udupimitra.in
  • October 31, 2026
  • Last Update October 30, 2026 4:44 pm
  • Brahmavara

ಹಿರಿಯ ಭಾಗವತ ಗೋಪಾಲ ಗಾಣಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಹಿರಿಯ ಭಾಗವತ ಗೋಪಾಲ ಗಾಣಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • ವರದಿ : ಚಿತ್ತೂರು ಪ್ರಭಾಕರ ಆಚಾರ್ಯ , * ಉಡುಪಿಮಿತ್ರ ಪತ್ರಿಕೆ ಸುದ್ಧಿ :
    ಕುಂದಾಪುರ, ಅ.೩೦: ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಭಾಗವತ ಹಾಗೂ ಯಕ್ಷಗುರು ಹೇರಂಜಾಲು ಗೋಪಾಲ ಗಾಣಿಗ ಅವರು ಕರ್ನಾಟಕ ಸರ್ಕಾರದ ೨೦೨೬ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಬೈಂದೂರು ತಾಲೂಕಿನ ಹೇರಂಜಾಲು ಗ್ರಾಮದವರಾದ ಗೋಪಾಲ ಗಾಣಿಗರು ತಮ್ಮ ಸುಮಧುರ ಕಂಠಸಿರಿ, ರಾಗತಾಳಗಳ ಮೇಲಿನ ಅದ್ಭುತ ಹಿಡಿತ, ಲಯಬದ್ಧ ಭಾಗವತಿಕೆ ಹಾಗೂ ಸಂಪ್ರದಾಯಬದ್ಧ ಹಾಡುಗಾರಿಕೆಯ ಮೂಲಕ ಯಕ್ಷರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದವರು.


ನಾಲ್ಕು ಶತಮಾನಗಳ ಯಕ್ಷ ಪಾರಂಪರ್ಯ:
೧೯೬೩ರಲ್ಲಿ ಕುಂದಾಪುರ ತಾಲೂಕಿನ ನಾಗೂರಿನಲ್ಲಿ ಜನಿಸಿದ ಇವರು ಯಕ್ಷಗಾನದ ವಾತಾವರಣದಲ್ಲೇ ಬೆಳೆದರು. ಇವರ ತಂದೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಹೇರಂಜಾಲು ವೆಂಕಟರಮಣ ಗಾಣಿಗರು ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾಗಿ, ಕಲಾವಿದರಾಗಿ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಸುಮಾರು ನಾಲ್ಕು ಶತಮಾನಗಳ ಸುದೀರ್ಘ ಯಕ್ಷಗಾನ ಪರಂಪರೆಯನ್ನು ಹೊಂದಿರುವ ಹೇರಂಜಾಲು ಕುಟುಂಬದ ಗೋಪಾಲ ಗಾಣಿಗರನ್ನು ಬಾಲ್ಯದಲ್ಲೇ ಯಕ್ಷರಂಗ ಆಕರ್ಷಿಸಿತ್ತು. ತಂದೆಯಿಂದಲೇ ನೃತ್ಯಾಭ್ಯಾಸ ಕಲಿತು ಅಭಿಮನ್ಯು, ಪ್ರಹ್ಲಾದ, ಕೃಷ್ಣ, ವೃಷಸೇನ ಮುಂತಾದ ಬಾಲಪಾತ್ರಗಳ ಮೂಲಕ ರಂಗಪ್ರವೇಶ ಮಾಡಿದರು.
ನಂತರ ಉಡುಪಿ ಯಕ್ಷಗಾನ ಕೇಂದ್ರ ಸೇರಿ ನೀಲಾವರ ರಾಮಕೃಷ್ಣಯ್ಯರಿಂದ ಭಾಗವತಿಕೆ, ಮಹಾಬಲ ಕಾರಂತರಿಂದ ಮದ್ದಳೆ ಹಾಗೂ ತಂದೆಯಿಂದ ನೃತ್ಯ ಶಿಕ್ಷಣ ಪಡೆದು ಬಹುಮುಖ ಕಲಾವಿದರಾಗಿ ರೂಪುಗೊಂಡರು. ಮಾರಣಕಟ್ಟೆ, ಅಮೃತೇಶ್ವರಿ, ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಶಿರಸಿ, ಸೌಕೂರು ಸೇರಿದಂತೆ ವಿವಿಧ ಪ್ರಸಿದ್ಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಸಾಲಿಗ್ರಾಮ ಮೇಳದಲ್ಲಿ ಇವರ ಭಾಗವತಿಕೆಯಲ್ಲಿ ಮೂಡಿಬಂದ ‘ಈಶ್ವರಿ ಪರಮೇಶ್ವರಿ, ‘ಶಂಕರಿ ಶಿವಶಂಕರಿ, ‘ರಂಗನಾಯಕಿ ಮುಂತಾದ ಪ್ರಸಂಗಗಳು ಯಕ್ಷರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದವು.
ಹೇರಂಜಾಲು ಶೈಲಿಯ ಸೃಷ್ಟಿ:
ರಾಮಾಯಣದ ಪಾರ್ಥಿಸುಬ್ಬ ವಿರಚಿತ ಪ್ರಸಂಗಗಳು, ಮಹಾಭಾರತದ ಗಂಭೀರ ಕಥಾವಸ್ತು ಹಾಗೂ ಭಾಗವತದ ಭಕ್ತಿಪ್ರಧಾನ ಸಂದರ್ಭಗಳನ್ನು ಪ್ರಸಂಗದ ಆಶಯಕ್ಕೆ ತಕ್ಕಂತೆ ಸಮರ್ಥವಾಗಿ ನಿರೂಪಿಸುವ ಕಲೆ ಇವರಿಗೆ ಸಿದ್ಧಿಸಿದೆ. ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳ ಭಾಗವತಿಕೆಯಲ್ಲಿ ‘ಹೇರಂಜಾಲು ಶೈಲಿ ಎಂದೇ ಪ್ರಸಿದ್ಧವಾದ ವಿಶಿಷ್ಟ ಬಾಳಕೆಯನ್ನು ಇವರು ರೂಪಿಸಿದ್ದಾರೆ.
ಸಾಹಿತ್ಯ ಹಾಗೂ ತರಬೇತಿ ಕ್ಷೇತ್ರದಲ್ಲೂ ಸೇವೆ:
ಗುರು ಹಾಗೂ ಭಾಗವತರಾಗಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕೊಡುಗೆ ನೀಡಿರುವ ಇವರು ಖರದೂಷಣ ಕಾಳಗ, ಚೂಡಾಮಣಿ, ವಾಲಿ ಸುಗ್ರೀವ ಹಾಗೂ ಇಂದ್ರಜಿತು ಪ್ರಸಂಗ ಕೃತಿಗಳನ್ನು ಪ್ರಕಟಿಸಿದ್ದಾರೆ. ಮುದ್ದಣ ಕವಿಯ ರತ್ನಾವತಿ ಕಲ್ಯಾಣ ಸೇರಿದಂತೆ ಇತರ ಪ್ರಸಂಗಗಳ ಅರ್ಥಸಹಿತ ಗ್ರಂಥಗಳನ್ನು ಸಿದ್ಧಪಡಿಸುವ ಕಾಯಕದಲ್ಲೂ ನಿರತರಾಗಿದ್ದಾರೆ.
ಮುಂದಿನ ಪೀಳಿಗೆಗೆ ಕಲೆಯನ್ನು ಉಚಿತವಾಗಿ ದಾನ ಮಾಡುವ ಉದ್ದೇಶದಿಂದ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ (ರಿ.) ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಭಾಗವತಿಕೆ, ತಾಳ, ಲಯ ಹಾಗೂ ಸಾಹಿತ್ಯದ ಉಚಿತ ತರಬೇತಿ ನೀಡುತ್ತಾ ಹೊಸ ಪ್ರತಿಭೆಗಳನ್ನು ರೂಪಿಸುತ್ತಿದ್ದಾರೆ.
ಪ್ರಶಸ್ತಿಗಳ ಗರಿ:
ಇವರ ಸುದೀರ್ಘ ಕಲಾಸೇವೆಗೆ ಈಗಾಗಲೇ ಜಾನಪದ ಲೋಕ ಪ್ರಶಸ್ತಿ, ೨೦೨೫ನೇ ಸಾಲಿನ ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಇದೀಗ ಕರ್ನಾಟಕ ಸರ್ಕಾರ ೨೦೨೬ರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇವರ ಅಪಾರ ಕಲಾ ಸೇವೆಗೆ ಸಂದ ಅರ್ಹ ಮನ್ನಣೆಯಾಗಿದೆ

administrator

Related Articles

Leave a Reply

Your email address will not be published. Required fields are marked *

You cannot copy content of this page