ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ ನ.೫:
ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಾಳೆಕುದ್ರು ಮಠಕ್ಕೆ ಸೇರಿದ ಸುಮಾರು ೧,೦೦೦ ವರ್ಷಗಳಷ್ಟು ಪುರಾತನ ಆರು ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಮಠದ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಮಠದ ಭಕ್ತರು, ಊರವರು ತಿಳಿಸಿದ್ದಾರೆ.
ಮತ್ತೊಂದೆಡೆ, ಮಠಕ್ಕೆ ಬೀಗ ಹಾಕಲಾಗಿದ್ದು, ನಿತ್ಯ ಪೂಜೆ ಸ್ಥಗಿತಗೊಂಡಿದೆ. ಮಠದ ಹೊರಗಿನ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಇದ್ದ ಮೂವರು ಅಪರಿಚಿತರನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಠದ ಶಿಷ್ಯರಾದ ಸುರೇಶ್ ಅಡಿಗ ಹಾಗೂ ಪ್ರೀತಮ್ ಅಡಿಗ, ಮಠದ ಆಡಳಿತ, ಪುರಾತನ ವಿಗ್ರಹಗಳ ಸುರಕ್ಷತೆ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಜಗದೀಶ್ ಐತಾಳ್ ನೀಡಿದ ದೂರಿನ ಮೇರೆಗೆ ನ.2ರಂದು ಎಫ್ಐಆರ್ ದಾಖಲಾಗಿದ್ದು, ಮಠದ ಸ್ವಾಮೀಜಿ, ಆಡಳಿತಾಧಿಕಾರಿ ಅನಿಲ್ ಕುಮಾರ್, ಜಯಲಕ್ಷ್ಮಿ, ಸಿಬ್ಬಂದಿ ಶ್ರೇಯಸ್ ಹಾಗೂ ಬೆಂಗಳೂರಿನ ಆಂಟಿಕ್ ವಸ್ತುಗಳ ವ್ಯಾಪಾರಿ ನಾಗೇಂದ್ರ ಪ್ರಸಾದ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ತಿಳಿಸಿದರು.

ಆರು ಪುರಾತನ ವಿಗ್ರಹಗಳ ಮಾರಾಟಕ್ಕೆ ಯತ್ನದ ಆರೋಪ:
ಮಠಕ್ಕೆ ಸೇರಿದವೆಂದು ಹೇಳಲಾಗುತ್ತಿರುವ ಸುಮಾರು ೧,೦೦೦ ವರ್ಷಗಳಷ್ಟು ಹಳೆಯ ಆರು ವಿಗ್ರಹಗಳ ಚಿತ್ರಗಳು ಬೆಂಗಳೂರಿನ ಆಂಟಿಕ್ ವ್ಯಾಪಾರ ಸಂಸ್ಥೆಯೊಂದರ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಪ್ರಕಟವಾಗಿವೆ ಎಂದು ಪ್ರೀತಮ್ ಅಡಿಗ ಆರೋಪಿಸಿದರು. ಇತಿಹಾಸಕಾರ ಗುರುರಾಜ ಭಟ್ ಅವರು ಹಿಂದಿನ ಸ್ವಾಮೀಜಿ ಶಂಕರಾಶ್ರಮ ಸ್ವಾಮೀಜಿಯವರ ಸಂದರ್ಶನದ ಮೂಲಕ ಪ್ರಕಟಿಸಿರುವ ಐತಿಹಾಸಿಕ ದಾಖಲೆಗಳಲ್ಲಿನ ವಿಗ್ರಹಗಳ ಚಿತ್ರಗಳು ಹಾಗೂ ವೆಬ್ಸೈಟ್ನಲ್ಲಿರುವ ಚಿತ್ರಗಳನ್ನು ಹೋಲಿಸಿದಾಗ ಅವು ಮಠಕ್ಕೆ ಸೇರಿದ ವಿಗ್ರಹಗಳೇ ಎಂಬ ಅನುಮಾನ ಬಲವಾಗಿದೆ ಎಂದರು.
ಮಠದಲ್ಲಿ ನಿತ್ಯಪೂಜೆಗೊಳಪಟ್ಟಿದ್ದ ಕೆಲವು ಪ್ರಮುಖ ದೇವರ ಪುರಾತನ ವಿಗ್ರಹಗಳಾದ ೬-೭ನೇ ಶತಮಾನಕ್ಕೆ ಸೇರಿದ್ದ ವಲ್ಲಭ ಗಣಪತಿ, ಶಕ್ತಿ ಗಣಪತಿ ವಿಗ್ರಹ, ವಿಜಯನಗರ ಕಾಲದ ಲಕ್ಷ್ಮೀ( ನರಸಿಂಹ ವಿಗ್ರಹ, ೧೨ನೇ ಶತಮಾನಕ್ಕೆ ಸೇರಿದ ಮಹಿಷಮರ್ಧಿನಿ ವಿಗ್ರಹಗಳನ್ನು ಸಂಚಿನಿಂದ ಬೆಂಗಳೂರಿನ ಬಸವೇರ್ಶವರ ನಗರದಲ್ಲಿರುವ ಪ್ರಸಿದ್ಧ ಐಡೆಲ್ಸ್ ಅಂಗಡಿಗೆ ಅತ್ಯಧಿಕ ಪ್ರಾಚ್ಯ ಮೌಲ್ಯಕ್ಕಾಗಿ ೨೦೨೫ರಲ್ಲೇ ಮಾರಾಟ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ವಿಗ್ರಹಗಳ ಪ್ರಸ್ತುತ ಸ್ಥಿತಿ, ಮಠದಲ್ಲಿರುವ ಮೂಲ ವಿಗ್ರಹಗಳ ಸಂಖ್ಯೆ ಹಾಗೂ ಅವುಗಳ ಮಾರಾಟದ ಹಿಂದಿನ ಉದ್ದೇಶದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಂತರರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲದೊಂದಿಗೆ ಪ್ರಕರಣಕ್ಕೆ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ನಾಗೇಂದ್ರ ಪ್ರಸಾದ್ ಅವರನ್ನು ಬೆಂಗಳೂರಿನ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಸನ್ಯಾಸಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮಠದಲ್ಲಿ ನೆಲೆಸಿದ್ದು, ಅವರನ್ನು ಸ್ಥಳೀಯ ಭಕ್ತರು ಸ್ವಾಮೀಜಿಯಾಗಿ ಒಪ್ಪಿಕೊಂಡಿಲ್ಲ ಎಂದು ಪ್ರೀತಮ್ ಅಡಿಗ ಆರೋಪಿಸಿದರು. ಇತ್ತೀಚೆಗೆ ಸ್ವಾಮೀಜಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ಆಡಿಯೋ ಸಂಭಾಷಣೆಗಳು ವೈರಲ್ ಆಗಿದ್ದು, ಅವು ಎಐ ಮೂಲಕ ಸೃಷ್ಟಿಸಿದ ನಕಲಿ ಆಡಿಯೋಗಳೆಂದು ಸ್ವಾಮೀಜಿ ಕಡೆಯವರು ಹೇಳಿಕೊಂಡಿದ್ದರು. ಆದರೆ, ಫೊರೆನ್ಸಿಕ್ ಸಾಫ್ಟ್ವೇರ್ ಮೂಲಕ ಪರಿಶೀಲಿಸಿದಾಗ ಅವು ಎಐ ಸೃಷ್ಟಿಯಲ್ಲ ಎಂಬುದು ತಿಳಿದುಬಂದಿದೆ ಎಂದು ಅವರು ಪ್ರತಿಪಾದಿಸಿದರು.
ಮಠಕ್ಕೆ ಬೀಗ :
ಎಫ್ಐಆರ್ ದಾಖಲಾದ ಬಳಿಕ ಸ್ವಾಮೀಜಿ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಮಠವನ್ನು ತೊರೆದಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಇದರಿಂದ ನರಸಿಂಹ ದೇವರಿಗೆ ಪ್ರತಿದಿನ ಮೂರು ಹೊತ್ತು ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಏನಾಗಿವೆ ಎಂಬುದು ಗೊತ್ತಾಗುತ್ತಿಲ್ಲ. ಊರಿನ ಮಠದ ದೇವರಿಗೆ ಸರಿಯಾಗಿ ಪೂಜೆ ನಡೆಯಬೇಕು. ಒಂದು ವೇಳೆ ಸರಿಯಾಗಿ ಪೂಜೆ ನಡೆಯದೇ ಹೋದಲ್ಲಿ ಊರಿನವರಿಗೂ ಒಳಿತಲ್ಲ ಎಂಬ ನಂಬಿಕೆ ಇಲ್ಲಿದೆ ಎಂದು ಸುರೇಶ್ ಅಡಿಗ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ ಬೇರೆ ಮಠದಿಂದ ಬಂದವರು ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬರು ಪೂಜೆ ಸಲ್ಲಿಸಿದ್ದರೂ, ಮಠದ ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ ನಡೆದಿಲ್ಲ ಎಂದರು.

ಮಠ ಕಾಯಲು ಮೂವರು ಅಪರಿಚಿತ ವ್ಯಕ್ತಿಗಳು :
ಮಠದ ಎದುರು ಊರವರು ಒಟ್ಟು ಸೇರಿದ ವೇಳೆ ಮಠದ ಹೊರಗಿನ ಕೊಠಡಿಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಚಾರಿಸಿದಾಗ ಮೊದಲು ನಾವು ಉಡುಪಿಯವರು. ಮಠವನ್ನು ನೋಡಿಕೊಳ್ಳಲು ಹೇಳಿದ್ದಾರೆ ಎಂದರು. ಕೋಟ ಠಾಣಾ ಸಿಬ್ಬಂದಿಗಳು ವಿಚಾರಿಸಿದಾಗ ತಾವು ಕೊಪ್ಪದಿಂದ ಮಠ ಕಾಯಲು ಬಂದಿದ್ದು, ಸ್ವಾಮೀಜಿಯವರೇ ಕಳುಹಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅನುಮಾನಗೊಂಡ ಸ್ಥಳೀಯರು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರನ್ನು ಮಠಕ್ಕೆ ಕಳುಹಿಸಿದವರು ಯಾರು ಹಾಗೂ ಅವರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಮಠದ ಆಸ್ತಿಪಾಸ್ತಿ, ಪುರಾತನ ವಿಗ್ರಹಗಳು ಹಾಗೂ ಧಾರ್ಮಿಕ ಪರಂಪರೆಯ ರಕ್ಷಣೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಗ್ರಹಗಳ ಮಾರಾಟದ ಆರೋಪ ಸೇರಿದಂತೆ ಎಲ್ಲ ಬೆಳವಣಿಗೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು. ಮಠಬಿಟ್ಟು ಎಲ್ಲರೂ ತೆರಳಿರುವುದರಿಂದ ನಾಳೆ ಏನಾದರೂ ವಸ್ತುಗಳು ನಾಪತ್ತೆಯಾದಲ್ಲಿ ಹೊಣೆಗಾರರು ಯಾರು? ಮಠದಲ್ಲಿ ಸರಿಯಾಗಿ ಮೂರು ಹೊತ್ತು ಪೂಜೆ ನಡೆಯಬೇಕು. ಭಕ್ತರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುರೇಶ್ ಅಡಿಗ ಹಾಗೂ ಪ್ರೀತಮ್ ಅಡಿಗ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಉಡುಪ, ಸಚ್ಚಿದಾನಂದ ಅಡಿಗ, ಶಿವರಾಮ ಅಡಿಗ, ಶಿವರಾಮ ಉಡುಪ, ಪಟ್ಟಾಭಿರಾಮ ಸೋಮಯಾಜಿ, ಶ್ರೀಧರ ಭಟ್, ರಾಧಾಕೃಷ್ಣ ನಾಯಕ್, ನಾಗರಾಜ್ ಮಯ್ಯ, ಸುಬ್ರಹ್ಮಣ್ಯ ಆಚಾರ್ಯ, ರವೀಂದ್ರ ತಿಂಗಳಾಯ, ರಾಜೇಶ್ ಮಧ್ಯಸ್ಥ ಹಾಗೂ ಅನಸೂಯಾ ದೇವಾಡಿಗ ಉಪಸ್ಥಿತರಿದ್ದರು.


