ಉಡುಪಿಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಮಂದಾರ್ತಿ, ಸೆ.೦೬: ಯಕ್ಷಗಾನ ನಶಿಸಿ ಹೋಗುವ ಕಲೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಈ ಕಲೆಯನ್ನು ಕಳೆದ 7೦ ವರ್ಷಗಳಿಂದ ನಾನು ನೋಡುತ್ತಿದ್ದೇನೆ. ಈ ಕಲೆ ಉತ್ತಮ ಸ್ಥಿತಿಯಲ್ಲಿದ್ದು ಕಲಾವಿದರಿಂದ ಶ್ರೀಮಂತವಾಗುತ್ತಿದ್ದು ದೇಶ ವಿದೇಶಗಳಲ್ಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಮೋಹನ್ ಆಳ್ವಾ ನುಡಿದರು. ಅವರು ಮಂದಾರ್ತಿ ದುರ್ಗಾ ಸಭಾಭವನದಲ್ಲಿ ನಡೆದ ಯಕ್ಷ ನಕ್ಷತ್ರ ಟ್ರಸ್ಟ್ (ರಿ.) ಕಿರಾಡಿ ಉತ್ವವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ನಾನು ಸಚಿವನಾಗಿದ್ದ ಸಂದರ್ಭ ನನ್ನ ಇತಿಮಿತಿಯೊಳಗೆ ಯಕ್ಷಗಾನ ಕಲೆಗೆ ಸಹಕಾರವನ್ನು ನೀಡಿದ್ದೇನೆ. ಯಕ್ಷಗಾನ ಒಂದು ಸಮೃದ್ಧ ಕಲೆ. ಆದ್ದರಿಂದ ಮನೆಗೊಬ್ಬ ಯಕ್ಷಗಾನ ಕಲಾವಿದರು ಹುಟ್ಟಿ ಬರುವಂತಾಗಬೇಕು. ಯಕ್ಷಗಾನ ಕಲೆಯ ಆಳವನ್ನು ಅರ್ಥ ಮಾಡಿಕೊಂಡ ಯಾವುದೇ ವ್ಯಕ್ತಿ ಬದುಕಿನಲ್ಲಿ ತಪ್ಪನ್ನು ಕಡಿಮೆ ಮಾಡಲಿದ್ದಾನೆ. ಯಕ್ಷಗಾನ ಕಲಾವಿದ ಕಿರಾಡಿಯವರು ತಮ್ಮ ಟ್ರಸ್ಟ್ ಮೂಲಕ ಕಲಾವಿದರನ್ನು ಗುರುತಿಸಿ ಗೌರವಿಸುವ ಹಾಗೂ ಸಹಕಾರ ನೀಡುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಕಲಾವಿದ ಕಿರಾಡಿಯವರು ತಾನು ಬೆಳೆಯುವುದರೊಂದಿಗೆ ಎಲ್ಲಾ ಕಲಾವಿದರು ಬೆಳೆಯಬೇಕೆಂಬ ಉದ್ದೇಶದಲ್ಲಿ ಸಹಕಾರ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಹೈದರಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕೃಷ್ಣಪ್ರಸಾದ್ ಸಮೂಹ ಸಂಸ್ಥೆಯ ಮಾಲಕ ಸಂಪತ್ ಕುಮಾರ್ ಶೆಟ್ಟಿ,ಗಿಳಿಯಾರು ಜನಸೇವಾ ಟ್ರಸ್ಟ್ ನ ವಸಂತ್ ಗಿಳಿಯಾರ್, ರವಿ ಕೊಟ್ಟಾರ ಗಸ್ತಿ, ರಾಮಕೃಷ್ಣ ಮರಾಟೆ, ಶುಭ ಹಾರೈಸಿ ಮಾತನಾಡಿದರು.

ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಮಂದಾರ್ತಿ ದುರ್ಗಾ ಸಭಾಭವನದ ಮಾಲಕ ವಿಠಲ ಶೆಟ್ಟಿ, ಶೇಡಿಕೊಡ್ಲು, ಉದ್ಯಮಿ ಪ್ರಶಾಂತ್ ಮೊಗವೀರ ವೇದಿಕೆಯಲ್ಲಿದ್ದರು.
ಕಿರಾಡಿ ಯಕ್ಷ ನಕ್ಷತ್ರ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಐರ್‌ಬೈಲ್ ಆನಂದ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭ ಶ್ರೀಮತಿ ಸುಮತಿ ಶೆಡ್ತಿ ಮುನಿಯಾಲು, ಲಲಿತಾ ಗಣಪತಿ ಭಟ್ ಕಣ್ಣಿಮನೆ, ಯಕ್ಷಗಾನ ಪ್ರಸಂಗಕರ್ತ ರಮೇಶ್ ಮಂಜು, ಕಲಾವಿದರಾದ ಶಿವಾನಂದ ಕೋಟ, ರಮೇಶ್ ಭಂಡಾರಿ, ಮಹಮ್ಮದ್ ಗೌಸ್, ಮೊಳಹಳ್ಳಿ ಕೃಷ್ಣ, ಕೃಷ್ಣ ಚಕ್ರಮೈದಾನ ಹಾಗೂ ಕಿರಾಡಿ ಪ್ರಕಾಶ್ ದಂಪತಿಯನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ವತಿಯಿಂದ ಮನೆ ಕಟ್ಟಲು ಆರ್ಥಿಕ ಸಹಕಾರ ನೀಡಲಾಯಿತು. ಪ್ರಕಾಶ್ ಕಿರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಪತ್ರಕರ್ತ ಪ್ರಣೂತ್ ಗಾಣಿಗ ವಂದಿಸಿದ್ದು ಪತ್ರಕರ್ತ ಕೆ.ಸಿ.ರಾಜೇಶ್ ನಿರೂಪಿಸಿದರು.






