• March 26, 2026
  • Last Update March 24, 2026 3:28 pm
  • Brahmavara

ಆಳ್ವಾಸ್ ಕಾರ್ಯಕ್ರಮದಿಂದ ಸಂದೇಶವನ್ನೂ ನೀಡುತ್ತಿದ್ದೇವೆ : ಡಾ.ಮೋಹನ್ ಆಳ್ವ

ಆಳ್ವಾಸ್ ಕಾರ್ಯಕ್ರಮದಿಂದ  ಸಂದೇಶವನ್ನೂ ನೀಡುತ್ತಿದ್ದೇವೆ : ಡಾ.ಮೋಹನ್ ಆಳ್ವ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ:
ಬ್ರಹ್ಮಾವರ ಜ.೨೭:

ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದಿಂದ ಕೇವಲ ಮನರಂಜನೆ ಮಾತ್ರ ನೀಡುತ್ತಿಲ್ಲ. ನಮ್ಮ ಕಾರ್ಯಕ್ರಮದಿಂದ ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಬೇಕೆಂಬ ಸಂದೇಶವನ್ನು ನೀಡುತ್ತಿದ್ದೇವೆ. ಭಾರತದಲ್ಲಿರುವಷ್ಟು ಮಾನವ ಸಂಪತ್ತು ಯಾವ ದೇಶದಲ್ಲೂ ಇಲ್ಲ. ೧೪೦ ಕೋಟಿ ಜನಸಂಖ್ಯೆ ಇರುವ ನಮ್ಮ ದೇಶವನ್ನು ಸಾಂಸ್ಕೃತಿಕ ಚಟುವಟಿಕೆಯಿಂದಲೂ ಗುರುತಿಸುತ್ತಾರೆ. ನಮ್ಮ ದೇಶದ ಸಾಂಸ್ಕೃತಿಕ ಚಟುವಟಿಕೆಗೆ ಸಾಕಷ್ಟು ಹಿರಿಮೆ ಇದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು. ಅವರು, ಆಳ್ವಾಸ್ ನುಡಿಸಿರಿ ವಿರಾಸತ್ ಬ್ರಹ್ಮಾವರ ಘಟಕ ಮತ್ತು ಬ್ರಹ್ಮಾವರ ಫೌಂಡೇಶನ್ (ರಿ.) ಆಶ್ರಯದಲ್ಲಿ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಕೀರ್ತಿ ಶೇಷ ಡಾ.ಬಿ.ಬಿ.ಶೆಟ್ಟಿ ವೇದಿಕೆಯಲ್ಲಿ ಮಂಗಳವಾರ ನಡೆದ ಆಳ್ವಾಸ್ ಸಾಂಸ್ಕ್ರತಿಕ ವೈಭವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಾಗರೀಕತೆ ಬಂದು ೫ಸಾವಿರ ವರ್ಷಗಳಾಗಿವೆ. ಈ ನಾಗರೀಕತೆಯ ಕಾಲದಲ್ಲಿ ಸುಮಾರು ೩೬ಸಾವಿರ ರಾಗಗಳನ್ನು ಕಂಡು ಹಿಡಿಯಲಾಗಿದೆ. ಅದಕ್ಕೆ ಪೂರಕವಾಗಿ ಸಾಕಷ್ಟು ವಾದ್ಯ ಪರಿಕರಗಳನ್ನು ಕೂಡ ಕಂಡು ಹಿಡಿಯಲಾಗಿದೆ. ಈ ಎಲ್ಲವನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆಳ್ವಾಸ್ ನುಡಿಸಿರಿ ವಿರಾಸತ್‌ನ ಒಟ್ಟು ೮೮ಘಟಕಗಳನ್ನು ಮಾಡಿದ್ದೇವೆ. ಈ ಮೂಲಕ ಭಾರತದ ಸಾಂಸ್ಕೃತಿಕ ವೈಭವವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣೂರು ಜನತಾ ಫಿಶ್ ಮೀಲ್ & ಆಯಿಲ್ ಪ್ರಾಡಕ್ಟ್‌ನ ಮಾಲೀಕ ಆನಂದ ಸಿ. ಕುಂದರ್ ಮಾತನಾಡಿ, ಮನಸೂರೆಗೊಳ್ಳುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಆ ಕಾರ್ಯಕ್ರಮದಲ್ಲಿನ ಶಿಸ್ತು ಮತ್ತು ವಿಭಿನ್ನತೆ, ತಮ್ಮಲ್ಲಿರುವ ೩೫೦೦೦ ವಿದ್ಯಾರ್ಥಿಗಳಲ್ಲಿ ಆಸಕ್ತರನ್ನು ಶಿಸ್ತುಬದ್ದ ಕಲಾಶಿಲ್ಪಗಳನ್ನಾಗಿ ತಯಾರಿಸಿದ ಕೀರ್ತಿ ಶ್ರೀಯುತ ಮೋಹನ್ ಆಳ್ವರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ಮತ್ತು ಚಿಂತಕರಾದ ಡಾ.ನಿಕೇತನ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಡಾ. ಮೋಹನ್ ಆಳ್ವಾ ಮಾಡಿದ್ದಾರೆ. ಕಲೆಗೆ ಮಾತ್ರ ನಮ್ಮ ಜಂಜಾಟವನ್ನು ಮರೆಸುವ ಹಾಗೂ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ ಎಂದರು.
ಆರೂರು ತಿಮ್ಮಪ್ಪ ಶೆಟ್ಟಿ ಮಾತನಾಡಿ ಭಾರತದ ಸಂಸ್ಕೃತಿಯನ್ನು ಆಳ್ವಾಸ್ ಸಂಸ್ಥೆ ಪ್ರಪಂಚಕ್ಕೆ ತೋರಿಸಿಕೊಟ್ಟಿದೆ ಎಂದರು.


ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು,ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಅಧ್ಯಕ್ಷ ಉದಯ್ ಹೆಗ್ಡೆ,, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ , ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಅಶೋಕ ಭಟ್, ಉದ್ಯಮಿ ಶಾಂತಾರಾಮ ಏಟ್ಟಿ ಬಾರಕೂರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ಬಿಲ್ಲವ ಮಹಾಮಂಡಲದ ರಾಷ್ಟ್ರೀಯ ಉಪಾಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಎಚ್. ಸುದರ್ಶನ್ ಹೆಗ್ಡೆ, ಬಾರಕೂರು ಕಚ್ಚೂರು ಶ್ರೀ ಕ್ಷೇತ್ರದ ಗೊಕುಲ್‌ದಾಸ್ ಬಾರಕೂರು, ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್. ನಿತ್ಯಾನಂದ ಶೆಟ್ಟಿ, ಜಿ.ಎಮ್.ಎಜ್ಯುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರಿ, ಬ್ರಹ್ಮಾವರ ಲಯನ್ಸ್ ಅಧ್ಯಕ್ಷ ಕೆ. ಸುದೇಶ್ ಹೆಗ್ಡೆ, ಎಸ್.ಎಮ್.ಎಸ್. ಕೆಥೆಡ್ರಲ್ ಸಹಾಯಕ ಗುರುಗಳಾದ ರೆವರೆಂಡ್ ಫಾದರ್ ಡೇವಿಡ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಫೌಂಡೇಶನ್ (ರಿ.) ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page