ಉಡುಪಿ ಮಿತ್ರ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಜೂ. 17: ಯಾವುದೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಲಕೂಡಿ ಬರಬೇಕು. ಅನೇಕ ದೇವಸ್ಥಾನಗಳಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿ ಜೀರ್ಣೋದ್ಧಾರಕ್ಕೆ ನಿರ್ಧರಿಸಿದರೂ ಕಾರ್ಯಗಳು ಮುಂದೆ ಸಾಗುವುದಿಲ್ಲ. ಆದರೆ ಬಾರ್ಕೂರಿನ ಪುರಾತನ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ, ಪ್ರಾಯಶ್ಚಿತ್ತ ಕರ್ಮಾಂಗಗಳು ನೆರವೇರಿದ್ದು, ಇದೀಗ ಮುಷ್ಟಿ ಕಾಣಿಕೆ ಸಮರ್ಪಣೆಯೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ಶುಭಾರಂಭವಾಗಿದೆ ಎಂದು ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಹೇಳಿದರು.

ಅವರು ಬಾರ್ಕೂರಿನ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಮನವಿಪತ್ರ ಬಿಡುಗಡೆ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ವಹಿಸಿದ್ದರು. ಅವರು ಮಾತನಾಡಿ, ತುಳುನಾಡಿನ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನ ರಾಜಮನೆತನದ ಆರಾಧ್ಯ ದೈವವಾಗಿದ್ದು, ದೇವಸ್ಥಾನದ ಹಿಂದಿನ ವೈಭವವನ್ನು ಮರುಸ್ಥಾಪಿಸುವ ಉದ್ದೇಶದಿಂದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಪುಣ್ಯ ಕಾರ್ಯಕ್ಕೆ ಉದ್ಯಮಿಗಳು ಹಾಗೂ ಊರಿನ ಸಮಸ್ತ ಜನತೆ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಾರ್ಕೂರು ಚರ್ಚಿನ ಧರ್ಮಗುರು ರೋನಾಲ್ಡ್ ಮಿರಾಂದ, ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಹಾಗೂ ಪತ್ರಕರ್ತ ಕೆ.ಸಿ. ರಾಜೇಶ್ ಶುಭ ಹಾರೈಸಿ, ಭಕ್ತಾದಿಗಳು ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಗೌರವಾಧ್ಯಕ್ಷರಾದ ಆಕಾಶ್ ರಾಜ್ ಜೈನ್ ಹಾಗೂ ಉದ್ಯಮಿ ವಿಠಲ ಹೆಗ್ಡೆ ಬೆಳಗಾವಿ, ಬೆಂಗಳೂರಿನ ಹೋಟೆಲ್ ಉದ್ಯಮಿ ಸುಧಾಕರ ಸೂರಾಲು, ಉದ್ಯಮಿ ವಿಜಯ ಶೆಟ್ಟಿ ಹವರಾಲು, ಉಪಾಧ್ಯಕ್ಷರಾದ ಶ್ರೀನಿವಾಸ ಶೆಟ್ಟಿಗಾರ್ ರಂಗನಕೇರಿ ಮತ್ತು ಕೆ. ಚಂದ್ರಶೇಖರ ಶೆಟ್ಟಿ ಬಾರ್ಕೂರು, ಜ್ಯೋತಿಷಿ ರಮೇಶ್ ಭಟ್, ಏಕನಾಥೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ ಅಜ್ಜಿಮನೆ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹಾಗೂ ದೇವಸ್ಥಾನದ ಮೊಕ್ತೇಸರ ಮಂಜುನಾಥ ರಾವ್ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ವಂದಿಸಿದರು. ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಮುಷ್ಟಿ ಕಾಣಿಕೆ ಸಮರ್ಪಣೆಯ ಅಂಗವಾಗಿ ಗಣಹೋಮ, ರೇವಂತ ಸ್ವಾಮಿ ಪೂಜೆ ನೆರವೇರಿತು. ಬೆಳಿಗ್ಗೆ 11.30ಕ್ಕೆ ಮಹಾಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.



