udupimitra.in
  • November 17, 2026
  • Last Update November 17, 2026 4:55 pm
  • Brahmavara

ನ. 27ರಿಂದ ಬ್ರಹ್ಮಾವರದಲ್ಲಿ ಮೂರು ದಿನಗಳ ಉಡುಪಿ ಆಹಾರ ಮತ್ತು ಉದ್ಯಮ ಮೇಳ

ನ. 27ರಿಂದ ಬ್ರಹ್ಮಾವರದಲ್ಲಿ ಮೂರು ದಿನಗಳ ಉಡುಪಿ ಆಹಾರ ಮತ್ತು ಉದ್ಯಮ ಮೇಳ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ನ. ೧೭:
ಬ್ರಹ್ಮಾವರ, ನ. ೧೭: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.)ದ ದಶಮಾನೋತ್ಸವದ ಅಂಗವಾಗಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-೨೦೨೬ ನ. ೨೭ರಿಂದ ೨೯ರವರೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಕಾನೂನು ಸಲಹೆಗಾರ ಹಾಗೂ ಮೇಳದ ಪ್ರಧಾನ ಸಂಚಾಲಕ ಶ್ರೀಧರ್ ಪಿ.ಎಸ್. ತಿಳಿಸಿದರು.
ಬ್ರಹ್ಮಾವರದ ಸಿಟಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ ೧೦ರಿಂದ ರಾತ್ರಿ ೧೦ರವರೆಗೆ ನಡೆಯುವ ಈ ಮೇಳದಲ್ಲಿ ಆಹಾರೋದ್ಯಮ, ಗೃಹೋಪಯೋಗಿ ವಸ್ತುಗಳು, ಕೃಷಿ, ಸ್ಥಳೀಯ ಉತ್ಪನ್ನಗಳು ಹಾಗೂ ಕರಾವಳಿಯ ಕಲೆ-ಸಂಸ್ಕೃತಿ ಅನಾವರಣಗೊಳ್ಳಲಿದೆ ಎಂದರು.
ಆಹಾರೋದ್ಯಮ ಮತ್ತು ಗೃಹೋಪಯೋಗಿ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡುವುದು, ಉದ್ಯಮಿಗಳು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.
ಆಹಾರೋದ್ಯಮಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು, ಉತ್ಪನ್ನಗಳು ಹಾಗೂ ನೂತನ ತಂತ್ರಜ್ಞಾನಗಳ ಪ್ರದರ್ಶನ ಮತ್ತು ಮಾರಾಟ, ಗೃಹೋಪಯೋಗಿ ವಸ್ತುಗಳ ಮಳಿಗೆಗಳು, ಕೃಷಿ ಮತ್ತು ಉದ್ಯಮ ಸಂಬಂಧಿತ ಪ್ರದರ್ಶನಗಳು, ವಿವಿಧ ಬಗೆಯ ಆಹಾರ ಪದಾರ್ಥಗಳ ಸವಿಯೂಟ, ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳ ವಿಶೇಷ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಆಟಗಳು ಮೇಳದ ಪ್ರಮುಖ ಆಕರ್ಷಣೆಗಳಾಗಲಿವೆ ಎಂದರು. .


ನ. 27: ಮೆರವಣಿಗೆ, ಉದ್ಘಾಟನೆ, ದಶಮಾನೋತ್ಸವ
ನ. ೨೭ರಂದು ಸಂಜೆ ೪.೩೦ಕ್ಕೆ ಬ್ರಹ್ಮಾವರದ ಕುಂಜಾಲು ಸರ್ಕಲ್‌ನಿಂದ ಅದ್ದೂರಿ ಪುರಮೆರವಣಿಗೆ ಆರಂಭಗೊಂಡು ಹಳೆ ಬಸ್ ನಿಲ್ದಾಣದ ಮೂಲಕ ಗಾಂಧಿ ಮೈದಾನ ತಲುಪಲಿದೆ. ಸಂಜೆ ೬ ಗಂಟೆಗೆ ಅರೆಹೊಳೆ ಪ್ರತಿಷ್ಠಾನದ ನೃತ್ಯೋಪಾಸನೆ ಹಾಗೂ ಮಂಗಳೂರಿನ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ೬.೩೦ಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮೇಳವನ್ನು ಉದ್ಘಾಟಿಸಲಿದ್ದಾರೆ. ಆಹಾರೋದ್ಯಮ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ಶಾಸಕ ಯಶಪಾಲ್ ಸುವರ್ಣ ಹಾಗೂ ಆಹಾರ ಮೇಳವನ್ನು ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಉದ್ಘಾಟಿಸಲಿದ್ದಾರೆ.
ರಾತ್ರಿ ೭ ಗಂಟೆಗೆ ಸಂಘದ ದಶಮಾನೋತ್ಸವದ ಅಂಗವಾಗಿ ‘ದಶರುಚಿ-೨೦೨೬ ಸಭಾ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ, ಉದ್ಯಮ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ೮.೩೦ರಿಂದ ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.


ನ. 28: ಸಾಂಸ್ಕೃತಿಕ ಕಾರ್ಯಕ್ರಮ, ದಶರುಚಿ ಸಿಂಹಾವಲೋಕನ
ಎರಡನೇ ದಿನವಾದ ನ. ೨೮ರಂದು ಸಂಜೆ ೫.೪೫ರಿಂದ ಯಕ್ಷಗಾನ, ನಾಟ್ಯ, ಹಾಸ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾಪ್ರದರ್ಶನಗಳು ನಡೆಯಲಿವೆ. ರಾತ್ರಿ ೮ ಗಂಟೆಗೆ ‘ದಶರುಚಿ ಸಿಂಹಾವಲೋಕನ ಸಭೆ ನಡೆಯಲಿದ್ದು, ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಕ್ಸೂಚಿ ಭಾಷಣ ಮಾಡಲಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ. ಮೇಳದ ಪ್ರಧಾನ ಸಂಚಾಲಕ ಶ್ರೀಧರ್ ಪಿ.ಎಸ್. ಅವಲೋಕನ ಮಂಡಿಸಲಿದ್ದಾರೆ. ರಾತ್ರಿ ೯.೩೦ಕ್ಕೆ ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ‘ವಿನಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ನ. 29: ಸಮಾರೋಪ, ಸಾಧಕರಿಗೆ ಸನ್ಮಾನ

ಮೂರನೇ ದಿನವಾದ ನ. ೨೯ರಂದು ಸಂಜೆ ೬ ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಸನ್ಮಾನ ನೆರವೇರಿಸಲಿದ್ದಾರೆ. ಶಾಸಕರಾದ ವಿ. ಸುನೀಲ್ ಕುಮಾರ್, ಎ. ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ೮.೩೦ಕ್ಕೆ ‘ಉಡುಪಿ ಸರಿಗಮಪ ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಖ್ಯಾತ ಗಾಯಕರು ಹಾಗೂ ಸಂಗೀತ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.


ಸಾಧಕರಿಗೆ ಆಹಾರೋದ್ಯಮ ರತ್ನ, ಉದ್ಯಮ ರತ್ನ ಪ್ರಶಸ್ತಿ
ದಶಮಾನೋತ್ಸವದ ಅಂಗವಾಗಿ ಆಹಾರೋದ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ‘ಆಹಾರೋದ್ಯಮ ರತ್ನ ಮತ್ತು ‘ಉದ್ಯಮ ರತ್ನ ಪ್ರಶಸ್ತಿಗಳ ಮೂಲಕ ಗೌರವಿಸಲಾಗುವುದು. ವಿವಿಧ ಉತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮಳಿಗೆಗಳು ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜತೆಗೆ ಉದ್ಯಮಗಳ ಬೆಳವಣಿಗೆಗೆ ಪೂರಕ ವೇದಿಕೆಯಾಗಲಿವೆ.
ಆಹಾರ, ಉದ್ಯಮ, ಕೃಷಿ, ಖರೀದಿ, ಮನರಂಜನೆ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಮೂರು ದಿನಗಳ ಮೇಳದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿಸೋಜ, ಗೌರವಾಧ್ಯಕ್ಷ ಲಾಲ್ಟರ್ ಸಲ್ಡಾನ, ಮಂಜುನಾಥ್ ಕಾಮತ್,
ದಿವಾಕರ ಸನಿಲ್, ರಿತೇಶ್ ಸುವರ್ಣ, ಉದಯಕುಮಾರ್ ಶೆಟ್ಟಿ, ಚಂದ್ರಶೇಖರ್, ದುರ್ಗಾ ಪ್ರಸಾದ್, ಸೋಮಶೇಖರ್, ಸಂತೋಷ್ ದೇವಾಡಿಗ ನಾಗೂರು, ಉದಯಕುಮಾರ್ ನಾಯಕ್, ಕೆ ಪಿ ಶ್ರೀಶನ್, ಶಶಿಧರ್ ಗಾಣಿಗ ಹಾರಾಡಿ, ಸಂತೋಷ್ ಪೂಜಾರಿ, ಹಸನ್ ಬೆಳ್ಮನ್, ಸಂತೋಷ್ ಪೂಜಾರಿ, ಕೃಷ್ಣ ನಾಯ್ಕ್ ಚಾರ, ಕೀರ್ತಿ ಕುಮಾರ್, ವಿಶ್ವನಾಥ ಕೋಟೇಶ್ವರ, ಗಣಪತಿ ಮರಕಾಲ, ಸತ್ಯ ಪ್ರಸಾದ ಶೆಣೈ, ಹೆರಾಲ್ಡ್ ಡಿಸೋಜ, ಕೃಷ್ಣ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಸುದೇವಶೆಟ್ಟಿ ಇದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page