ಪಿಸಿದ ಕೃಷ್ಣಮೂರ್ತಿ ಮಂಜರಿಗೆ ಪುರಸ್ಕಾರ ನೀಡಿ ಆಶೀರ್ವಚಿಸಿದರು.


ಅಧಿಕಾರ ಆಸೆಯಲ್ಲ, ಅದೊಂದು ಪವಿತ್ರ ಕರ್ತವ್ಯದ ಸ್ಥಾನ – ಶೃಂಗೇರಿ ಜಗದ್ಗುರು
ಸನಾತನ ಧರ್ಮದ ಪರಂಪರೆಯಲ್ಲಿ ರಾಜಕಾರಣಿ, ಸಾಮಾನ್ಯ ವ್ಯಕ್ತಿ, ಅಧಿಕಾರಿ, ಪಂಡಿತ ಅಥವಾ ಪಾಮರ ಹೀಗೆ ಯಾರೇ ಬೇಕಾದರೂ ಇರಲಿ, ಎಲ್ಲರಿಗೂ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಲು ಬೇಕಾದ ಉಪದೇಶಗಳು ಸನಾತನ ಧರ್ಮದ ಗ್ರಂಥಗಳಲ್ಲಿ ಲಭಿಸುತ್ತವೆ. ಮನುಷ್ಯನಿಗೆ ಸಂಸ್ಕಾರ ಅನ್ನುವುದು ಬಹಳ ಮುಖ್ಯವಾಗಿ ಬೇಕು. ಸನಾತನ ಧರ್ಮ ನಮಗೆ ಕೊಡುವ ಸಂಸ್ಕಾರ ಅವಶ್ಯಕವಾದುದು. ಶಿಕ್ಷಣದೊಂದಿಗೆ ಅಂತಃಸತ್ವವನ್ನು ಹೆಚ್ಚಿಸುವ ಧಾರ್ಮಿಕ ಸಂಸ್ಕಾರಗಳನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಇಂತಹ ಸಂಸ್ಕಾರಗಳಿಂದ ಮಾತ್ರ ಮಕ್ಕಳ ಮುಂದಿನ ಜೀವನ ಸಾರ್ಥಕತೆ ಪಡೆಯಲಿದೆ ಎಂದು ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಇದೇ ಸಂದರ್ಭ ಆನೆಗುಡ್ಡೆ ಶೃಂಗೇರಿ ಶಂಕರ ಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಧರ್ಮಾಧಿಕಾರಿ ಲೋಕೇಶ್ ಅಡಿಗ ಹಾಗೂ ಅವರ ಸಹೋದರರಾದ ಲಕ್ಷ್ಮೀಶ್ ಅಡಿಗ, ನಾಗೇಂದ್ರ ಅಡಿಗ ಮತ್ತು ಮಂಜುನಾಥ್ ಅಡಿಗ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ ಶ್ರೀಗಳು ಈ ಸಂದರ್ಭದಲ್ಲಿ ಗೌರವಿಸಿ ಆಶೀರ್ವಚಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶೃಂಗೇರಿ ಪೀಠದ ಆಡಳಿತಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಶಂಕರ ಮಠದ ಧರ್ಮಾಧಿಕಾರಿ ಲೋಕೇಶ್ ಅಡಿಗ ಸ್ವಾಗತಿಸಿ, ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page