udupimitra.in
  • November 8, 2026
  • Last Update November 7, 2026 6:52 pm
  • Brahmavara

ವಾಸುದೇವ ಸದಾಶಿವಾಶ್ರಮ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಬಾಳೆಕುದುರು ಮಠದ ವಿಗ್ರಹದ ದುರಸ್ತಿಯೂ ಕಾನೂನು ಬಾಹಿರ – ಹಿತರಕ್ಷಣಾ ಸಮಿತಿ (ರಿ.)

ವಾಸುದೇವ ಸದಾಶಿವಾಶ್ರಮ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಬಾಳೆಕುದುರು ಮಠದ ವಿಗ್ರಹದ ದುರಸ್ತಿಯೂ ಕಾನೂನು ಬಾಹಿರ – ಹಿತರಕ್ಷಣಾ ಸಮಿತಿ (ರಿ.)

ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಪುರಾಣ ಪ್ರಸಿದ್ಧ ಶ್ರೀ ಮಠ ಬಾಳೆಕುದುರು ಇಲ್ಲಿನ ಅನಧೀಕೃತ ಪೀಠಾಧಿಪತಿ ವಾಸುದೇವ ಸದಾಶಿವಾಶ್ರಮ (ಮಧುಸೂದನ ಭಟ್) ಅನಿಲ್‌ಕುಮಾರ್, ಜಯಲಕ್ಷ್ಮೀ, ಶ್ರೇಯಸ್ ಹಾಗೂ ನಾಗೇಂದ್ರ ಪ್ರಸಾದ್ ವಿರುದ್ಧ ಜಗದೀಶ್ ಐತಾಳ್ ಎಂಬವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪುರಾತನ ಚರ ವಿಗ್ರಹಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿರುವುದರ ಬಗ್ಗೆ ತನಿಖೆ ಮಾಡುವಂತೆ ದೂರು ನೀಡಿದ್ದು ಇವರೆಲ್ಲರ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ಇವರೆಲ್ಲರೂ ಮಠದಿಂದ ಪರಾರಿಯಾಗಿದ್ದು ಅವರು ಎಲ್ಲಿಯೋ ಕುಳಿತುಕೊಂಡು ಪತ್ರಿಕಾ ಹಾಗೂ ದೃಶ್ಯ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು ಆ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಬಾಳೆಕುದುರು ಶ್ರೀಮಠದ ಹಿತರಕ್ಷಣಾ ಸಮಿತಿ (ರಿ.)ಯ ಸುರೇಶ್ ಅಡಿಗ ತಿಳಿಸಿದ್ದಾರೆ. ಅವರು ಬ್ರಹ್ಮಾವರದ ಹೋಟೆಲ್ ಗಜಾನನ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.


ವಾಸುದೇವ ಸದಾಶಿವಾಶ್ರಮ ಅವರು ನಾವು ಮೂರ್ತಿಗಳನ್ನು ರಿಪೇರಿ ಮಾಡಲು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗಳಿಂದ ಮೂರ್ತಿಗಳನ್ನು ಮಠದಿಂದ ಬೆಂಗಳೂರಿಗೆ ಕಳಿಸಿರುವುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಪ್ರಾಚೀನ ಭಿನ್ನ ಮೂರ್ತಿಗಳನ್ನು ಶಾಸ್ತ್ರ ಪ್ರಕಾರವಾಗಲಿ, ಕಾನೂನು ರೀತಿಯಾಗಲಿ, ದುರಸ್ತಿ ಮಾಡುವುದಾಗಲಿ, ಕರಗಿಸುವುದಾಗಲಿ, ಪಡಿಯಚ್ಚು ತಯಾರಿಸುವುದಾಗಲಿ ಹಾಗೂ ಮಾರಾಟ ಮಾಡುವುದು ಕೂಡ ಅಪರಾಧ ಎನಿಸಿಕೊಳ್ಳಲಿದೆ. ಒಂದು ವೇಳೆ ಭಿನ್ನ ಮೂರ್ತಿಗಳಿದ್ದಲ್ಲಿ ಶಾಸ್ತ್ರ ಪ್ರಕಾರ ನಡೆದುಕೊಂಡು ಆ ಮೂರ್ತಿಗಳನ್ನು ಮಠದಲ್ಲಿ ಪ್ರತ್ಯೇಕ ಇಡಬೇಕೇ ಹೊರತು ಮಾರಾಟ ಮಾಡುವಂತಿಲ್ಲ. ಶಿಷ್ಯ ವರ್ಗದವರು ಶ್ರೀ ಮಠದ ಆಸ್ತಿಯನ್ನು ಕಬಳಿಸುವ ಉದ್ದೇಶ ಹೊಂದಿದ್ದಾರೆಂದು ಅವರು ಹೇಳಿರುವುದು ಕೂಡ ಸತ್ಯಕ್ಕೆ ದೂರಾಗಿದ್ದು ಅದನ್ನು ನಾವು ನಿರಾಕರಿಸುತ್ತೇವೆ. ೧೯೯೯ರ ನಂತರ ಶ್ರೀ ಶಂಕರಾಶ್ರಮ ಸ್ವಾಮಿಗಳು ಮುಕ್ತರಾದ ನಂತರ ಸುಮಾರು ೬ ವರ್ಷಗಳ ಕಾಲ ಶ್ರೀ ಮಠದ ಪೂಜಾ ಕೈಂಕರ್ಯ, ಚರ-ಸ್ಥಿರ ಆಸ್ತಿಗಳ ನಿರ್ವಹಣೆಯನ್ನು ಇದೇ ಶಿಷ್ಯ ವರ್ಗದವರು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದರು. ಆನಂತರ ಶಿಷ್ಯವರ್ಗದವರೇ ಸೂಕ್ತವಾದ ವ್ಯಕ್ತಿಯನ್ನು ಪೀಠಾಧಿಪತಿಯನ್ನಾಗಿ ನೇಮಿಸಿ ಶ್ರೀ ಮಠದ ಸಮಸ್ತ ಜವಾಬ್ದಾರಿಗಳನ್ನು ಅವರಿಗೆ ನೀಡಿರುತ್ತೇವೆ. ಆಗಲೇ ಇಲ್ಲದ ಆಸ್ತಿ ಕಬಳಿಕೆಯ ದುರಾಸೆ ಶಿಷ್ಯರಿಗೆ ಈಗ ಬರಲು ಸಾಧ್ಯವೇ? ಆದ್ದರಿಂದ ಈಗಿನ ಅನಧೀಕೃತ ಪೀಠಾಧಿಪತಿಗಳು ಹಾಗೂ ಅವರ ಸಂಗಡಿಗರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ ಹಾಗೂ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹಿತರಕ್ಷಣಾ ಸಮಿತಿ (ರಿ.)ಯ ಶ್ರೀನಿವಾಸ ಬಾಯರಿ, ಮಂಜುನಾಥ ಭಟ್, ಉಮೇಶ್ ಬಾಯರಿ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page