udupimitra.in
  • November 19, 2026
  • Last Update November 19, 2026 4:55 am
  • Brahmavara

ಸುಜ್ಞಾನ ವಿದ್ಯಾ ಸಂಸ್ಥೆ ಆವರಣದಲ್ಲಿ ಸಂಭ್ರಮದ ದೀಪಾವಳಿ

ಸುಜ್ಞಾನ ವಿದ್ಯಾ ಸಂಸ್ಥೆ ಆವರಣದಲ್ಲಿ ಸಂಭ್ರಮದ ದೀಪಾವಳಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಕುಂದಾಪುರ: ಸುಜ್ಞಾನ ಎಜುಕೇಶನ್ ಟ್ರಸ್ಟ್‌ನ ವಿದ್ಯಾರಣ್ಯ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಗೆ ನಮ್ಮ ಎಲ್ಲಾ ಹಬ್ಬಗಳನ್ನು ಪರಿಚಯಿಸುವ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ. ಸುಜ್ಞಾನ ಸಂಸ್ಥೆಯಂತೆ ಪೋಷಕರು ತಮ್ಮ ಮಕ್ಕಳಿಗೆ ನಮ್ಮಸಂಸ್ಕೃತಿ, ಆಚರಣೆ, ನಾವು ಆಚರಿಸಿಕೊಂಡು ಬಂದ ಎಲ್ಲಾ ಹಬ್ಬಗಳನ್ನು ಪರಿಚಯಿಸುವುದರೊಂದಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡಿಡುವುದಕ್ಕಿಂತ ಉತ್ತಮ ಸಂಸ್ಕಾರ ನೀಡುವುದು ಅತ್ಯಂತ ಶ್ರೇಷ್ಠ. ಸಂಸ್ಕಾರವೇ ಮಕ್ಕಳ ಬದುಕಿನ ನಿಜವಾದ ಆಸ್ತಿ ಎಂದು ಯಡೂರು ಹೊಸನಗರ ತಾಲೂಕು ಸಮೂಹ ಸಂಪನ್ಮೂಲ ವ್ಯಕ್ತಿ, ಶಿಕ್ಷಕಿ ಹಾಗೂ ಸಾಹಿತಿ ರೇಖಾ ಪ್ರಭಾಕರ್ ಹೇಳಿದರು.
ನ. ೧೮ರಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಯಡಾಡಿ- ಮತ್ಯಾಡಿ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ಸುಜ್ಞಾನ ದೀಪಾವಳಿ-೨೦೨೬ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ದೀಪಾವಳಿ ಹಬ್ಬವೆಂದರೆ ಕೇವಲ ದೀಪ ಹಚ್ಚಿ ಸಂಭ್ರಮಿಸುವ ಹಬ್ಬವಲ್ಲ. ಅದರ ಹಿಂದೆ ಪೌರಾಣಿಕ ಪರಂಪರೆ, ಕೃಷಿ ಸಂಸ್ಕೃತಿ, ಪ್ರಕೃತಿ ಆರಾಧನೆ ಮತ್ತು ಕೃತಜ್ಞತೆಯ ಭಾವನೆ ಅಡಕವಾಗಿದೆ. ಆದ್ದರಿಂದ ಇಂತಹ ಸಂಪ್ರದಾಯಗಳ ಹಿಂದಿನ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ತಂದೆ-ತಾಯಿಯ ತ್ಯಾಗ ಮತ್ತು ಪರಿಶ್ರಮವನ್ನು ಅರಿತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಸಾಧನೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಸಾಧಕ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿರುವ ಸುಜ್ಞಾನ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.


ವಿದ್ಯಾರ್ಥಿಗಳು ತಂದೆ ತಾಯಿಯ ತ್ಯಾಗವನ್ನು ಗಮನದಲ್ಲಿಟ್ಟುಕೊಳ್ಳಬೇಕು – ಭರತ್ ಶೆಟ್ಟಿ
ಸುಜ್ಞಾನ ಎಜುಕೇಶನ್ ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯೊಂದಿಗೆ ಹಬ್ಬ ಆಚರಿಸಲು ಈ ಬಾರಿ ರಜೆ ನೀಡಲಾಗಿದ್ದರೂ, ಕ್ಯಾಂಪಸ್‌ನ ದೀಪಾವಳಿ ಸಂಭ್ರಮದಿಂದ ಅವರು ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ತಂದೆ-ತಾಯಿಯರೂ ತಮ್ಮ ಆಸೆ-ಆಕಾಂಕ್ಷೆಗಳನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡುತ್ತಾರೆ. ತಂದೆ ತಾಯಿಯ ತ್ಯಾಗವನ್ನು ಮಕ್ಕಳು ಗಮನದಲ್ಲಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸನ್ನಡತೆ ಮತ್ತು ಸಂಸ್ಕಾರ ಬೆಳೆಸಿಕೊಂಡು ಪೋಷಕರ ಕನಸುಗಳನ್ನು ನನಸಾಗಿಸಬೇಕು ಎಂದರು.

ಶಿಕ್ಷಣದೊಂದಿಗೆ ಸಂಸ್ಕೃತಿ, ಮೌಲ್ಯಗಳ ಬೆಳವಣಿಗೆಗೆ ಆದ್ಯತೆ: ಡಾ. ರಮೇಶ್ ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಸುಜ್ಞಾನ ಸಂಸ್ಥೆ ಮಕ್ಕಳ ಮನಸ್ಸನ್ನು ಕಟ್ಟುವ ಕೆಲಸ, ಭಾರತೀಯ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿದ್ದು ಇದಕ್ಕೆ ಪೊಷಕರ , ಊರವರ ಬೆಂಬಲ ನಮಗೆ ದೊರಕಿದೆ. ಸುಜ್ಞಾನ ಸಂಸ್ಥೆಯಲ್ಲಿ ನಮ್ಮ ಸಂಸ್ಕೃತಿಯ ಎಲ್ಲಾ ಆಚರಣೆಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಇದೆ. ವಿದ್ಯಾರ್ಥಿಗಳು ನಾಳೆ ಯಾವುದೇ ಹುದ್ದೆಗೆ ಹೋದರೂ ನಮ್ಮ ಸಂಸ್ಕೃತಿ ಮರೆಯಬಾರದು. ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಮನೆಯ ಹಬ್ಬದ ವಾತಾವರಣದ ಅನುಭವ ನೀಡುವುದೂ ಸಂಸ್ಥೆಯ ಉದ್ದೇಶವಾಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರು, ಪಾಲಕರು, ಸ್ಥಳೀಯರು ಹಾಗೂ ಹಿತೈಷಿಗಳ ಸಹಕಾರ ಮಹತ್ವದ್ದಾಗಿದ್ದು, ಮುಂದೆಯೂ ಎಲ್ಲರ ಬೆಂಬಲ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ., ಸ್ಥಳಿಯ ಅನೇಕ ಗಣ್ಯರು, ಹಿತೈಷಿಗಳು, ಉಪನ್ಯಾಸಕರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಜತ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page