ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ,ಏಪ್ರಿಲ್ 20:
ಶತಮಾನಕ್ಕೆ ಸಾಕ್ಷಿಯಾಗಿ ಮಂದಾರ್ತಿ ಸಹಕಾರಿ ಸಂಘ ನಿಂತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮಂಕಾದರೂ ಸಹಕಾರಿ ಸಂಘಗಳು ಗ್ರಾಮೀಣ ಜನರಿಗೆ ಸಾಲ ನೀಡುವುದರ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ, ಸ್ವಾವಲಂಬನೆಗೆ ಕಾರಣವಾಗಿವೆ. ಮಂದಾರ್ತಿ ಸಹಕಾರ ಸಂಘ ಕೂಡ ೫ ಗ್ರಾಮಗಳ ಜನರ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ನೀಡಿದೆ. ಈ ಸಂಘದ ಬೆಳೆವಣಿಗೆಗೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಕಾರಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ನುಡಿದರು. ಅವರು ಮಂದಾರ್ತಿ ಸೇವಾ ಸಹಕಾರ ಸಂಘದ ಬಿಲ್ಲಾಡಿ ಶಾಖೆಯ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡುತ್ತಾ ಸಂಘ ಶತಮಾನ ಪೂರೈಸಿದ್ದು ಆರ್ಥಿಕವಾಗಿ ಬಲಿಷ್ಠವಾಗಿದೆ. ಸಹಕಾರಿ ಸಂಘ ಬಲಿಷ್ಟವಾದಲ್ಲಿ ಹಳ್ಳಿಯ ಜನರಿಗೆ ಇದರಿಂದ ಸೌಲಭ್ಯ ಪಡೆಯಲು ಸಾಧ್ಯ. ಉಡುಪಿ ದ.ಕ ಜಿಲ್ಲೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರಾರಂಭಗೊಂಡ ಜಿಲ್ಲೆಗಳು. ಇಂದು ಆ ಬ್ಯಾಂಕ್‌ಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಸಹಕಾರಿ ಸಂಘಗಳೇ ಜನರಿಗೆ ಹೆಚ್ಚು ಸಹಕಾರ ಕೊಡುತ್ತಿವೆ ಎಂದು ನುಡಿದರು.

ಸಭಾಧ್ಯಕ್ಷತೆಯನ್ನು ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಗಂಗಾಧರ ಶೆಟ್ಟಿ ವಹಿಸಿದ್ದು ಅವರು ಮಾತನಾಡಿ ಮದ್ರಾಸ್ ಸರಕಾರ ಇದ್ದಾಗ ನೊಂದಣಿಯಾಗಿ ಆರಂಭಗೊಂಡ ಮಂದಾರ್ತಿ ಸಂಘ 2000ನೇ ಇಸವಿಯಿಂದ ಲಾಭಕ್ಕೆ ಬಂದಿದ್ದು ಪ್ರಸ್ತುತ ಸದಸ್ಯರಿಗೆ 18 % ಡಿವಿಡೆಂಡ್ ಕೊಡುತ್ತಾ ಬಂದಿದೆ. ಎಲ್ಲರ ಸಹಕಾರದಲ್ಲಿ ಸಂಸ್ಥೆ ಇಂದು ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. ಪ್ರಸ್ತುತ 2024ರಲ್ಲಿ ನಮ್ಮಸಂಸ್ಥೆ ಶತಮಾನ ಕಂಡು ಮುಂದುವರಿಯುತ್ತಿದೆ. ಹೆಗ್ಗುಂಜೆ, ನಡೂರು, ಶಿರೂರು ಗ್ರಾಮಗಳಲ್ಲಿ ಶಾಖೆ ಹೊಂದಿದ್ದು ಬಿಲ್ಲಾಡಿಯಲ್ಲಿ 4ನೇ ಶಾಖೆ ಉದ್ಘಾಟಿಸಿದೆ. ಈ ಶಾಖೆಯಲ್ಲಿ 2 ಕೋಟಿ 78ಲಕ್ಷ ಠೇವಣಿ ಸಂಗ್ರಹಿಸಲಾಗಿದೆ ಎಂದರು.

ಭದ್ರತಾಕೋಶವನ್ನು ದ.ಕ. ಜಿ.ಕೇ.ಸ.ಬ್ಯಾಂಕ್ ನಿರ್ದೇಶಕ ಬೆಳಪು ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಹಕಾರಿ ಸಂಘಗಳು ಸದಸ್ಯರಿಗೆ ಅತಿಶೀಘ್ರ ಸಾಲ ನೀಡುತ್ತವೆ. ರೈತಾಪಿ ವರ್ಗದವರಿಗೆ ನಾವು ೦% ಸಾಲ ಕೊಡುತ್ತೇವೆ. ಆದರೆ ಸರಕಾರ ಬಡ್ಡಿ ಕೊಡುವಾಗ ಸಾಕಷ್ಟು ವಿಳಂಬ ಮಾಡುತ್ತಿದೆ. ಅಂದು ಆಣೆಯಿಂದ ಆರ್ಥಿಕ ವ್ಯವಹಾರ ಆರಂಭಿಸಿದ ಮಂದಾರ್ತಿ ಸಹಕಾರಿ ಸಂಘ ಇಂದು ಜಿಲ್ಲೆಯಲ್ಲಿ ಉತ್ತಮ ಸಹಕಾರಿ ಸಂಘವಾಗಿ ಬೆಳೆದಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಗೋದಾಮು ಉದ್ಘಾಟಿಸಿದರು. ಕಂಪ್ಯೂಟರನ್ನು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ (ನಿ.), ಬಿ.ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಉದ್ಘಾಟಿಸಿದರು. ಸಾಲಪತ್ರವನ್ನು ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಚ್.ವಿಠಲ ಶೆಟ್ಟಿ, ಉಳಿತಾಯ ಖಾತೆ ಪುಸ್ತಕವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್‌ರಾವ್ ವಿತರಿಸಿದರು. ಠೇವಣಿ ಪತ್ರವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬೆಳ್ಳಂಪಳ್ಳಿ ಅಶೋಕ್ ಕುಮಾರ್ ಶೆಟ್ಟಿ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಕೆ.ಆರ್.ಲಾವಣ್ಯ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ನಿರ್ದೇಶಕರಾದ ಶಂಭು ಶಂಕರ ರಾವ್, ಜಲಂಧರ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ಕುಮಾರ್, ಚಂದ್ರಶೇಖರ, ಪ್ರಥ್ವಿರಾಜ್ ಆರ್.ಶೆಟ್ಟಿ, ಶ್ರೀಮತಿ ಪ್ರೇಮ, ಶ್ರೀಮತಿ ಗುಲಾಬಿ, ಬಸವ ನಾಯ್ಕ್, ಶ್ರೀಮತಿ ರಾಧ, ಪ್ರವೀಣ್ ಕುಮಾರ್ ಶೆಟ್ಟಿ, ಗುರುಪ್ರಸಾದ್, ಶಾಖಾ ವ್ಯವಸ್ಥಾಪಕ ವಿಜಯ ಹಾಗೂ ದ.ಕ.ಜಿ.ಕೇಂ.ಸ. ಬ್ಯಾಂಕ್ ಪ್ರತಿನಿಧಿ ರಾಜಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಕಟ್ಟಡ ಕಾಮಗಾರಿ ನೆರವೇರಿಸಿದ ಗುತ್ತಿಗೆದಾರ ಗಣೇಶ್ ಪ್ರಸಾದ್ ಶೆಟ್ಟಿ, ಸಿವಿಲ್ ಇಂಜೀನಿಯರ್ ಅಕ್ಷಯ್ ಹೆಗ್ಡೆ, ನಿವೇಶನವನ್ನು ರಿಯಾಯಿತಿ ದರದಲ್ಲಿ ನೀಡಿದ ಉದ್ಯಮಿ ಸುದೇಶ್ ಹೆಗ್ಡೆಯವನ್ನು ಸನ್ಮಾನಿಸಲಾಯಿತು.
ಉಜ್ವಲ ಹಾಗೂ ಪ್ರಕೃತಿ ಸ್ವಸಹಾಯ ಸಂಘಗಳಿಗೆ ಪುಸ್ತಕ ನೀಡಿ ಉದ್ಘಾಟಿಸಲಾಯಿತು. ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಸಹಾಯಧನ ನೀಡಲಾಯಿತು.
ಸಂಘದ ನಿರ್ದೇಶಕ ಬಿಲ್ಲಾಡಿ ಪ್ರಥ್ವಿರಾಜ್ ಆರ್.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ಶೆಟ್ಟಿ ವಂದಿಸಿದರು. ಶಿಕ್ಷಕ ಹಾವಂಜೆ ಪ್ರಶಾಂತ್ ಶೆಟ್ಟಿ ನಿರೂಪಿಸಿದರು.



